Advertisement

ಗಂಗೊಳ್ಳಿ: ಶಾಪಮುಕ್ತಗೊಳ್ಳದ ಮೀನು ಮಾರುಕಟ್ಟೆ ರಸ್ತೆ

07:30 PM Jan 11, 2022 | Team Udayavani |

ಗಂಗೊಳ್ಳಿ: ಗಂಗೊಳ್ಳಿಯ ಮುಖ್ಯರಸ್ತೆಯಿಂದ ದಾಕುಹಿತ್ಲು ಪರಿಸರಕ್ಕೆ ಸಂಪರ್ಕ ಕಲ್ಪಿಸುವ ಮೀನು ಮಾರುಕಟ್ಟೆ ರಸ್ತೆಯು ಕಳೆದ ಹಲವು ದಶಕಗಳಿಂದ ಶಾಪಗ್ರಸ್ತವಾಗಿದೆ. ಗ್ರಾಮದ ಬಹುತೇಕ ರಸ್ತೆಗಳು ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿ ಹೊಂದಿದ್ದರೂ, ಇಲ್ಲಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾಗಿರುವ ಮೀನು ಮಾರುಕಟ್ಟೆ ರಸ್ತೆ ಇನ್ನೂ ಶಾಪದಿಂದ ಮುಕ್ತಿಗೊಂಡಿಲ್ಲ.

Advertisement

ಕಾಂಕ್ರೀಟ್‌
ಈ ಪರಿಸರದಲ್ಲಿ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರದ ನಿವಾಸಿಗಳು, ಮೀನು ಮಾರುಕಟ್ಟೆಗೆ ಬರುವ ಜನರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಈ ರಸ್ತೆಯನ್ನೇ ಅಲವಂಬಿಸಿದ್ದಾರೆ. ಗಂಗೊಳ್ಳಿ ಮುಖ್ಯರಸ್ತೆಗೆ ಪರ್ಯಾಯ ರಸ್ತೆಯಂತಿರುವ ಮೀನು ಮಾರುಕಟ್ಟೆ ರಸ್ತೆ ಮಾತ್ರ ವಾಹನಗಳು ಸಂಚರಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಸುಮಾರು 100 ಮೀ. ಉದ್ದದ ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದ್ದು, ಇನ್ನುಳಿದ ಸುಮಾರು ಶೇ. 75ರಷ್ಟು ರಸ್ತೆ ಸಂಪೂರ್ಣವಾಗಿ ನಾಮಾವಶೇಷಗೊಂಡಿದೆ. ದ್ವಿಚಕ್ರ ವಾಹನ ಸಂಚರಿಸಲೂ ಕಷ್ಟವಾಗುತ್ತಿದ್ದು ರಿಕ್ಷಾ, ಕಾರು ಮೊದಲಾದ ವಾಹನಗಳು ಈ ರಸ್ತೆ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿದೆ. ಮಳೆಗಾಲದಲ್ಲಂತೂ ಈ ರಸ್ತೆಯ ಮೇಲೆ ಸಂಚರಿಸುವುದು ಬಹಳ ಕಷ್ಟ‌. ಹೊಂಡ ಗುಂಡಿಗಳಿಂದ ಕೂಡಿ ನಡೆದಾಡಲು ಸಮಸ್ಯೆಯಾಗುತ್ತಿದೆ.

ಸವಾಲೇ ಸರಿ
ಕಳೆದ ಅನೇಕ ದಶಕಗಳಿಂದ ಮೀನು ಮಾರುಕಟ್ಟೆ ರಸ್ತೆ ದುರಸ್ತಿಗೊಳ್ಳದಿರುವುದರಿಂದ ರಸ್ತೆ ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ಕೂಡಿದೆ. ರಸ್ತೆಯ ಬಹುಭಾಗದಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡ. ಮಳೆಗಾಲದ ಸಮಯದಲ್ಲಿ ಹಾಗೂ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ಸಂಗತಿ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಇಲ್ಲಿನ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ ಜನಪ್ರತಿನಿಧಿಗಳು ಇತ್ತ ಸುಳಿದೂ ನೋಡುತ್ತಿಲ್ಲ. ಈ ಪರಿಸರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಮಯ ಇಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಶಾಪ ಮುಕ್ತಿ ಯಾವಾಗ
ಮುಖ್ಯರಸ್ತೆಗೆ ಪರ್ಯಾಯವಾಗಿರುವ ಮೀನು ಮಾರುಕಟ್ಟೆ ರಸ್ತೆಯನ್ನಾದರೂ ಅಭಿವೃದ್ಧಿಪಡಿಸಿ ಎಂದು ಮಾಡಿದ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಗಂಗೊಳ್ಳಿಯ ಹಲವು ರಸ್ತೆಗಳು ಅಭಿವೃದ್ಧಿ ಭಾಗ್ಯ ಕಂಡರೂ ಮೀನು ಮಾರುಕಟ್ಟೆ ರಸ್ತೆಗೆ ತಟ್ಟಿದ ಶಾಪ ಮುಕ್ತಿಯಾಗುವುದು ಯಾವಾಗ ಮತ್ತು ಈ ರಸ್ತೆಗೆ ಅಭಿವೃದ್ಧಿ ಭಾಗ್ಯ ಕೂಡಿ ಬರುವುದು ಯಾವಾಗ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ.

ಸ್ಪಂದಿಸಲಿ
ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ದುರಸ್ತಿ ಬಗ್ಗೆ ಕಳೆದ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಈವರೆಗೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ರಸ್ತೆಯ ಮೇಲೆ ಸಂಚರಿಸುವುದು ಕಷ್ಟವಾಗುತ್ತಿದೆ. ರಸ್ತೆ ಸಂಪೂರ್ಣವಾಗಿ ಹಾಳಾ ಗಿದ್ದು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸಲು ಹಿಂದೇಟು ಹಾಕುತ್ತಿದೆ. ಸಂಬಂಧಪಟ್ಟ ಇಲಾಖಾಧಿ ಕಾರಿಗಳು ತುರ್ತಾಗಿ ಸ್ಪಂದಿಸಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರ ಮಡಿವಾಳ.

Advertisement

ಅಭಿವೃದ್ಧಿಗೊಳಿಸಲಿ
ಹೊಂಡ ಗುಂಡಿಗಳಿಂದ ಕೂಡಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆಗೆ ಸ್ಪಂದನ ದೊರೆತಿಲ್ಲ. ಗಂಗೊಳ್ಳಿ ಮುಖ್ಯರಸ್ತೆಗೆ ಪರ್ಯಾಯವಾಗಿರುವ ಮೀನು ಮಾರುಕಟ್ಟೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಮುಂದಾಗಬೇಕು.
-ಕೃಷ್ಣ ಖಾರ್ವಿ, ಸ್ಥಳೀಯ ನಿವಾಸಿ

ಕ್ರಮ ಕೈಗೊಳ್ಳಲಾಗುವುದು
ಮೀನು ಮಾರುಕಟ್ಟೆ ರಸ್ತೆ ದುರಸ್ತಿ ಬಗ್ಗೆ ಶಾಸಕರು, ಸಂಸದರು ಹಾಗೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಹಾಳಾಗಿರುವ ಮೀನು ಮಾರುಕಟ್ಟೆ ರಸ್ತೆ ದುರಸ್ಥಿ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮತ್ತೂಮ್ಮೆ ಮನವಿ ಮಾಡಿಕೊಂಡು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು.
-ಶ್ರೀನಿವಾಸ ಖಾರ್ವಿ, ಅಧ್ಯಕ್ಷರು , ಗಂಗೊಳ್ಳಿ ಗ್ರಾ.ಪಂ.

 

Advertisement

Udayavani is now on Telegram. Click here to join our channel and stay updated with the latest news.

Next