ತುಮಕೂರು: ಮಹಾನಗರ ಪಾಲಿಕೆಯ ಮೇಯರ್ ಫರೀದಾ ಬೇಗಂ ಬುಧವಾರ ಮಹಾನಗರ ಪಾಲಿಕೆ ಸದಸ್ಯರ ಜೊತೆ ಬುಗುಡನಹಳ್ಳಿ ಕೆರೆಗೆ ಭೇಟಿ ನೀಡಿ ವೀಕ್ಷಿಸಿ ಹೇಮಾವತಿ ನೀರು ಹರಿದು ಬರುತ್ತಿರುವುದನ್ನು ನೋಡಿ ಗಂಗೆಗೆ ಶಿರಬಾಗಿ ನಮಿಸಿದರು.
ಮೇಯರ್ ಮೊದಲು 124 ಕಿ.ಮೀ. ಎಸ್ಕೇಪ್ ಗೇಟ್‌ಗೆ ಭೇಟಿ ನೀಡಿ ಮಹಾ ನಗರದ ಪಾಲಿಕೆಯ ನೀರು ಸರಬರಾಜು ಶಾಖೆಯ ಎಂಜಿನಿಯರ್‌ಗಳಿಂದ ನೀರಿನ ಬಗ್ಗೆ ಮಾಹಿತಿ ಪಡೆದರು. ಬುಧವಾರ 2.6 ಮೀಟರ್ ನೀರು ಬುಗುಡನಹಳ್ಳಿಗೆ ನೀರು ಹರಿದು ಬರು ತ್ತಿದೆ,
ಕೆರೆಯ ಸಾಮರ್ಥ್ಯ 282 ಎಂಸಿಎಫ್ಟಿ ಇದ್ದು ಅದರಲ್ಲಿ ಹಾಲಿ 80 ಎಂಸಿಎಫ್ಟಿ ನೀರು ಕೆರೆಯಲ್ಲಿ ಇದ್ದು ಈಗ ಬಾಕಿ 200 ಎಂಸಿಎಫ್ಟಿ ನೀರು ಬಂದರೆ ಇನ್ನು 8 ದಿನಗಳಲ್ಲಿ ಬುಗುಡನ ಹಳ್ಳಿ ಕೆರೆ ತುಂಬುವುದು ಎಂದು ಸ್ಥಳ ದಲ್ಲಿದ್ದ ಎಂಜಿನಿಯರ್ ಕಿರಣ್ ಮೇಯರ್‌ಗೆ ಮಾಹಿತಿ ನೀಡಿದರು.
ಬುಗುಡನಹಳ್ಳಿ ಕೆರೆಯಲ್ಲಿ ತುಮಕೂರು ನಗರದ ಜನರಿಗೆ ಕುಡಿಯುವ ನೀರನ್ನು ಸರಬರಾಜು ಇನ್ನು 1 ತಿಂಗಳಿಗೆ ಆಗುವಷ್ಟು ಮಾತ್ರ ನೀರು ಇತ್ತು ಮುಂದಿನ ದಿನಗಳಲ್ಲಿ ತುಮಕೂರು ನಗರದ ಜನರಿಗೆ ಕುಡಿಯುವ ನೀರಿಗೆ ಏನು ಮಾಡುವುದು ಎಂಬ ಆತಂಕದಲ್ಲಿ ನಾವಿದ್ದೆವು ಅದನ್ನು ಮನಗಂಡು ನಗರ ಶಾಸಕರು, ಸಂಸದರು, ಸಿಎಂ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿದಾಗ ಸಿಎಂ ನಮ್ಮ ಕಷ್ಟವನ್ನು ಅರ್ಥಮಾಡಿ ಕೊಂಡು ನಗರದ ಕುಡಿವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.
ಈ ನಿಟ್ಟಿನಲ್ಲಿ ನಾನು ಸಿಎಂ ಯಡಿಯೂರಪ್ಪರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಪಾಲಿಕೆಯ ಎಲ್ಲ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.