Advertisement

ಗುಮ್ಮಟನಗರಿಯಲ್ಲಿ ಕಸ ನಿರ್ವಹಣೆ ಲೋಪ: ಲೋಕಾಯುಕ್ತರ ಅಸಮಾಧಾನ

12:55 PM Jan 27, 2023 | keerthan |

ವಿಜಯಪುರ: ಪ್ರವಾಸಿಗರ ಸ್ವರ್ಗ ಎನಿಸಿರುವ ವಿಜಯಪುರ ಮಹಾನಗರದಲ್ಲಿ ಕಸ ವಿಲೇವಾರಿ ಮಾಡುವಲ್ಲಿನ ನಿರ್ಲಕ್ಷ್ಯದ ಬಗ್ಗೆ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ.

Advertisement

ಶುಕ್ರವಾರ ಬೆಳಿಗ್ಗೆ ವಿಜಯಪುರ ಮಹಾನಗರ ಪ್ರದಕ್ಷಿಣೆ ಹಾಕಿದ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ ಅವರು, ನಗರದಲ್ಲಿ ಕಸ ವಿಲೇವಾರಿ ಸ್ಥಿತಿಗತಿ ಪರಿಶೀಲನೆ ಮಾಡಿದ್ದಾರೆ.

ನಗರ ಪ್ರದಕ್ಷಿಣೆ ಬಳಿಕ ನಗರದ ಹೊರ ಭಾಗದಲ್ಲಿರುವ ಕಸ ವಿಲೇವಾರಿ ಮತ್ತು  ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ‌ಭೇಟಿ ವೀಕ್ಷಿಸಿದ ಲೋಕಾಯುಕ್ತರು,  ನಗರದ ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕಸ ವಿಲೇವಾರಿ ತ್ಯಾಜ್ಯ ‌ನಿರ್ವಹಣೆ ಕುರಿತು ನಗರದ ಪ್ರದಕ್ಷಿಣೆ ಹಾಕಿದ್ದೇನೆ. ಜಿಲ್ಲಾ ಕೇಂದ್ರವೂ ಆಗಿರುವ ವಿಜಯಪುರ ಪ್ರವಾಸಿಗರು ಹೆಚ್ಚಿನ‌ ಸಂಖ್ಯೆಯಲ್ಲಿ ಭೇಟಿ ನೀಡುವ ಐತಿಹಾಸಿಕ ಸ್ಮಾರಕಗಳ ನಗರವೂ ಹೌದು. ಆದರೆ ಇಂಥ ನಗರದಲ್ಲಿ ಕಸ ವಿಲೇವಾರಿ ವಿಷಯದಲ್ಲಿ ನಿರ್ಲಕ್ಷ್ಯ ಹಾಗೂ ಸಮಸ್ಯೆ ಕಂಡು ಬಂದಿದೆ ಎಂದು ಅಸಮಾಧಾನ ಹೊರಹಾಕಿದರು.

ಪುರಾತತ್ವ ಇಲಾಖೆ ವ್ಯಾಪ್ತಿಯ ಸ್ಥಳಗಳಲ್ಲೂ ಕಸ ಹಾಕಿರುವುದು ಕಂಡು‌ ಬಂದಿದೆ. ಪಾಲಿಕೆ ಸಿಬ್ಬಂದಿ ಅಲ್ಲಿಯ ಕಸ ತೆಗೆಯಲು ಪುರಾತತ್ವ ಇಲಾಖೆ ಅವಕಾಶ ನೀಡಿಲ್ಲ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇತರೆ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿದರು.

Advertisement

ಕಸ ನಿರ್ವಹಣೆ ಹಾಗೂ ಸಂಸ್ಕರಣೆ ವಿಷಯದ ಯಾವುದೇ ಇಲಾಖೆಯ ಅಧಿಕಾರಿಗಳು ತಪ್ಪು ಮಾಡಿದರೂ ಕ್ರಮ‌ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ನಗರ‌ ಹಾಗೂ ಜಿಲ್ಲೆಯಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ‌ ತೆಗೆದು ಕೊಳ್ಳಲಾಗುತ್ತದೆ. ಐತಿಹಾಸಿಕ ನಗರವಾದ ವಿಜಯಪುರ ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡುವ ಕಾರಣ ನಗರವನ್ನು ಸುಂದರವಾಗಿ ಇಡುವಲ್ಲಿ ಮಹಾನಗರ ಹಾಗೂ ಜಿಲ್ಲೆಯ ಜನತೆ ಜವಾಬ್ದಾರಿ ನಿಭಾಯಿಸಬೇಕು. ಕಸ‌‌ ನಿರ್ವಹಣೆ ಕುರಿತು ಜನರ ಸಹಭಾಗಿತ್ವ, ಸಹಕಾರ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತರಾಬೇಕು. ಸ್ಮಾರಕಗಳು, ರಸ್ತೆ, ಚರಂಡಿ ಅಂತೆಲ್ಲ ನೋಡದೇ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ಜನರೂ ಬಿಡಬೇಕು ಎಂದು ಸೂಚಿಸಿದರು.

ವಿಜಯಪುರ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗತ್ತಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ , ವಿಜಯಪುರ ತಹಶೀಲ್ದಾರ ಸಿದ್ದರಾಯ ಭೋಸಗಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next