Advertisement

ಪ್ರವಾಸಿಗರಿಗೆ ಉಪಚಾರ ಮಾಡಿಸಿ ಸಣ್ಣಪುಟ್ಟ ವ್ಯಾಪಾರ ಮಾಡುವವರನ್ನು ಒಕ್ಕಲೆಬ್ಬಿಸದಂತೆ ಮನವಿ

06:35 PM Sep 29, 2021 | Team Udayavani |

ಗಂಗಾವತಿ: ಆನೆಗೊಂದಿ ಸಾಣಾಪೂರ ಭಾಗದಲ್ಲಿ ನೈಸರ್ಗಿಕವಾಗಿ ಗುಡಿಸಲು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸಿ ಪ್ರವಾಸಿಗರಿಗೆ ಊಟ ಉಪಚಾರ ಮಾಡುವವರನ್ನು ಒಕ್ಕಲೆಬ್ಬಿಸಬಾರದು ಮತ್ತು ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಸರಳೀಕರಣ ಮಾಡುವಂತೆ ಗ್ರಾ.ಪಂ.ಗಳ ಸದಸ್ಯರು ಹಾಗೂ ವ್ಯಾಪಾರಸ್ಥರು ಶಾಸಕ ಪರಣ್ಣ ಮುನವಳ್ಳಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಕೋಡಿ ನಾಗೇಶ ಮಾತನಾಡಿ, ಅಂಜನಾದ್ರಿ ಬೆಟ್ಟ ಹಾಗೂ ಆನೆಗೊಂದಿ ಭಾಗದ ಪ್ರಕೃತಿ ಸೌಂದರ್ಯ ಸವಿಯಲು ದೇಶ ವಿದೇಶದ ಜನರು ಆಗಮಿಸುತ್ತಾರೆ. ಅವರಿಗೆ ವಸತಿ ಊಟ ಕಲ್ಪಿಸಲು ಸ್ಥಳೀಯರು ಗುಡಿಸಲುಗಳನ್ನು ಅವರಿಗೆ ಬಾಡಿಗೆಗೆ ನೀಡಿ ದುಡಿಮೆ ಮಾಡುತ್ತಿದ್ದಾರೆ.

ಎಲ್ಲಿಯೂ ಸಿಮೆಂಟ್ ಕಟ್ಟಡ ನಿರ್ಮಿಸಿಲ್ಲ. ಆದರೂ ಕೆಲವರು ಹೊಟ್ಟೆ ಕಿಚ್ಚಿನಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಯತ್ನ ನಡೆಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶದಂತೆ ವಿರೂಪಾಪೂರ ಗಡ್ಡಿಯಲ್ಲಿದ್ದ ಸುಮಾರು 28 ರೆಸಾರ್ಟ್ ತೆರವು ಮಾಡಲಾಗಿದೆ.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಸ್ಮಾರಕಗಳಿರದ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಸಣ್ಣ ಪುಟ್ಟ ವ್ಯಾಪಾರ ಮಾಡಲಾಗುತ್ತಿದೆ. ಇದರಲ್ಲಿ ಯಾರಾದರೂ ಅನೈತಿಕ ಚಟುವಟಿಕೆ ನಡೆಸಿದರೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿ ಅದು ಬಿಟ್ಟು ನೇರ ಪರೋಕ್ಷವಾಗಿ ಸ್ಥಳೀಯ ಜನರಿಗೆ ಉದ್ಯೋಗ ದೊರಕಿಸಿರುವ ಹೊಟೇಲ್ ಉದ್ಯಮ ನಾಶ ಮಾಡಲು ಜಿಲ್ಲಾಡಳಿತ ಮುಂದಾಗಬಾರದು. ಶಾಸಕರು ಸಂಸದರು ಸಚಿವರು ಹಾಗೂ ಜಿಲ್ಲಾಡಳಿತ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ 2021 ನೇ ಮಾಸ್ಟರ್ ಪ್ಲಾನ್(ಮಹಾಯೋಜನೆ)ಯಲ್ಲಿ ಆನೆಗೊಂದಿ ಭಾಗದಲ್ಲಿಯೂ ವ್ಯಾಪಾತರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲು ನಿಯಮಗಳನ್ನು ಸರಳೀಕರಣ ಮಾಡಬೇಕು. ಹೊಸಪೇಟೆ ಭಾಗದಲ್ಲಿ ರೆಸಾರ್ಟ್ ಸೇರಿ ಎಲ್ಲಾ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದಂತೆ ಆನೆಗೊಂದಿ ಭಾಗದಲ್ಲಿ ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಜಿಪಿ ಎಚ್.ಸಿ.ಯಾದವ್, ತಾ.ಪಂ.ಮಾಜಿ ಸದಸ್ಯ ವೈ.ರಮೇಶ, ಗ್ರಾ.ಪಂ.ಅಧ್ಯಕ್ಷೆ ದುರುಗಮ್ಮ, ಉಪಾಧ್ಯಕ್ಷ ಶೇರಖಾನ್, ಗ್ರಾ.ಪಂ.ಸದಸ್ಯರಾದ ಅಶೋಕರಾಣಿ, ನಾಗೇಂದ್ರ, ರಾಮಾಂಜನೇಯ, ಸುನೀಲ್, ಅಜಗರ್ ಸೇರಿ ಅನೇಕರಿದ್ದರು.

Advertisement

ಇದನ್ನೂ ಓದಿ : ಆಟವಾಡುತ್ತಿದ್ದ ಬಾಲಕನ ಮೇಲೆ ಹತ್ತಿದ ಫೋರ್ಡ್ ಕಾರು

Advertisement

Udayavani is now on Telegram. Click here to join our channel and stay updated with the latest news.

Next