Advertisement

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

06:14 PM May 24, 2024 | Team Udayavani |

ಗಂಗೊಳ್ಳಿ: ಬಹು ನಿರೀಕ್ಷಿತ ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಹಾಗೂ ಅಳಿವೆಯಲ್ಲಿ ಅಂತೂ ಇಂತೂ ಅನೇಕ ವರ್ಷಗಳ ಮನವಿಯ ಬಳಿಕ ಹೂಳೆತ್ತುವ ಕಾರ್ಯ ಆರಂಭಗೊಂಡಿತ್ತು. ಆದರೆ ಹೂಳೆತ್ತುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದು ಕೂಡಾ “ಸಮುದ್ರಕ್ಕೆ ಕಲ್ಲು ಹಾಕುವ ಯೋಜನೆ’ಯ ಮಾದರಿಯಲ್ಲಿಯೇ ನಡೆದಂತಿದೆ ಎನ್ನುವುದು ಮೀನುಗಾರರ ಆರೋಪ.

Advertisement

ಸುಮಾರು 4.6 ಕೋ.ರೂ. ವೆಚ್ಚದಲ್ಲಿ ಅಳಿವೆ ಹಾಗೂ ಜೆಟ್ಟಿ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ಕಳೆದ ನವೆಂಬರ್‌ ತಿಂಗಳಿನಲ್ಲಿ
ಆರಂಭಗೊಂಡಿತ್ತು. ಡ್ರೆಜ್ಜಿಂಗ್‌ ಕಾಮಗಾರಿ ನಡೆಸಲು ಸುಮಾರು ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಆದರೆ ಡ್ರೆಜ್ಜಿಂಗ್‌ ಆರಂಭಿಸಿದ ಒಂದೇ ತಿಂಗಳಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಡ್ರೆಜ್ಜಿಂಗ್‌ ಕಾಮಗಾರಿ ಮುಗಿದಿದೆ, ಮುಂದುವರಿಸಿದರೆ ತನಗೆ ನಷ್ಟವಾಗುತ್ತದೆ ಎಂದು ಹೇಳಿ ಜಾಗ ಖಾಲಿ ಮಾಡಿದ್ದಾರೆ.

ನಿರೀಕ್ಷೆಗೆ ತಕ್ಕಂತೆ ಇಲ್ಲ
ಮೀನುಗಾರರ ನಿರೀಕ್ಷೆಗೆ ತಕ್ಕಂತೆ ಡ್ರೆಜ್ಜಿಂಗ್‌ ಕಾಮಗಾರಿ ನಡೆದಿಲ್ಲ, ಗಂಗೊಳ್ಳಿ ಬಂದರಿಗೆ ಬರುವ ದಾರಿಯಲ್ಲಿ ಡ್ರೆಜ್ಜಿಂಗ್‌ ಮಾಡುವುದು ಬಿಟ್ಟು ಕೋಡಿಗೆ ಹೋಗುವ ದಾರಿಯಲ್ಲಿ ಡ್ರೆಜ್ಜಿಂಗ್‌ ಮಾಡಲಾಗಿದೆ ಎಂಬ ಆರೋಪವಿದೆ.

ದೋಣಿಗೆ ತೊಂದರೆ
ಗಂಗೊಳ್ಳಿ ಅಳಿವೆಯಲ್ಲಿ ಹಿಟಾಚಿ ಮೂಲಕ ಹೂಳೆತ್ತಿ ತೆಗೆದ ಹೂಳನ್ನು ಬಾರ್ಜ್‌ ಮೂಲಕ ಅಳಿವೆಯಿಂದ ಸ್ವಲ್ಪ ದೂರದಲ್ಲಿ ಹಾಕಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಅಳಿವೆಯಲ್ಲಿ ತೆಗೆದ ಹೂಳನ್ನು ಗಂಗೊಳ್ಳಿ ಬಂದರಿಗೆ ಬರುವ ದಾರಿಯುದ್ದಕ್ಕೂ ಹಾಕುತ್ತಾ ಹೋಗಿರುವುದರಿಂದ ಅಲ್ಲಲ್ಲಿ ಮರಳು ದಿಬ್ಬಗಳು ಸೃಷ್ಟಿಯಾಗಿದೆ. ಇದರಿಂದ ಪರ್ಸಿನ್‌ ಮತ್ತು ಫಿಶಿಂಗ್‌ ಬೋಟ್‌ಗಳು ಹಾಗೂ ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಕಷ್ಟವಾಗುತ್ತಿದ್ದು, ಅಳಿವೆಯಲ್ಲಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.

ಬೋಟ್‌ಗಳು
ಗಂಗೊಳ್ಳಿ ಬಂದರಿನಲ್ಲಿ ಸುಮಾರು 100ಕ್ಕೂ ಮಿಕ್ಕಿ ಫಿಶಿಂಗ್‌ ಬೋಟ್‌ ಸೇರಿದಂತೆ 400ಕ್ಕೂ ಮಿಕ್ಕಿ ಬೋಟು ಗಳು ಹಾಗೂ 25ಕ್ಕೂ ಮಿಕ್ಕಿ ಆಳ ಸಮುದ್ರ ಬೋಟು ಗಳು ಕಾರ್ಯಾಚರಿಸುತ್ತಿವೆ. ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುತ್ತಿರುವ ಗಂಗೊಳ್ಳಿ –
ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಲೂ ಅಳಿವೆ ಹೂಳೆತ್ತಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಈ ಬಾರಿ ಗಂಗೊಳ್ಳಿ- ಕೋಡಿ ಅಳಿವೆ ಪ್ರದೇಶ ದಲ್ಲಿ ಹೂಳೆತ್ತುವ ಕಾಮಗಾರಿ ನಡೆದು ಮೀನುಗಾರರು ನೆಮ್ಮದಿಯಿಂದ ಇರಬಹುದು ಎಂದು ಎಣಿಸಿಕೊಂಡಿದ್ದರೂ ಈಗ ಅಳಿವೆಯಲ್ಲಿ  ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.

Advertisement

ಅನಾಹುತಕ್ಕೆ ಆಹ್ವಾನ 
ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಮರಳು ದಿಬ್ಬ ನಿರ್ಮಾಣಗೊಂಡಿದ್ದು, ಬೋಟು ಮತ್ತು ದೋಣಿಗಳು ಗಂಗೊಳ್ಳಿ ಬಂದರು ಪ್ರವೇಶಿಸಲು ಹಾಗೂ ಬಂದರಿನಿಂದ ಹೊರಹೋಗಲು ಹರಸಾಹಸ ಪಡುವಂತಾಗಿದೆ. ಸಮುದ್ರದ ಅಲೆಗಳ ಇಳಿತದ ಸಮಯ ದಲ್ಲಿ ಬೋಟುಗಳು ಸಂಚರಿಸುವುದು ಕಷ್ಟವಾಗುತ್ತಿದೆ. ಕೊಂಚ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ.

ಇಲಾಖೆ ಮೇಲೆ ಅನುಮಾನ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ಮಾಡುವ ಗೋಜಿಗೆ ಹೋಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಲಾಖೆಯ ಕೆಲವರು ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ತಿಂಗಳಲ್ಲಿ ಡ್ರೆಜ್ಜಿಂಗ್‌
ಕಾಮಗಾರಿ ಮುಗಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಸಾಧ್ಯತೆಯ ಆರೋಪ ಕೇಳುತ್ತಿದೆ.

ನಿರಾಕರಣೆ
ಅಧಿಕಾರಿಗಳು ಅವ್ಯವಹಾರ ನಡೆದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಸ್ಥಳೀಯ ಮೀನುಗಾರರ ಗಮನಕ್ಕೆ ತರಲಾಗಿದೆ. 97,000 ಕ್ಯು.ಮೀ.ಗೆ ಗುತ್ತಿಗೆ ಆದುದು. ಅಷ್ಟು ಹೂಳು ತೆಗೆದಾಗಿದೆ. ಮೀನುಗಾರರಿಗೆ ಮಾಹಿತಿ ನೀಡಲಾಗಿದ್ದು ಇನ್ನೂ 300 ಕ್ಯು.ಮೀ. ತೆಗೆಯಲಾಗಿದೆ. ಕೆಲವೆಡೆ ಹೂಳು ತೆಗೆದರೆ ಕಟ್ಟಡಗಳಿಗೆ ಅಪಾಯ ಇರುವೆಡೆ ತೆಗೆಯಲಿಲ್ಲ ಎನ್ನುತ್ತಾರೆ.

ನಿದ್ದೆಗೆಡಿಸಿದ ಡ್ರೆಜ್ಜಿಂಗ್‌
ಅಳಿವೆ ಹೂಳೆತ್ತುವ ಕಾಮಗಾರಿ ನಡೆಸಿ ತೆಗೆದ ಹೂಳನ್ನು ಅಳಿವೆಯಿಂದ ಅನತಿ ದೂರದಲ್ಲಿ ಹಾಕಿರುವುದು ಮತ್ತು ಗಂಗೊಳ್ಳಿ
ಬಂದರು ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದಿರುವುದು ಮೀನುಗಾರರ ನಿದ್ದೆಗೆಡಿಸಿದೆ.

ಸಮಸ್ಯೆ ಹೆಚ್ಚಾಗಿದೆ
ಗಂಗೊಳ್ಳಿ – ಕೋಡಿ ಅಳಿವೆ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಿಲೂ ಅಳಿವೆ ಹೂಳೆತ್ತ ಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಈ ಬಾರಿ ಕಾಮಗಾರಿ ನಡೆದು ಮೀನುಗಾರರು ನೆಮ್ಮದಿಯಲ್ಲಿ ಇರಬಹುದು ಎಂದು ಎಣಿಸಿದ್ದರೂ ಸಮಸ್ಯೆ ಬಿಗಡಾಯಿಸಿದೆ. ಅಳಿವೆ ಹೂಳೆತ್ತುವ ಕಾಮಗಾರಿ ನಡೆಸಿ ತೆಗೆದ ಹೂಳನ್ನು ಅಳಿವೆಯಿಂದ ಅನತಿ ದೂರದಲ್ಲಿ ಹಾಕಿರುವುದು ಮತ್ತು ಗಂಗೊಳ್ಳಿ ಬಂದರು ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದಿರುವುದರಿಂದ ಅಳಿವೆಯಲ್ಲಿ ಸಮಸ್ಯೆ ಮತ್ತಷ್ಟು
ಹೆಚ್ಚಾಗಿದೆ.
ಆನಂದ, ಸ್ಥಳೀಯ ಮೀನುಗಾರ

ಸಭೆ ಮಾಡುತ್ತೇನೆ
ಡ್ರೆಜ್ಜಿಂಗ್‌ ಸರಿಯಾಗಿಲ್ಲ ಎಂದು ಮೀನುಗಾರರು ಹೇಳುತ್ತಿದ್ದು ನಿಗದಿತ ಡ್ರೆಜ್ಜಿಂಗ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮೀನುಗಾರರಿಗೆ ಡ್ರೆಜ್ಜಿಂಗ್‌ ಕೆಲಸದ ಮಾಹಿತಿ ನೀಡಲಾಗಿದೆ ಎಂದೂ ಹೇಳುತ್ತಿದ್ದಾರೆ. ಆದರೆ ಅವಶ್ಯವಿದ್ದಲ್ಲಿ ಡ್ರೆಜ್ಜಿಂಗ್‌ ನಡೆಸಿಲ್ಲ ಎಂದು ಮೀನುಗಾರರು ಹೇಳುತ್ತಿದ್ದಾರೆ. ಈ ಗೊಂದಲ ಪರಿಹರಿಸಲು, ಮೀನುಗಾರರಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಸಭೆ ಕರೆಯಲಾಗುವುದು.
-ಗುರುರಾಜ ಗಂಟಿಹೊಳೆ,
ಶಾಸಕ, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next