Advertisement

ಗಂಗೊಳ್ಳಿ-ಕುಂದಾಪುರ ಸೇತುವೆ, ಬಹೂಪಯೋಗಿ ಬಂದರು : ಕೇಂದ್ರ ಸಚಿವರಿಗೆ ಬಿವೈಆರ್‌ ಮನವಿ

02:06 AM Jul 26, 2022 | Team Udayavani |

ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಸಾಗರಮಾಲಾ ಯೋಜನೆಯಲ್ಲಿ ಮಲ್ಟಿ ಪರ್ಪಸ್‌ ಹಾರ್ಬರ್‌ (ಬಹು ಉಪಯೋಗಿ ಬಂದರು) ಹಾಗೂ ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಿಸುವಂತೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದು ಇಲ್ಲಿ ಬಹೂಪಯೋಗಿ ಬಂದರು ಸ್ಥಾಪಿಸಲು ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು. ಗಂಗೊಳ್ಳಿ- ಕುಂದಾಪುರ ನಡುವೆ ಸೇತುವೆ ನಿರ್ಮಿಸು ವಂತೆಯೂ ಮನವಿ ಸಲ್ಲಿಸಿದರು.

ಸೇತುವೆ ನಿರ್ಮಿಸಿದರೆ
18 ಕಿ.ಮೀ. ಉಳಿತಾಯ
ಗಂಗೊಳ್ಳಿಯಿಂದ ಜಿಲ್ಲಾ ಉಪವಿಭಾಗ ಕೇಂದ್ರವಾಗಿರುವ ಕುಂದಾಪುರಕ್ಕೆ ಬರಲು ಪ್ರಸ್ತುತ ಸುಮಾರು 18 ಕಿ.ಮೀ. ಸುತ್ತಿಬಳಸುವ ಅನಿವಾರ್ಯ ಇದೆ. ಗಂಗೊಳ್ಳಿ ಮೀನುಗಾರಿಕೆ ಬಂದರು ಮತ್ತು ವಾಣಿಜ್ಯ ಕೇಂದ್ರವಾಗಿರುವ ಕುಂದಾಪುರವನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಿದಲ್ಲಿ ಗಂಗೊಳ್ಳಿಯಿಂದ ಕುಂದಾಪುರ ಬಹಳ ಹತ್ತಿರವಾಗಲಿದೆ. ಕಚೇರಿ, ಆಸ್ಪತ್ರೆ, ಮೀನುಗಾರಿಕೆ ಹಾಗೂ ಇನ್ನಿತರ ಆವಶ್ಯಕತೆಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಆದ್ದರಿಂದ ತುರ್ತಾಗಿ ಗಣನೆಗೆ ತೆಗೆದುಕೊಂಡು ಪ್ರಥಮ ಆದ್ಯತೆ ಮೇರೆಗೆ ಅನುಮೋದನೆ ದೊರಕಿಸಿಕೊಡಬೇಕೆಂದು ಸಂಸದರು ಒತ್ತಾಯಿಸಿದರು.

ಸಕಾರಾತ್ಮಕ ಸ್ಪಂದನೆಯ ಭರವಸೆ
ಎರಡೂ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಿದ ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವರು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಯೋಜನೆಗಳ ಬಗ್ಗೆ ತನಗೆ ಪತ್ರ ಬರೆದಿದ್ದಾರೆ ಎಂದು ಹೇಳಿ ಪಿಪಿಪಿ ಮಾದರಿಯಲ್ಲಿ ಬಹೂಪಯೋಗಿ ಬಂದರು ನಿರ್ಮಿಸಲು ಶೀಘ್ರ ಟೆಂಡರ್‌ ಕರೆಯುವಂತೆ ಅಧಿಕಾರಿ ಗಳಿಗೆ ತಿಳಿಸಿದರು. ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಿಸಲು ಆದಷ್ಟು ತ್ವರಿತವಾಗಿ ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದರು. ಈ ಎರಡೂ ಯೋಜನೆಗಳಿಗೆ ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

Advertisement

ಸಭೆಯಲ್ಲಿ ಕೇಂದ್ರ ಸಹಾಯಕ ಸಚಿವ ಶ್ರೀಪಾದ್‌ ನಾಯಕ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next