Advertisement

ನಮ್ಮ ಶಾಲೆ ನಮ್ಮ ಹೆಮ್ಮೆ: ಪಂಚಗಂಗಾವಳಿ ತಟದಲ್ಲಿ ಜನ್ಮತಳೆದ ಮೊದಲ ಶಿಕ್ಷಣ ಸಂಸ್ಥೆ

01:12 PM Nov 09, 2019 | mahesh |

1892- 93 ಶಾಲೆ ಸ್ಥಾಪನೆ
ಪಂಚಗಂಗಾವಳಿ ತಟದಲ್ಲಿ ಜನ್ಮ ತಳೆದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಗಂಗೊಳ್ಳಿ: ಕುಂದಾಪುರ ಭಾಗದ ಪಂಚ ನದಿಗಳು ಸಂಗಮ ವಾಗುವ ಪಂಚಗಂಗಾವಳಿ ತಟದಲ್ಲಿ ಜನ್ಮ ತಳೆದ ಮೊತ್ತ ಮೊದಲ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಗಂಗೊಳ್ಳಿಯ ಸರಕಾರಿ ಉರ್ದು ಹಿ. ಪ್ರಾ. ಶಾಲೆಯದು. ಈಗ ಈ ಶಾಲೆಗೆ 124 ವರ್ಷ ಪೂರೈಸಿ, ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.

ಉರ್ದು – ಕನ್ನಡ – ಆಂಗ್ಲ ಉರ್ದು ಶಾಲೆಯಾಗಿ ಆರಂಭಗೊಂಡು, ಅನಂತರ ಕನ್ನಡ ಮಾಧ್ಯಮ ಶಾಲೆಯಾಗಿ ಪರಿವರ್ತನೆಯಾಗಿ, ಈಗ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಮಾಧ್ಯಮಗಳಲ್ಲಿಯೂ ಶಿಕ್ಷಣ ನೀಡಲಾಗುತ್ತಿದೆ. ಆರಂಭದಿಂದ ಈವರೆಗೂ ಇಲ್ಲಿ ಉರ್ದು ಒಂದು ವಿಷಯವಾಗಿ ಕಲಿಸಲಾಗುತ್ತಿರುವುದು ವಿಶೇಷ.

ಸ್ವಂತ ಜಾಗವೇ ಇಲ್ಲ
ಇದು ಶಾಲೆಯ ದುರದೃಷ್ಟವೋ ಗೊತ್ತಿಲ್ಲ. ಶಾಲೆ ಆರಂಭವಾಗಿ 125 ವರ್ಷಗಳಾಗುತ್ತ ಬಂದರೂ, ಇನ್ನೂ ಈ ಸರಕಾರಿ ಶಿಕ್ಷಣ ಸಂಸ್ಥೆಗೆ ಸ್ವಂತದ್ದಾದ ಜಾಗವಿಲ್ಲ. 1950 ರವರೆಗೆ ಶಾಬುದ್ದಿನ್‌ ಅಬ್ದುಲ್‌ ರಹೀಂ ಮನೆಯಲ್ಲಿಯೇ ಶಾಲೆ ನಡೆಯುತ್ತಿತ್ತು. 1950 ರಿಂದ ಇಲ್ಲಿನ ನಾಹುದಾ ಮೊಹಮ್ಮದ್‌ ಮೀರಾ ಎನ್ನುವರು ಈ ಶಾಲೆಗೆ 50 ಸೆಂಟ್ಸ್‌ ಜಾಗವನ್ನು ಬಾಡಿಗೆಯಾಗಿ ನೀಡಿದ್ದು, ಅಲ್ಲಿ ಸರಕಾರ ಕಟ್ಟಡ ನಿರ್ಮಿಸಿ, ಅಲ್ಲಿ ವಿದ್ಯಾರ್ಜನೆ ನೀಡುತ್ತಿದೆ. ಸರಕಾರ ಪ್ರತಿ ವರ್ಷ ಇವರಿಗೆ 55 ಸಾವಿರ ರೂ. ವಾರ್ಷಿಕ ಬಾಡಿಗೆ ನೀಡುತ್ತಿದೆ.

Advertisement

ಹಳೆ ವಿದ್ಯಾರ್ಥಿ ಸಂಘಕ್ಕೆ 50 ವರ್ಷ
ಹೆಚ್ಚಿನೆಲ್ಲ ಶಾಲೆಗಳು ಈಗ ಸುವರ್ಣ ಮಹೋತ್ಸವ ಆಚರಿಸಿದರೆ, ಈ ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ 50 ವರ್ಷ ತುಂಬುತ್ತಿದ್ದು, ಮುಂದಿನ ವರ್ಷ ಈ ಸಂಘದ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ.

ಮನೆಯಿಂದ ಆರಂಭ
ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮರವಂತೆ, ನಾಯಕ ವಾಡಿ ಭಾಗದ ಮಕ್ಕಳು ದೂರದ ಕುಂದಾಪುರಕ್ಕೆ ಹೋಗಿ ವಿದ್ಯಾರ್ಜನೆ ಮಾಡಬೇಕಿತ್ತು. ಇಲ್ಲಿ ಆಸುಪಾಸಿನಲ್ಲಿ ಎಲ್ಲಿಯೂ ಶಾಲೆಗಳಿರಲಿಲ್ಲ. ಇದನ್ನು ಮನಗಂಡು 1892-93ರಲ್ಲಿ ಗಂಗೊಳ್ಳಿಯ ಶಾಬುದ್ದಿನ್‌ ಅಬ್ದುಲ್‌ ರಹೀಂ, ಶಾಬುದ್ಧಿನ್‌ ಅಬ್ದುಲ್‌ ಖಾದಿರ್‌ ಸಹೋದರರು ತಮ್ಮ ಮನೆಯಲ್ಲಿಯೇ ಶಾಲೆ ಆರಂಭಿಸಿ ದರು. 3 ವರ್ಷಗಳ ಅನಂತರ ಬ್ರಿಟೀಷ್‌ ಸರಕಾರದ ಅನುಮತಿ ಸಿಕ್ಕಿ, ಅಧಿಕೃತ ಸರಕಾರಿ ಶಾಲೆಯಾಗಿ ಅಸ್ತಿತ್ವಕ್ಕೆ ಬಂತು.

1895ರಲ್ಲಿ ಆರಂಭ
ಬ್ರಿಟಿಷ್‌ ಸರಕಾರದ ಅನುಮತಿ ಪಡೆದು, 1895 ರಲ್ಲಿ ಈ ಶಾಲೆ ಕಾರ್ಯಾರಂಭ ಮಾಡಿತು. ಸ್ವಾತಂತ್ರ್ಯ ಸಿಗುವ ಮೊದಲೇ 50 ವರ್ಷಗಳನ್ನು ಪೂರೈಸಿದ್ದು, 1995ರಲ್ಲಿ ಶತಮಾನೋತ್ಸವವನ್ನು ಆಚರಿಸಿ, ಈ ಶೈಕ್ಷಣಿಕ ವರ್ಷದಲ್ಲಿ 125ನೇ ವರ್ಷಾಚರಣೆಗೆ ಅಣಿಯಾಗುತ್ತಿದೆ. ಸ್ಥಾಪಕರಾದ ಶಾಬುದ್ಧಿನ್‌ ಅಬ್ದುಲ್‌ ರಹಿಂ ಅವರೇ ಶಾಲೆಯ ಮೊದಲ ಮುಖ್ಯೋಪಾಧ್ಯಾಯರು. ಆರಂಭದಲ್ಲಿ ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ, ಮರವಂತೆ, ನಾಯಕವಾಡಿ, ಮುಳ್ಳಿಕಟ್ಟೆ, ನಾಗೂರು ಸೇರಿದಂತೆ ವಿವಿಧೆಡೆಗಳ 800ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು, 1ರಿಂದ 7ನೇ ತರಗತಿಯವರೆಗಿದ್ದು, 12 ಮಂದಿ ಶಿಕ್ಷಕರಿದ್ದರಂತೆ. ಈಗ ಇಲ್ಲಿ ಎಲ್‌ಕೆಜಿಯಿಂದ ಆರಂಭವಾಗಿ 8ನೇ ತರಗತಿಯವರೆಗೆ ಇದ್ದು, 115 ಮಕ್ಕಳಿದ್ದಾರೆ. ನಾಲ್ವರು ಸರಕಾರಿ ಹಾಗೂ ಐವರು ಗೌರವ ಶಿಕ್ಷಕರಿದ್ದಾರೆ. ಈ ಶಾಲೆಯಲ್ಲಿ ಈವರೆಗೆ ಸಾವಿರಾರು ಮಂದಿ ಅಕ್ಷರ ಕಲಿತು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಕಬಡ್ಡಿ ಪಟು ರಿಶಾಂಕ್‌ ದೇವಾಡಿಗ ಅವರು ಸಮಾರಂಭವೊಂದಕ್ಕೆ ಭೇಟಿ ನೀಡಿದ್ದರು.

ಈ ಊರಿನ ದಾನಿಗಳು, ಗಣ್ಯ ವ್ಯಕ್ತಿಗಳ ಸಹಕಾರದಿಂದ ಶಾಲೆ ಆರಂಭಗೊಂಡಿದ್ದು, ಊರವರು, ಪೋಷಕರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಸಹಕಾರದಿಂದ ಈಗಲೂ ಉತ್ತಮ ಶಾಲೆ ಎನ್ನುವ ಹೆಸರು ಉಳಿಸಿಕೊಂಡಿದೆ. ಸ್ವಂತ ಜಾಗದಲ್ಲಿ ಈ ಶಾಲೆ ನೆಲೆ ನಿಲ್ಲಲಿ ಎನ್ನುವುದೇ ಎಲ್ಲರ ಅಪೇಕ್ಷೆ.
. -ಶಕೀಲಾ ತಬುಸ್ಸಂ, ಮುಖ್ಯ ಶಿಕ್ಷಕಿ

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next