Advertisement

Gangolli; ಮಹಾಂಕಾಳಿ ದೇಗುಲದ ಚಿನ್ನಾಭರಣ ಕಳವು; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ

11:20 AM Sep 23, 2024 | Team Udayavani |

ಗಂಗೊಳ್ಳಿ:ಗಂಗೊಳ್ಳಿಯ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರಿಗೆ ಅರ್ಪಿಸಿದ 21 ಲಕ್ಷ ರೂ. ಮೌಲ್ಯದ ಚಿನ್ನದ ಅಭರಣಗಳನ್ನು ಕಳವುಗೈದ ಆರೋಪದಲ್ಲಿ ಅದೇ ದೇವಸ್ಥಾನದ ಅರ್ಚಕ, ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್‌ (43) ಎಂಬಾತನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ದೇವಸ್ಥಾನದ ದೇವರಿಗೆ ಹಾಕಲಾದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಪೂಜೆ ಮಾಡುವ ಅರ್ಚಕರೇ ಕದ್ದಿರುವ ಘಟನೆ ಬೆಳಕಿಗೆ ಬಂದಿತ್ತು.

ದೇವಸ್ಥಾನದಲ್ಲಿ ಕಳೆದ ಮೇ ತಿಂಗಳಿನಿಂದ ಪೂಜೆ ಮಾಡುತ್ತಿದ್ದ ಅರ್ಚಕ ನರಸಿಂಹ ದೇವರ ಚಿನ್ನಾಭರಣ ಕದ್ದ ಆರೋಪಿಯಾಗಿದ್ದಾನೆ.

ಭಕ್ತರು ಹಾಗೂ ಆಡಳಿತ ಮಂಡಳಿಯವರು ದೇವರಿಗೆ ಸಮರ್ಪಿಸಿದ 264 ಗ್ರಾಂ. ತೂಕದ ಚಿನ್ನಾಭರಣಗಳನ್ನು ಅರ್ಚಕ ತೆಗೆದು, ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಕಳವಾದ ಚಿನ್ನಾಭರಣದ ಮೌಲ್ಯ 21.12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಕೆಲ ಚಿನ್ನಾಭರಣಗಳನ್ನು ತೆಗೆದು, ಅದರ ಬದಲು ನಕಲಿ ಚಿನ್ನಾಭರಣಗಳನ್ನು ಇರಿಸಿದ್ದಾರೆ.

Advertisement

ಶನಿವಾರ ನವರಾತ್ರಿ ಹಿನ್ನೆಲೆಯಲ್ಲಿ ಸಮಿತಿಯವರು ದೇವರ ಮೂರ್ತಿ, ಆಭರಣಗಳನ್ನು ಸ್ವಚ್ಚ ಮಾಡಬೇಕು, ತೆಗೆದು ಕೊಡಿ ಎಂದು ಅರ್ಚಕರಿಗೆ ಕೇಳುವಾಗ ಈ ವಿಚಾರ ಬೆಳಕಿಗೆ ಬಂದಿದೆ.

ದೇವಸ್ಥಾನದ ಅರ್ಚಕ ಆರೋಪಿ ನರಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿಯೇ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಡಿ ಶಂಕರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next