ದೆಹಲಿ: ಕುಖ್ಯಾತ ಗ್ಯಾಂಗ್ ಸ್ಟರ್ ಟಿಲ್ಲು ತಾಜಪುರಿಯಾನನ್ನು ತಿಹಾರ್ ಜೈಲಿನೊಳಗೆ ಹಲ್ಲೆಗೈದು ಹತ್ಯೆಗೈದಿರುವ ಘಟನೆ ಮಂಗಳವಾರ (ಮೇ 2 ಎಂದು) ನಡೆದಿದೆ.
ಗ್ಯಾಂಗ್ ಸ್ಟರ್ ಜಿತೇಂದ್ರ ಗೋಗಿ ಅವರ ಹತ್ಯೆ ಪ್ರಕರಣದ ಪ್ರಮುಖ ರೂವಾರಿಯಾಗಿರುವ ಟಿಲ್ಲು ತಾಜಪುರಿಯಾ ತಿಹಾರ್ ಜೈಲಿನಲ್ಲಿದ್ದರು. ಮಂಗಳವಾರ ಮುಂಜಾನೆ ಅದೇ ಜೈಲಿನಲ್ಲಿದ್ದ ಇಬ್ಬರು ಟಿಲ್ಲು ಅವರ ಮೇಲೆ ಕಬ್ಭಿಣದ ರಾಡ್ ನಿಂದ ಹಲ್ಲೆಗೈದು ಹತ್ಯೆಗೈದಿದ್ದಾರೆ.
ಘಟನೆ ಬಗ್ಗೆ ತಿಳಿದ ಪೊಲೀಸರು ಟಿಲ್ಲುನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆದಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ವಿಚಾರಣೆ ಆರಂಭಿಸಿದ ಪೊಲೀಸರು ಈ ಕೃತ್ಯವನ್ನು ಎಸಗಿರುವುದು ಟಿಲ್ಲು ತಾಜಪುರಿಯಾ ಅವರ ಎದುರಾಳಿ ಗ್ಯಾಂಗ್ ಸ್ಟರ್ ಜಿತೇಂದ್ರ ಗೋಗಿ ಅವರ ತಂಡದಲ್ಲಿ ಗುರುತಿಸಿಕೊಂಡಿರುವ ಯೋಗೇಶ್ ಅಲಿಯಾಸ್ ಟುಂಡಾ ದೀಪಕ್ ಟೀಟರ್ ಎಂದು ಗೊತ್ತಾಗಿದೆ.
Related Articles
ಮತ್ತೋರ್ವ ಖೈದಿ ರೋಹಿತ್ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಸದ್ಯ ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ 2021 ರ ಸೆಪ್ಟೆಂಬರ್ 24 ರಂದು ವಕೀಲರ ಸೋಗಿನಲ್ಲಿ ಇಬ್ಬರು ಬಂದು ಜಿತೇಂದ್ರ ಗೋಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಸಂಚಿನ ರೂವಾರಿ ಟಿಲ್ಲು ತಾಜಪುರಿಯಾ ಆಗಿದ್ದ. ಇದಾದ ಬಳಿಕ ಈ ಎರಡು ಗ್ಯಾಂಗ್ ಗಳ ನಡುವೆ ಆಗಾಗ ಘರ್ಷಣೆಗಳು ಉಂಟಾಗುತ್ತಿತ್ತು. ಈಗಾಗಲೇ ಈ ಎರಡೂ ಗ್ಯಾಂಗ್ ನ ಸದಸ್ಯರನ್ನು ಗುತ್ತಿಗೆ ಹತ್ಯೆ, ಸುಲಿಗೆ, ದರೋಡೆ ಮತ್ತು ಕಾರು ಕಳ್ಳತನ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.