Advertisement

ಐಸಿಸಿಗೆ ಗಂಗೂಲಿ, ಬಿಸಿಸಿಐಗೆ ಶಾ ಅಧ್ಯಕ್ಷ? ಅ. 18ರಂದು ಬಿಸಿಸಿಐ ಚುನಾವಣೆ ಸಾಧ್ಯತೆ

11:09 PM Sep 21, 2022 | Team Udayavani |

ಮುಂಬಯಿ: ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಕಡ್ಡಾಯ ವಿಶ್ರಾಂತಿ ನಿಯಮವನ್ನು ಬದಲಿಸಲು ಬಿಸಿಸಿಐಗೆ ಒಪ್ಪಿಗೆ ಕೊಟ್ಟಿದೆ. ಅಲ್ಲಿಗೆ ಸೌರವ್‌ ಗಂಗೂಲಿ ಅಧ್ಯಕ್ಷರಾಗಿ, ಜಯ್‌ ಶಾ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ.

Advertisement

ಅ. 18ರಂದು ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯುವ ಸಾಧ್ಯತೆಯಿದೆ. ಈ ವೇಳೆ ಚುನಾವಣೆಯೂ ನಡೆಯಲಿದ್ದು, ಈ ಇಬ್ಬರ ಪುನರಾಯ್ಕೆ ಸುಗಮ ಎಂದೇ ಭಾವಿಸಲಾಗಿದೆ.

ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ. ಆದರೆ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಅಗ್ರ ನಾಯಕತ್ವ ಸಂದೇಶಗಳನ್ನು ರವಾನಿಸಿದ್ದು, ಚುನಾವಣೆಗೆ ಸಿದ್ಧವಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸೆಪ್ಟೆಂಬರ್‌ ಅಂತ್ಯಕ್ಕೆ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಗಳ ಅವಧಿ ಮುಗಿಯಲಿದೆ. ಮುಂದಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿದೆ.

ಸೆ. 14ಕ್ಕೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಕಡ್ಡಾಯ ವಿಶ್ರಾಂತಿ ನಿಯಮವನ್ನು ಸತತ 6 ವರ್ಷಗಳ ಅಧಿಕಾರಾವಧಿ ಬದಲು, ಸತತ 12 ವರ್ಷಗಳಿಗೆ ಏರಿಸಿದೆ. ಹೀಗಾಗಿ ಇನ್ನೊಂದು ಅವಧಿಗೆ ಗಂಗೂಲಿ, ಜಯ್‌ ಶಾ ಮುಂದುವರಿಯಲು ಅವಕಾಶವಿದೆ (ಅನ್ಯರ ಸ್ಪರ್ಧೆಯಿಲ್ಲದ ಪಕ್ಷದಲ್ಲಿ).

ಜಯ್‌ ಶಾ ಅಧ್ಯಕ್ಷ?
ಬಿಸಿಸಿಐಗೆ ಜಯ್‌ ಶಾ ಅಧ್ಯಕ್ಷರಾಗಬಹುದು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಬೆಂಬಲವೂ ಇದೆ ಎನ್ನಲಾಗಿದೆ. ಇದುವರೆಗೆ ಅಧ್ಯಕ್ಷರಾಗಿದ್ದ ಸೌರವ್‌ ಗಂಗೂಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದೆ. ಐಸಿಸಿಯಲ್ಲೂ ಗಂಗೂಲಿ ಅಧ್ಯಕ್ಷರಾಗುವುದಕ್ಕೆ ಬಹಳ ಬೆಂಬಲವಿದೆ.

Advertisement

ಭಾರತೀಯರೊಬ್ಬರು ಐಸಿಸಿಗೆ ಅಧ್ಯಕ್ಷರಾಗುವುದರಿಂದ ಹಲವು ಕೋನಗಳಲ್ಲಿ ಲಾಭವಿದೆ. ಐಸಿಸಿಗೆ ಬಿಸಿಸಿಐ ಮೇಲೆ ನಿಯಂತ್ರಣ ಸಾಧಿಸಲು ಆಗಲಿದೆ. ಹಾಗೆಯೇ ಬಿಸಿಸಿಐ ತನ್ನ ಹಿತ ಸಾಧಿಸಿಕೊಳ್ಳಲು ಐಸಿಸಿ ಬೆಂಬಲ ಸಹಜವಾಗಿಯೇ ಸಿಗಲಿದೆ. ಮುಖ್ಯವಾಗಿ ಐಪಿಎಲ್‌ ಕೂಟಕ್ಕೆ ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ 2 ತಿಂಗಳನ್ನು ಐಸಿಸಿ ಮೀಸಲಾಗಿಡುವಂತೆ ಮಾಡಲು ಬಿಸಿಸಿಐ ಯತ್ನಿಸುತ್ತಿದೆ. ಗಂಗೂಲಿ ಆ ಸ್ಥಾನಕ್ಕೆ ಹೋದರೆ ಅದು ಸಲೀಸಾಗಿ ನೆರವೇರಲಿದೆ.

ಐಸಿಸಿ ಮೇಲೆ ಬಿಸಿಸಿಐ ಆರ್ಥಿಕವಾಗಿ ಬಹಳ ಪ್ರಭಾವ ಹೊಂದಿದೆ. ಹೀಗಾಗಿ ಪರೋಕ್ಷವಾಗಿ ಐಸಿಸಿಯನ್ನು ನಿಯಂತ್ರಿಸುತ್ತಿದೆ. ಬಿಸಿಸಿಐ ಮೂಲದವರೇ ಅಧ್ಯಕ್ಷರಾದರೆ, ಭಾರತೀಯ ಮಾರುಕಟ್ಟೆ ಆಕ್ರಮಿಸಲು ಐಸಿಸಿಗೆ ದಾರಿಗಳು ಹೊಳೆಯಬಹುದು! ಬಿಸಿಸಿಐನ ಒತ್ತಡದಿಂದಲೂ ಪಾರಾಗಬಹುದು ಎಂಬ ಲೆಕ್ಕಾಚಾರವೂ ಇಲ್ಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next