Advertisement

ಭಾರತೀಯ ಕ್ರಿಕೆಟಿಗೆ ಒಳಿತು ಮಾಡಲು ಸಿಕ್ಕ‌ ಅವಕಾಶ: ಗಂಗೂಲಿ

10:33 AM Oct 16, 2019 | sudhir |

ಮುಂಬಯಿ : “ಕ್ರಿಕೆಟಿಗೆ ಒಳ್ಳೆಯದನ್ನು ಮಾಡಲು ದೊರೆತ ಅತ್ಯುತ್ತಮ ಅವಕಾಶ ಇದಾಗಿದೆ’ ಎಂಬುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿರುವ‌ ಸೌರವ್‌ ಗಂಗೂಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದರ ಆಯ್ದ ಭಾಗ ಇಲ್ಲಿದೆ.

Advertisement

ದೇಶದ ಕ್ರಿಕೆಟ್‌ ಮಂಡಳಿಯ ಚುಕ್ಕಾಣಿ ಹಿಡಿಯಲಿದ್ದೀರಿ, ಏನನಿಸುತ್ತಿದೆ?
ದೇಶದ ಕ್ರಿಕೆಟಿಗೆ ಒಳ್ಳೆಯದನ್ನು ಮಾಡಲು ಲಭಿಸಿದ ಅತ್ಯುತ್ತಮ ಅವಕಾಶ ಇದಾಗಿದೆ. ಕಳೆದ 3 ವರ್ಷ ಗಳಿಂದ ಬಿಸಿಸಿಐ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿಲ್ಲ. ನಾನಾ ಕಾರಣಗಳಿಂದ ಮಂಡಳಿಯ ಇಮೇಜ್‌ ಹಾಳಾಗಿದೆ. ಇದನ್ನೆಲ್ಲ ಹಂತ ಹಂತವಾಗಿ ಸರಿಪಡಿಸುತ್ತ ಮುಂದೆ ಸಾಗಬೇಕಿದೆ.

ನಿಮ್ಮ ಕಾರ್ಯಯೋಜನೆ ಹೇಗೆ?
ಭಾರತೀಯ ಕ್ರಿಕೆಟಿನ ಎಲ್ಲ ಹೂಡಿಕೆದಾರರನ್ನು ಭೇಟಿಯಾಗಿ ಅವರ ಸಲಹೆ, ಮಾರ್ಗದರ್ಶನ ಪಡೆಯಬೇಕಿದೆ. ಕಳೆದ 33 ತಿಂಗಳಿಂದ ಮಂಡಳಿಯ ಉಸ್ತುವಾರಿ ವಹಿಸಿದ್ದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಏನನ್ನು ಮಾಡಿಲ್ಲವೋ ಅದನ್ನೆಲ್ಲ ನನ್ನ ಕಾರ್ಯಾವಧಿಯಲ್ಲಿ ನಡೆಸಿಕೊಡಬೇಕಿದೆ.

ಇದರ ಮೊದಲ ಹೆಜ್ಜೆ ಎಲ್ಲಿಂದ ಆರಂಭವಾಗುತ್ತದೆ?
ಪ್ರಥಮ ದರ್ಜೆ ಕ್ರಿಕೆಟಿಗರಿಂದ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಕಳೆದ 3 ವರ್ಷಗಳಿಂದ ಇದನ್ನು ನಾನು ಸಿಒಎ ಮುಂದೆ ಹೇಳುತ್ತ ಬಂದರೂ ಇದನ್ನು ಅವರು ಕೇಳಿಸಿಕೊಳ್ಳಲಿಲ್ಲ.

ಅವಿರೋಧ ಆಯ್ಕೆಯಿಂದ ನಿಮ್ಮ ಜವಾಬ್ದಾರಿ ಹೆಚ್ಚಿದೆ ಅನಿಸುತ್ತಿದೆಯೇ?
ಆಯ್ಕೆ ಅವಿರೋಧವಾಗಿರಲಿ, ಅಲ್ಲದಿರಲಿ… ಬಿಸಿಸಿಐ ಎನ್ನುವುದು ಜಾಗತಿಕ ಕ್ರಿಕೆಟಿನ ಅತ್ಯಂತ ದೊಡ್ಡ ಸಂಸ್ಥೆ, ಸಂಘಟನೆ. ಆರ್ಥಿಕವಾಗಿ ಭಾರತವೇ ವಿಶ್ವ ಕ್ರಿಕೆಟಿನ ಪವರ್‌ಹೌಸ್‌. ಹೀಗಾಗಿ ಇದೊಂದು ದೊಡ್ಡ ಸವಾಲು.

Advertisement

ಗಾಡ್‌ಫಾದರ್‌ ದಾಲಿ¾ಯ ಅಲಂಕರಿಸಿದ ಸ್ಥಾನ ನಿಮ್ಮದಾಗಲಿದೆೆ, ಏನನಿಸುತ್ತಿದೆ?
ಇದನ್ನು ನಾನು ಕಲ್ಪಿಸಿಯೂ ಇರಲಿಲ್ಲ. ಅವರು ನನಗೆ ತಂದೆ ಸಮಾನ. ಮಂಡಳಿಯ ಒಳಗಿನ ಕಚ್ಚಾಟಗಳನ್ನೆಲ್ಲ ಅವರು ಸಮರ್ಥವಾಗಿ ನಿಭಾಯಿಸಿದ್ದರು. ಹಾಗೆಯೇ ಎನ್‌. ಶ್ರೀನಿವಾಸನ್‌, ಅನುರಾಗ್‌ ಠಾಕೂರ್‌ ಕೂಡ ಯಶಸ್ವಿ ಆಡಳಿಗಾರರಾಗಿದ್ದರು.

ನೀವು ಭಾರತ ತಂಡದ ನಾಯಕರಾಗಿದ್ದವರು. ಈಗಿನ ಹೊಸ ಕ್ಯಾಪ್ಟನ್ಸಿ ಬಗ್ಗೆ ಏನು ಹೇಳುತ್ತೀರಿ?
ಭಾರತೀಯ ಕ್ರಿಕೆಟ್‌ ತಂಡದ ನಾಯಕತ್ವಕ್ಕಿಂತ ಮಿಗಿಲಾದುದಿಲ್ಲ.

ಕಳೆದ ರಾತ್ರಿ ಗೃಹ ಸಚಿವರೊಂದಿಗೆ ಮಾತಾಡಿದ್ದೀರಿ. ಬಂಗಾಲದಲ್ಲಿ ಬಿಜೆಪಿ ಅಭಿಯಾನ ನಡೆಸುವ ಬಗ್ಗೆ ನಿಮ್ಮಲ್ಲಿ ಕೇಳಿಕೊಳ್ಳಲಾಯಿತೇ?
ಇಲ್ಲ. ನನ್ನಲ್ಲಿ ಯಾರೂ ಏನನ್ನೂ ಕೇಳಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next