Advertisement

Gangolli: 12 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜೆಟ್ಟಿಯಲ್ಲಿ ಕುಸಿತ

05:44 PM Sep 01, 2024 | Team Udayavani |

ಗಂಗೊಳ್ಳಿ: ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜೆಟ್ಟಿಯಲ್ಲಿ ಕುಸಿತ ಕಂಡು ಬಂದಿದ್ದು, ಹರಾಜು ಪ್ರಾಂಗಣದ ಸಮೀಪ ಭಾರೀ ಬಿರುಕು ಕಾಣಿಸಿಕೊಂಡಿದೆ.

Advertisement

ಆತಂಕ
ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್‌ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಸುಮಾರು ಮೂರು ವರ್ಷ ಕಳೆಯುತ್ತಿದ್ದು, ಈ ನಡುವೆ ಹೊಸದಾಗಿ ಬಂದರಿನ ದಕ್ಷಿಣ ದಿಕ್ಕಿನಲ್ಲಿ ನಿರ್ಮಾಣಗೊಂಡಿರುವ ಜೆಟ್ಟಿ ಕೂಡ ಕುಸಿತದ ಭೀತಿಯಲ್ಲಿದೆ. ಹೊಸ ಜೆಟ್ಟಿಯ ವಿವಿಧೆಡೆ ಕುಸಿತ ಕಂಡು ಬಂದಿದ್ದು, ಹರಾಜು ಪ್ರಾಂಗಣದ ಸಮೀಪದ ಕಾಣಿಸಿಕೊಂಡಿರುವ ಭಾರಿ ಬಿರುಕುಗಳು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

ಅಪಾಯದಲ್ಲಿ
ಹೊಸ ಜೆಟ್ಟಿಯ ಅಡಿಯಲ್ಲಿರುವ ಹಳೆ ಜೆಟ್ಟಿಯ ಡಯಾಪ್ರಾಮ್‌ ವಾಲ್‌ ಹೊಸ ಜೆಟ್ಟಿಯ ಪಿಲ್ಲರ್‌ ಮೇಲೆ ಕುಸಿದು ಬೀಳುವ ಸಾಧ್ಯತೆ ಇದ್ದು, ಇದರಿಂದ ಹೊಸ ಜೆಟ್ಟಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ನಡೆದಂತೆ ಆದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜೆಟ್ಟಿ ಕೂಡ ನಾಮಾವಷೇಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ

ಮುನ್ಸೂಚನೆ?
ಹೊಸ ಜೆಟ್ಟಿ ಪ್ರದೇಶದಲ್ಲಿ ಕಂಡು ಬಂದಿರುವ ಕುಸಿತ ಹಾಗೂ ಬಿರುಕುಗಳು ಜೆಟ್ಟಿ ಕುಸಿತದ ಮುನ್ಸೂಚನೆಯೇ ಎಂಬುದು ಮೀನುಗಾರರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಇದು ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಹೊಟ್ಟೆ ಮೇಲೆ ತಣ್ಣೀರ ಬಟ್ಟೆ
ಸದ್ಯದ ಪರಿಸ್ಥಿತಿಯಲ್ಲಿ ಮೀನು ಖಾಲಿ ಮಾಡಲು ದೂರದ ಭಟ್ಕಳ, ಮಲ್ಪೆ ಮೊದಲಾದೆಡೆ ತೆರಳಬೇಕಾದ ಅನಿವಾರ್ಯತೆ ಮೀನುಗಾರರದ್ದು. ಮೀನು ಕಾರ್ಮಿಕರು ಅತಂತ್ರರಾಗಿದ್ದಾರೆ. ಹೀಗೆ ಮುಂದುವರಿದರೆ ಇನ್ನು ಒಂದೆರಡು ವರ್ಷ ಅತಂತ್ರದ ಜತೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ನಿಶ್ಚಿತ ಎನ್ನುತ್ತಾರೆ ಮೀನುಗಾರರು.

Advertisement

ಪರಿಹಾರ ಕ್ರಮ ಕೈಗೊಳ್ಳಿ

ಸರಕಾರ ಮೀನುಗಾರರ ಜೀವ-ಜೀವನದ ಜತೆ ಚೆಲ್ಲಾಟವಾಡಲಾಗುತ್ತಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರವೊದಗಿಸಿ ಮೀನುಗಾರರು ಬದುಕು ಕಟ್ಟಿಕೊಳ್ಳಲು ಕ್ರಮಕೈಗೊಳ್ಳಬೇಕು. ಹಳೆ ಜೆಟ್ಟಿಯ ಡಯಾಪ್ರಾಮ್‌ ವಾಲ್‌ ಕುಸಿತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ. ಹೊಸ ಜೆಟ್ಟಿಯ ಅಡಿಯಲ್ಲಿರುವ ಹಳೆ ಜೆಟ್ಟಿಯ ಡಯಾಪ್ರಮ್‌ ವಾಲ್‌ ಕುಸಿದು ಬೀಳುವ ಸಾಧ್ಯತೆ ಇದೆ. ಹೊಸ ಜೆಟ್ಟಿಗೆ ಅಪಾಯವಾಗುವ ಸಾಧ್ಯತೆ ಇದೆ. -ರಾಮಪ್ಪ ಖಾರ್ವಿ ಮೀನುಗಾರ ಮುಖಂಡ, ಗಂಗೊಳ್ಳಿ

ಜೆಟ್ಟಿ ಕುಸಿತ
ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಹಳೆ ಜೆಟ್ಟಿಯ ಡಯಪ್ರಮ್‌ ವಾಲ್‌ ನಡುವೆ ಕೊಂಡಿಯಾಗಿದ್ದ ರಾಡು ತುಂಡರಿಸಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿತ್ತು. ಹೊಸ ಜೆಟ್ಟಿ ಸಮೀಪದಲ್ಲೇ ಹಳೆ ಜೆಟ್ಟಿಯ ಕಾಂಕ್ರೀಟ್‌ ಸ್ಲಾಬ್‌ ಮತ್ತು ಡಯಾಪ್ರಾಮ್‌ ವಾಲ್‌ ಕುಸಿದು ಬಿದ್ದ ಪರಿಣಾಮ ಜೆಟ್ಟಿ ಪುನರ್‌ ನಿರ್ಮಾಣ ಕಾರ್ಯಕ್ಕೆ ಅಳವಡಿಸಲಾಗಿದ್ದ ಪಿಲ್ಲರ್‌ ಹಾಗೂ ಇನ್ನಿತರ ಕಾಂಕ್ರೀಟ್‌ ಕಾಮಗಾರಿಗೆ ಹಾನಿಯಾಗಿತ್ತು. ಇದೀಗ ಮುಂದುವರಿದ ಭಾಗವಾಗಿ ಹಳೆ ಜೆಟ್ಟಿಯ ಡಯಾಪ್ರಾಮ್‌ ವಾಲ್‌ ಹಾಗೂ ಜೆಟ್ಟಿಯ ಸ್ಲಾಬ್‌ ಹೊಸ ಜೆಟ್ಟಿಯ ಮೇಲೆ ಕುಸಿದು ಬೀಳುವ ಆತಂಕ ಎದುರಾಗಿದೆ.

ಅಂಕಿಅಂಶ
ಈ ಭಾಗದಲ್ಲಿ 40 ದೊಡ್ಡ ಬೋಟುಗಳು, 100ಕ್ಕೂ ಅಧಿಕ ಟ್ರಾಲ್‌ ಬೋಟುಗಳು, ಸಿಂಗಲ್‌ ಬೋಟುಗಳು, ನೂರಾರು 370 ಬೋಟುಗಳು, 300ಕ್ಕೂ ಅಧಿಕ ನಾಡ ದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next