Advertisement

ಗಂಗೊಳ್ಳಿ: ಹೊಸ ಜೆಟ್ಟಿಯನ್ನು ನುಂಗಿದ ಹಳೆ ಜೆಟ್ಟಿ !

03:06 PM Sep 29, 2022 | Team Udayavani |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಸುಮಾರು 12.8 ಕೋ. ರೂ. ವೆಚ್ಚದಲ್ಲಿ ಜೆಟ್ಟಿಯ ಪುನರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಲ್ಲಿ ಹಳೆ ಜೆಟ್ಟಿಯ ಕಾಂಕ್ರೀಟ್‌ ಸ್ಲಾಬ್‌ ಹಾಗೂ ಡಯಾಫ್ರಾಮ್‌ ವಾಲ್‌ ಕುಸಿದು ಬಿದ್ದು ಹೊಸ ಜೆಟ್ಟಿ ಕಾಮಗಾರಿಗೆ ಸಮಸ್ಯೆಯಾಗಿದೆ.

Advertisement

ಹೊಸ ಜೆಟ್ಟಿಯನ್ನು ಕುಸಿದ ಹಳೆ ಜೆಟ್ಟಿ ಅಕ್ಷರಶಃ ತಿನ್ನುತ್ತಿದೆ. ಅತ್ತ ಹಳೆ ಜೆಟ್ಟಿಯ ತೆರವಿಗೆ, ಹೊಸ ಜೆಟ್ಟಿಯನ್ನು ಮತ್ತೆ ಹೊಸ ವಿನ್ಯಾಸದಲ್ಲಿ ತಯಾರಿಸಲು ಹೆಚ್ಚುವರಿ ಮೊತ್ತವೇ ಬೇಕಾಗಬಹುದು ಎನ್ನುವ ಅನುಮಾನ ಕಾಡುತ್ತಿದೆ.

ಪಿಲ್ಲರ್‌ಗೆ ಹಾನಿ

ಸುಮಾರು 50 ಮೀಟರ್‌ ಉದ್ದಕ್ಕೆ ಹಳೆಯ ಜೆಟ್ಟಿ ಕುಸಿದು ಬಿದ್ದು ಹೊಸ ಜೆಟ್ಟಿ ನಿರ್ಮಾಣಕ್ಕೆ ಅಳವಡಿಸಲಾಗಿದ್ದ ಪಿಲ್ಲರ್‌ ಹಾಗೂ ಇನ್ನಿತರ ಕಾಂಕ್ರೀಟ್‌ ಕಾಮಗಾರಿಗೆ ಹಾನಿಯಾಗಿದೆ. ಹೊಸದಾಗಿ ಹಾಕಿದ ಪಿಲ್ಲರ್‌ಗಳು ವಾಲಿಕೊಂಡಿದೆ. ಇದರಿಂದಾಗಿ ಹೊಸ ಜೆಟ್ಟಿಯ ವಾಲ್‌ನ ಆಳ ಹೆಚ್ಚಿಸುವ ಅನಿವಾರ್ಯ ಬಂದಿದೆ.

ಹಿಂದೊಮ್ಮೆ ಕುಸಿತ

Advertisement

ಕಿರುಬಂದರಿನ ಮೂಲ ಜೆಟ್ಟಿ 405 ಮೀ. ಉದ್ದದಷ್ಟಿದ್ದು ತಾಂತ್ರಿಕ ಕಾರಣ ಗಳಿಂದ ಬೋಟ್‌ ನಿಲುಗಡೆಗೆ ಅಷ್ಟು ಅನುಕೂಲವಾಗಿರಲಿಲ್ಲ. ದಶಕಗಳಿಂದ ಅದೇ ಜೆಟ್ಟಿಯಲ್ಲಿ ಕಸರತ್ತು ನಡೆಸಿ ಮೀನು ಗಾರಿಕೆ ನಡೆಸುತ್ತಿದ್ದ ಮೀನುಗಾರರಿಗೆ 2018ರಲ್ಲಿ ನಡೆದ ಜೆಟ್ಟಿ ಕುಸಿತ ಆಘಾತ ನೀಡಿತ್ತು. ಜೆಟ್ಟಿ ಕುಸಿತದ ಪ್ರಕೋಪ ಮೀನು ಗಾರಿಕಾ ಪ್ರಾಂಗಣದ ಮೇಲೂ ಆಗಿತ್ತು. ಬೆನ್ನಲ್ಲೇ ಬೀಸಿದ ಬಿರುಗಾಳಿ ಪ್ರಾಂಗಣವನ್ನು ಛಿದ್ರ ಛಿದ್ರಗೊಳಿಸಿತ್ತು. ಈಗ ಮತ್ತೂಮ್ಮೆ.

ಬಂಕ್‌ ಅಡ್ಡಿ

ಈವರೆಗೆ ಸುಮಾರು 210 ಮೀ. ಉದ್ದದ ಜೆಟ್ಟಿ ಪುನರ್‌ ನಿರ್ಮಾಣ ಮಾಡಿ ಇನ್ನುಳಿದ ಸುಮಾರು 160 ಮೀಟರ್‌ ಉದ್ದದ ಜೆಟ್ಟಿ ಪ್ರದೇಶದಲ್ಲಿ ಪಿಲ್ಲರ್‌ ಅಳವಡಿಕೆ ಕಾರ್ಯ ನಡೆಸುತ್ತಿದೆ. ಜೆಟ್ಟಿಯ ಉತ್ತರ ದಿಕ್ಕಿನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ ಡೀಸೆಲ್‌ ಬಂಕ್‌ ಅನ್ನು ತೆರವು ಮಾಡದಿರುವುದರಿಂದ ಅಲ್ಲಿ ಪಿಲ್ಲರ್‌ ಅಳವಡಿಕೆ ಕಾರ್ಯ ಸ್ಥಗಿತಗೊಂಡಿದೆ. ಈ ಬಗ್ಗೆ ಯಾರೂ ಮುತುವರ್ಜಿ ವಹಿಸುತ್ತಿಲ್ಲ.

ಸಾಲುವುದಿಲ್ಲ

ಈಗಾಗಲೇ 210 ಮೀ. ಉದ್ದದ ಜೆಟ್ಟಿ ನಿರ್ಮಾಣವಾಗಿದೆ. ಒಟ್ಟು 379 ಮೀ. ಉದ್ದದ ಜೆಟ್ಟಿ ನಿರ್ಮಾಣವಾಗ ಬೇಕಿದೆ. ಗಂಗೊಳ್ಳಿಯಲ್ಲಿ 50 ಪರ್ಸಿನ್‌ ಬೋಟ್‌, 150 ನಾಡದೋಣಿ ಗಳು, 250 ಟ್ರಾಲ್‌ಬೋಟ್‌, 100ರಷ್ಟು 370 ಬೋಟ್‌ಗಳು, 100ಕ್ಕಿಂತ ಹೆಚ್ಚು ಕಂಟ್ಲಿ ದೋಣಿಗಳಿವೆ.

ಲೆಕ್ಕಾಚಾರದ ಪ್ರಕಾರ ನವಂಬರ್‌ ಒಳಗೆ ಕಾಮಗಾರಿ ಮುಗಿಯಬೇಕಿತ್ತು. ಬದಲಿ ವಿನ್ಯಾಸದ ಕಾಮಗಾರಿ ನಡೆಸಬೇಕಾದ ಕಾರಣ ಡಿಸೆಂಬರ್‌ ಅಂತ್ಯದ ಒಳಗೆ ಕಾಮಗಾರಿ ಪೂರ್ಣವಾಗಲಿದೆ.

ತಾಂತ್ರಿಕ ಸಮಸ್ಯೆ

ಹೊರಬದಿಯಿಂದ ಹೆಚ್ಚು ಆಳ ಇದೆ. ಹೊಸದಾಗಿ ವಾಲ್‌ ಹಾಕಬೇಕಿದ್ದು ಅದಕ್ಕೆ ಹಳೆ ವಾಲ್‌ನ ಸರಳು ಕತ್ತರಿಸಬೇಕಿದೆ. ಸಮುದ್ರ ಕೊರೆತ ಹೆ‌ಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ನಿರ್ಮಿಸುವ ವಾಲ್‌ನ ಆಳ ಎಷ್ಟಿರಬೇಕೆಂಬ ಅನುಮಾನ ಮೂಡಿದೆ. ಸಾಮಾನ್ಯವಾಗಿ ಬೋಟ್‌ಗಳಿಗೆ -2.5 ನಿಂದ -3 ಲೆವೆಲ್‌ ಸಾಕಾಗುತ್ತದೆ. ಆದರೆ ಇಲ್ಲಿ ಪ್ರಕೃತಿ ಸಹಜವಾಗಿ-6 ರಿಂದ-7ರ ವರೆಗೆ ಇದೆ. ಅಷ್ಟು ಆಳ ಇದ್ದಾಗ ಪ್ಲಾಟ್‌ಫಾರಂ ಮಾಡುವಾಗ ಆಳ ಎಷ್ಟಿರಬೇಕೆಂದು ಚಿಂತನೆ ನಡೆದಿದೆ. ಮೂಲವಿನ್ಯಾಸ ನಕ್ಷೆ ತಯಾರಿಸಿದವರ ಬಳಿ ಚರ್ಚಿಸಲಾಗಿದ್ದು ಅವರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಪೂರ್ಣ ಪಾವತಿ ಆಗಿಲ್ಲ

12.8 ಕೋ.ರೂ.ಗಳ ಕಾಮಗಾರಿಯಲ್ಲಿ 8 ಕೋ.ರೂ. ಪಾವತಿಯಾಗಿದೆ. ಆದ ಕೆಲಸ ಕ್ಕಷ್ಟೇ ಪಾವತಿಯಾಗಿದೆ. ಮೀನುಗಾರರ ವಲಯ ದಲ್ಲಿ ಕಾಮಗಾರಿ ಪೂರ್ಣವಾಗದೇ 10 ಕೋ. ರೂ. ನೀಡಲಾಗಿದೆ ಎಂದು ಸುದ್ದಿಯಾಗಿತ್ತು. ಇಲಾಖೆ ಇದನ್ನು ಅಲ್ಲಗಳೆದಿದೆ.

ಪರಿಶೀಲಿಸಿ ಕ್ರಮ: ಹಳೆ ಜೆಟ್ಟಿಯ ಡಯಾಫ್ರಾಮ್‌ ವಾಲ್‌ ಕುಸಿತದ ಕಾರಣ ಹೊಸ ಜೆಟ್ಟಿ ನಿರ್ಮಾಣದ ವಿನ್ಯಾಸ ಬದಲಿಸಬೇಕಿದೆ. ಈ ಬಗ್ಗೆ ನುರಿತ ತಜ್ಞರಿಂದ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಡೆಯಲಿದೆ. ಕಾಮಗಾರಿ ನಡೆದದ್ದಕ್ಕಿಂತ ಹೆಚ್ಚಿನ ಪಾವತಿ ಮಾಡಿಲ್ಲ. 200 ಮೀ.ಗೆ ಫೈಲಿಂಗ್‌ ಆಗಿದೆ. ಸ್ಲಾಬ್‌ ಕೆಲಸ ಮಾತ್ರ ಬಾಕಿ ಇರುವುದು. ಪೆಟ್ರೋಲ್‌ ಬಂಕ್‌ನ ಜಾಗದ್ದು ಬಾಕಿ ಇದೆ. –ಉದಯಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ, ಉಡುಪಿ

ಅಸಮರ್ಪಕ ಕಾಮಗಾರಿ: ಹೊಸಜೆಟ್ಟಿ ಕಾಮಗಾರಿ ಪೂರ್ಣವಾಗಿಲ್ಲ. ಎಲ್ಲ ಬೋಟ್‌, ದೋಣಿಗಳು ಬಂದರೆ ತೊಂದರೆಯಾಗುತ್ತದೆ. ಹಳೆಯ ಜೆಟ್ಟಿಯ ಅವಶೇಷ ತೆಗೆದು ಹೊಸದರ ನಿರ್ಮಾಣ ಭರದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಶೀಘ್ರ ಕ್ರಮ ವಹಿಸಬೇಕು. ಮೀನುಗಾರರಿಗೆ ನೆಮ್ಮದಿಯಲ್ಲಿ ವ್ಯಾಪಾರ ಮಾಡಿ ಬದುಕಲು ಅವಕಾಶ ನೀಡಬೇಕು. –ರಾಮಪ್ಪ ಖಾರ್ವಿ, ಹಸಿ ಮೀನು ಮಾರಾಟಗಾರರ ಸಂಘ, ಗಂಗೊಳ್ಳಿ

– ಲಕ್ಷ್ಮೀ ಮಚ್ಚಿನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next