Advertisement

ಕಸ ಸಂಗ್ರಹ; ಬಾಹ್ಯ ಏಜೆನ್ಸಿಯಿಂದ ಪರಿಶೀಲನೆ

04:18 PM Jul 31, 2022 | Team Udayavani |

ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಮನೆ ಕಸ ಸಂಗ್ರಹಣಾ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದು, ಪಾಲಿಕೆ ಅಧಿಕಾರಿಗಳು ಬಾಹ್ಯ ಏಜೆನ್ಸಿ ಮೂಲಕ ರ್‍ಯಾಂಡಮ್‌ ಆಗಿ ಪರಿಶೀಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸರ್ಕ್ನೂಟ್‌ ಹೌಸ್‌ನಲ್ಲಿ ನಗರದ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಎಲ್‌ಇಡಿ ಬೀದಿ ದೀಪ ಅಳವಡಿಕೆಯ ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭವಾಗುವವರೆಗೂ ಜಿಲ್ಲಾಧಿಕಾರಿ, ಮೇಯರ್‌, ಆಯುಕ್ತರು ಪ್ರತಿ ವಾರ ಸಭೆ ನಡೆಸಬೇಕು. ಚನ್ನಮ್ಮ ವೃತ್ತದಿಂದ ಬಿಡ್ನಾಳದವರೆಗೆ ಫೈಓವರ್‌ ನಿರ್ಮಿಸಲು 300 ಕೋಟಿ ರೂ. ಪ್ರಸ್ತಾವನೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ವಿಸ್ತೃತ್ವ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಜ್ಯ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳು 15 ದಿನಗಳೊಳಗೆ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆ ನಡೆಸಿ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು ಎಂದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ರಸ್ತೆ ಕಾಮಗಾರಿ ಸಂದರ್ಭದಲ್ಲಿ ವಿವಿಧ ಕೊಳವೆ ಮಾರ್ಗ, ಒಎಫ್‌ಸಿ ಮತ್ತಿತರ ಕೇಬಲ್‌ ಅಳವಡಿಸುವ ಇಲಾಖೆ ಅಥವಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಪದೇ ಪದೇ ರಸ್ತೆಗಳಿರ್ಯಾಗುವ ಹಾನಿ ತಪ್ಪಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ವಿವಿಧ ಇಲಾಖೆಗಳ ಪರವಾನಗಿಗಳನ್ನು ಪಡೆಯದ, ನಿಯಮ ಉಲ್ಲಂಘಿಸಿದ ಕೈಗಾರಿಕೆಗಳಿಗೆ ನೋಟಿಸ್‌ ನೀಡಿ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿರುವ ಕೈಗಾರಿಕೆಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಡಿಸಿಗೆ ಸೂಚಿಸಿದರು.

Advertisement

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಅವಳಿನಗರದಲ್ಲಿ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ನಾಗರಿಕರಿಂದ ಪ್ರತಿನಿತ್ಯ ದೂರುಗಳು ಬರುತ್ತಿವೆ. ಒಳಚರಂಡಿ ಮಾರ್ಗ ಬದಲಿಸಲು ಸರ್ಕಾರ ಹಣಕಾಸು ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಮೇಯರ್‌ ಈರೇಶ ಅಂಚಟಗೇರಿ, ಶಾಸಕ ಅಮೃತ ದೇಸಾಯಿ, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ, ಎಸ್ಪಿ ಲೋಕೇಶ ಜಗಲಾಸರ್‌, ಡಿಸಿಪಿ ಸಾಹಿಲ್‌ ಬಾಗ್ಲಾ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧೀಕ್ಷಕ ಎಂಜಿನಿಯರ್‌ ಶಿವಾನಂದ ನಾಯ್ಕ, ಇಇ ಆರ್‌.ಸಿ. ಹುರಕಡ್ಲಿ, ಎಸಿ ಅಶೋಕ ತೇಲಿ, ಸ್ಮಾರ್ಟ್‌ ಸಿಟಿ ಅಧಿಕಾರಿ ಅಜೀಜ್‌ ದೇಸಾಯಿ, ಶಶಿಧರ್‌ ಮಾಡ್ಯಾಳ, ಪ್ರಕಾಶ ನಾಶಿ, ಸಂತೋಷ ಹಿರೇಮಠ ಇದ್ದರು.

ಮೇ 20ರಂದು ಬಾಡ ಗ್ರಾಮದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಧಾರವಾಡ ತಾಲೂಕಿನ ಐವರ ವಾರಸುದಾರರಾದ ಮನಗುಂಡಿಯ ಸಾವಿತ್ರಿ ಅಂಗಡಿ, ನಿಗದಿಯ ವಿಜಯಲಕ್ಷ್ಮೀ ದಾಸನಕೊಪ್ಪ, ಬಸವರಾಜ ದಾಸನಕೊಪ್ಪ, ಗೋವನಕೊಪ್ಪದ ಚನ್ನಬಸಪ್ಪ ತೋಟದ, ಬೆನಕನಕಟ್ಟಿಯ ಪವಿತ್ರಾ ಹಿರೇಮಠ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ತಲಾ 5 ಲಕ್ಷ ರೂ. ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next