Advertisement

ಮುಳುವಾದೀತೆ ಕೆರೆ ತುಂಬಿಸುವ ಯೋಜನೆ?

03:36 PM Nov 21, 2019 | Naveen |

ಕೆ. ನಿಂಗಜ್ಜ
ಗಂಗಾವತಿ: ಜಿಲ್ಲೆಯ ವಿವಿಧ ತಾಲೂಕಿನ ಕೆರೆ ತುಂಬಿಸುವ ಯೋಜನೆಯಿಂದ ಭವಿಷ್ಯದಲ್ಲಿ ಸಾವಿರಾರು ಎಕರೆ ಭೂಮಿಗೆ ನೀರಾವರಿ ಕಲ್ಪಿಸಿರುವ ವಿಜಯನಗರ ಕಾಲುವೆಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಆತಂಕವಾಗಿದೆ.

Advertisement

ಹಿಂದೆ ವಿಜಯನಗರದ ಅರಸರು ತುಂಗಭದ್ರಾ ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ನದಿ ಪಾತ್ರದ ಸಾವಿರಾರು ಎಕರೆ ಭೂಮಿಗೆ ನೀರಾವರಿ ಕಲ್ಪಿಸಿದ್ದರು. ಇದರಿಂದ ಶಿವಪೂರ, ಸಾಣಾಪೂರ, ಆನೆಗೊಂದಿ, ದೇವಘಾಟ, ಕಂಪ್ಲಿ ಹೀಗೆ ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ತಾಲೂಕಿನ ಭೂಮಿಗೆ ನೀರುಣಿಸಲಾಗುತ್ತಿದೆ. ಆದರೆ ಬಯಲು ಸೀಮೆ ಪ್ರದೇಶದಲ್ಲಿ ಬರ ಹೋಗಲಾಡಿಸಲು ನದಿ ಮೂಲಕ ಕೆರೆ ತುಂಬಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕನಕಗಿರಿ ಕ್ಷೇತ್ರದ 28
ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ಇದರಿಂದ ಕನಕಗಿರಿ ಭಾಗದ ಸಮಸ್ತ ಕೆರೆಗಳು ವರ್ಷದ 12 ತಿಂಗಳು ಭರ್ತಿಯಾಗಿವೆ.

ಜಾಕ್‌ವೆಲ್‌ ಮೂಲಕ ನೀರು: ಕನಕಗಿರಿ ಭಾಗದ ಕೆರೆಗಳ ಭರ್ತಿಗೆ ಚಿಕ್ಕಜಂತಗಲ್‌ ಹತ್ತಿರ ತುಂಗಭದ್ರಾ ನದಿಯಿಂದ ಜಾಕ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಮಳೆಗಾಲದಲ್ಲಿ ಮಾತ್ರ ಪ್ರವಾಹದ ನೀರನ್ನು ಕೆರೆಗೆ ಸಾಗಿಸುವಂತೆ ನಿಯಮವಿದ್ದರೂ, ಕನಕಗಿರಿ ಕ್ಷೇತ್ರದ ಕೆರೆಗಳಿಗೆ ವರ್ಷದ 12 ತಿಂಗಳೂ ನೀರು ಪೂರೈಸಲಾಗುತ್ತಿದ್ದು, ಹೀಗಾಗಿ ನದಿ ಪಾತ್ರದ ಕೆಳ ರೈತರಿಗೆ ನೀರು ಇಲ್ಲವಾಗಿದೆ. ನದಿಯಲ್ಲಿ ನೀರಿನ ಕೊರತೆಯಿಂದ ಜಲಚರ ಪ್ರಾಣಿಗಳು ಮೃತಪಡುತ್ತಿದ್ದು, ನದಿ ಮೂಲಕ ಕೃಷಿ ಮಾಡುವ ರೈತರು ನೀರಿಲ್ಲದೇ ಪರಿತಪಿಸುವಂತಾಗಿದೆ.

ಅವೈಜ್ಞಾನಿಕ ಕ್ರಮ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಎರಡನೇ ಹಂತದಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಮಹಮ್ಮದ್‌ ನಗರ, ನಾರಾಯಣಪೇಟೆ ಮಧ್ಯೆ ತುಂಗಭದ್ರಾ ನದಿಯ ಗಂಗಮ್ಮನ ಮಡಗು ಹತ್ತಿರದಿಂದ ನೀರು ಪೂರೈಸಲು ಉದ್ದೇಶಿಸಲಾಗಿದೆ. ಗಂಗಮ್ಮನ ಮಡಗು ನೈಸರ್ಗಿಕವಾಗಿ ಆಳವಾದ ತಗ್ಗು ನಿರ್ಮಾಣವಾಗಿದೆ. ಇಲ್ಲಿ 10 ವರ್ಷಕ್ಕಾಗುವಷ್ಟು ನೀರು ಸಂಗ್ರಹವಾಗುತ್ತದೆ. ಇದು ಮೊಸಳೆ, ಮೀನು ಮತ್ತು ನೀರನಾಯಿ ಹಾಗೂ ವಿವಿಧ ಬಗೆಯ ಪಕ್ಷಿಗಳ ಆಶ್ರಯ ತಾಣವಾಗಿದೆ.

ಮುಖ್ಯವಾಗಿ ತುಂಗಭದ್ರಾ ನದಿಗೆ ವಿಜಯನಗರ ಅರಸರು ನಿರ್ಮಿಸಿರುವ ನೈಸರ್ಗಿಕ ಅಣೆಕಟ್ಟುಗಳಿಗೆ ನೀರೊದಗಿಸುವ ಪ್ರಮುಖ ಜೀವ ಜಲವಾಗಿದೆ. ಇಲ್ಲಿ ಜಾಕ್‌ವೆಲ್‌ ನಿರ್ಮಿಸಿ ನೀರು ಪೂರೈಕೆ ಆರಂಭಿಸಿದರೆ ನದಿಯಲ್ಲಿ ನೀರು ಬತ್ತಿ ಹೋಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next