Advertisement

ತುಂಬಿದ ಗಂಜಿಗುಂಟೆ ರೆಡ್ಡಿ ಕೆರೆ ಪ್ರವಾಸಿಗರ ಆಕರ್ಷಣೆ

05:05 PM Aug 08, 2022 | Team Udayavani |

ಶಿಡ್ಲಘಟ್ಟ: ಕರ್ನಾಟಕದ ಊಟಿಯೆಂದೇ ಖ್ಯಾತಿ ಪಡೆದ ನಂದಿ ಗಿರಿಧಾಮ ಇರುವ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆ ಒಂದು ರೀತಿಯ ಮಿನಿ ಜೋಗ ಜಲಪಾತವಾಗಿ ಪರಿವರ್ತನೆಗೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Advertisement

ತಾಲೂಕಿನ ಗಂಜಿಗುಂಟೆ ಗ್ರಾಪಂನ ರೆಡ್ಡಿ ಕೆರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದೆ. ಕೋಡಿಯಿಂದ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಜೋಗ ಜಲಪಾತ ನೆನಪಿಸುತ್ತದೆ. ನೀರಿನ ವೈಭವವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಎಂದು ಈಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ರೆಡ್ಡಿಕೆರೆಯನ್ನು ಪ್ರವಾಸಿ ತಾಣ ಮಾಡಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ.

ತೀರಾ ಹಿಂದುಳಿದ ಪ್ರದೇಶ: ಶಿಡ್ಲಘಟ್ಟ ತಾಲೂಕಿನ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಗಂಜಿಗುಂಟೆ ಗ್ರಾಮ ರೆಡ್ಡಿಕೆರೆಯ ಜಲಧಾರೆಯಿಂದ ತಾಲೂಕಿನಲ್ಲಿ ಖ್ಯಾತಿ ಪಡೆದುಕೊಂಡಿದೆ. ಈಗಾಗಲೇ ರೆಡ್ಡಿಕೆರೆಗೆ ಸಹಸ್ರಾರು ಮಂದಿ ಬಂದು ಇಲ್ಲಿನ ನೈಸರ್ಗಿಕ ಸಂಪತ್ತು, ಬೆಟ್ಟಗುಡ್ಡಗಳ ಸಾಲಿನ ಮಧ್ಯೆ ಕುಳಿತು ಮಿನಿಜೋಗ ಜಲಪಾತ ಎಂದು ಖ್ಯಾತಿ ಹೊಂದಿರುವ ಕೆರೆಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಲೂಕು ಆಡಳಿತ ಗಮನಹರಿಸಲಿ: ರೆಡ್ಡಿಕೆರೆಯನ್ನು ಪ್ರವಾಸೋದ್ಯಮ ಕೇಂದ್ರವಾಗಲು ಎಲ್ಲಾ ರೀತಿಯ ಅವಕಾಶಗಳು ಇದ್ದರೂ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅಭಿವೃದ್ಧಿಗೊಳಿಸಲು ಮೀನಮೇಷ ಎಣಿಸುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ನರೇಗಾ ಯೋಜನೆ ಬಳಸಿಕೊಂಡು ರೆಡ್ಡಿಕೆರೆ ಅಭಿವೃದ್ಧಿಗೊಳಿಸಲು ಗ್ರಾಪಂ ಅಧಿಕಾರಿಗಳು ಮುಂದಾಗಬೇಕಾಗಿದೆ.

ಜಲಧಾರೆ: ಮಳೆಯಿಂದ ತುಂಬಿ ತುಳುಕಾಡುತ್ತಿರುವ ಕೆರೆಯ ನೀರು ಧುಮಕುತ್ತಿರುವ ದೃಶ್ಯ ನೋಡಿದರೆ ಜೋಗ ಜಲಪಾತದ ಅನುಭವವಾಗುತ್ತದೆ. ಈ ಭಾಗದಲ್ಲಿ ಸುತ್ತಮುತ್ತಲ ಪ್ರದೇಶ ಹಸಿರುಮಯವಾಗಿದೆ. ಎಲ್ಲಿ ನೋಡಿದರೂ ಬೆಟ್ಟಗುಡ್ಡೆಗಳ ಸಾಲು. ಇದರ ಮಧ್ಯೆ ಹರಿಯುತ್ತಿರುವ ಕೋಡಿ ನೀರು ಸ್ಥಳೀಯರಿಗೆ ನಿಜ ಅರ್ಥದಲ್ಲಿ ಭೂಲೋಕದ ಸ್ವರ್ಗ ಎನಿಸುತ್ತದೆ. ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷವಾಗಿ ಆರೋಗ್ಯ ಸಚಿವರು ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆಯನ್ನು ಪ್ರವಾಸೋದ್ಯಮದ ಕೇಂದ್ರವಾಗಿ ಅಭಿವೃದ್ಧಿಗೊಳಿಸಿ ಹಿಂದುಳಿದ ಪ್ರದೇಶದ ಪ್ರಗತಿಗೆ ಮುಂದಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Advertisement

ಪ್ರವಾಸಿ ತಾಣ ಮಾಡಿ : ಶಿಡ್ಲಘಟ್ಟ ತಾಲೂಕಿನ ಗಂಜಿಗುಂಟೆ ರೆಡ್ಡಿಕೆರೆ ಪ್ರಕೃತಿಯ ಸೌಂದರ್ಯ ತನ್ನ ಮಡಲಲ್ಲಿಟ್ಟು ಕೊಂಡಿದೆ. ಸುತ್ತಮುತ್ತಲು ಬೆಟ್ಟಗುಡ್ಡಗಳ ಸಾಲು, ಹಸಿರು ವಾತಾವರಣ ಕಂಡು ಬರುತ್ತಿದೆ. ಇಲ್ಲಿನ ಕೆರೆಯಲ್ಲಿ ಬೋಟಿಂಗ್‌ ಮಾಡಲು ಸಹ ಉತ್ತಮ ಅವಕಾಶಗಳಿವೆ. ಆದರೆ, ಈ ಸ್ಥಳವನ್ನು ಪ್ರವಾಸೋದ್ಯಮ ಕೇಂದ್ರ ಮಾಡಲು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಬೇಕಾಗಿದೆ.

ರೆಡ್ಡಿಕೆರೆ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಸುತ್ತಮುತ್ತ ಲಿನ ಜನ ಇಲ್ಲಿಗೆ ಆಗಮಿಸಿ ಕೆರೆಯ ಸೌಂದರ್ಯ ಸವಿಯುತ್ತಾರೆ. ತಾಲೂಕು, ಜಿಲ್ಲಾಡಳಿತ ಪ್ರವಾಸಿ ತಾಣ ಮಾಡಿದರೆ, ನಮ್ಮ ಗ್ರಾಪಂನಿಂದ ಸಹಕಾರ ಕೊಡಲು ಸಿದ್ಧರಾಗಿದ್ದೇವೆ. ನರಸಿಂಹಮೂರ್ತಿ, ಉಪಾಧ್ಯಕ್ಷ, ಗಂಜಿಗುಂಟೆ ಗ್ರಾಪಂ.

ಗಂಜಿಗುಂಟೆ ಗ್ರಾಮದ ರೆಡ್ಡಿಕೆರೆಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಕೆರೆಯನ್ನು ಪ್ರವಾಸೋದ್ಯ ಮದ ಕೇಂದ್ರವಾಗಿ ಪರಿವರ್ತನೆ ಮಾಡುವ ಆಲೋಚನೆ ಇದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ರೆಡ್ಡಿಕೆರೆ ಸ್ವರೂಪ ಬದಲಾವಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿ, ತಾಲೂಕು ಮಾತ್ರವಲ್ಲದೆ, ಜಿಲ್ಲೆಯ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿ, ಕೆರೆ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮಹೇಶ್ಪಿಡಿಒ, ಗಂಜಿಗುಂಟೆ ಗ್ರಾಪಂ

 

ಎಂ..ಅಬ್ದುಲ್ವಹಾಬ್

Advertisement

Udayavani is now on Telegram. Click here to join our channel and stay updated with the latest news.

Next