ಮಂಗಳೂರು: ಉತ್ತರ ಭಾರತದ ಹಿಮಾಚಲ ಪ್ರದೇಶದಿಂದ ರೈಲು ಮೂಲಕ ನಿಷೇಧಿತ ಗಾಂಜಾ- ಚರಸ್ ಗಳನ್ನು ತಂದು ಮಂಗಳೂರಿನ ಉದ್ಯಮಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುಡಾರಿ ಸುಕೇತ್ ಕಾವ (33 ವ), ಕಾರ್ಕಳ ಆನೆಕೆರೆ ನಿವಾಸಿ ಸುನಿಲ್ (32) ಮತ್ತು ತಮಿಳುನಾಡು ರಾಜ್ಯದ ಕೊಯಂಬತ್ತೂರು ನಿವಾಸಿ ಅರವಿಂದ (24 ) ಎಂದು ಗುರುತಿಸಲಾಗಿದೆ.
ಇವರುಗಳು ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾಲಿ ಎಂಬ ಹೆಸರಿನ ಸುಮಾರು 300ಕ್ಕಿಂತ ಹೆಚ್ಚು ಹಳ್ಳಿಗಳಿರುವ ಗುಡ್ಡಗಾಡು ಪ್ರದೇಶದಲ್ಲಿ ನೈರ್ಸಗಿಕವಾಗಿ ಬೆಳೆಯುತ್ತಿದ್ದ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಮತ್ತು ಗಾಂಜಾದಿಂದ ತಯಾರಿಸಿದ ಚರಸ್ ನ್ನು ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿಗೆ ದಿನನಿತ್ಯ ಸಾಮಾಗ್ರಿಗಳನ್ನು ಸಾಗಿಸುವ ಗುಡ್ಡಗಾಡು ಜನರಿಂದ ತಾವು ಟ್ರಕ್ಕಿಂಗ್, ಪ್ರವಾಸಿಗರು ಹಾಗೂ ಗೈಡ್ ಎಂದು ನಂಬಿಸಿ ಕಡಿಮೆ ಹಣಕ್ಕೆ ಖರೀದಿ ಮಾಡುತ್ತಿದ್ದರು.
ಇದನ್ನೂ ಓದಿ:ಮೂಡಿಗೆರೆ ಕ್ಷೇತ್ರದಲ್ಲಿ ‘ಕೈ’ ಕಲಹ: ನಯನ ಮೋಟಮ್ಮ ವಿರುದ್ಧ ‘ಭಿನ್ನ’ರ ಸಭೆ
ಬಳಿಕ ಪೊಲೀಸರಿಗೆ ಸಂಶಯ ಬಾರದ ಹಾಗೆ ಗಾಂಜಾ ಮತ್ತು ಚರಸ್ ನೊಂದಿಗೆ ರೈಲಿನಲ್ಲಿ ಪ್ರಯಾಣಿಸಿಕೊಂಡು ಒಂದು ವ್ಯವಹಾರಸ್ಥರು ಮತ್ತು ಉದ್ಯಮಿಗಳಿಗೆ ಪೂರೈಸುತ್ತಿದ್ದರು. ಅವರ ಮೂಲಕ ಉತ್ಕೃಷ್ಟ ಚರಸ್ ಮತ್ತು ಗಾಂಜಾವನ್ನು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿ / ಸಾರ್ವಜನಿಕರಿಗೆ ಪೂರೈಸಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದರು.
ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿದ ಸೆನ್ ಕ್ರೈಂ ಪೊಲೀಸರು, 500 ಗ್ರಾಂ ತೂಕದ ಚರಸ್ ಮತ್ತು 1 ಕೆ.ಜಿ ತೂಕದ ಗಾಂಜಾವನ್ನು ಹಾಗೂ ಇವುಗಳನ್ನು ಸಾಗಾಟಕ್ಕೆ ಬಳಸಿದ ರಿಡ್ಜ್ ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ಸೇರಿ ಒಟ್ಟು 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿದ್ದಾರೆ.