ಗಂಗಾವತಿ: ರಾಜ್ಯದ ಗಮನ ಸೆಳೆದಿದ್ದ ಡಿಜೆ ಸೌಂಡ್ ಗೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಇಲಾಖೆ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ಸೇರಿ ಗಣೇಶಸಮಿತಿಯ ಆರು ಜನರ ಮೇಲೆ ಕೇಸ್ ದಾಖಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಡಿಜೆ, ಇದಕ್ಕೆ ಸಂಬಂಧಪಟ್ಟ ಲಾರಿ, ಟ್ರಾಕ್ಟರ್ ಹಾಗೂ ಎರಡು ಬೃಹತ್ ಗಾತ್ರದ ಪವರ್ ಜನರೇಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
21 ನೇಯ ದಿನದ ಗಣೇಶನ ವಿಸರ್ಜನೆ ವೇಳೆ ಪ್ರಶಾಂತನಗರದ ಗಣೇಶನ ಸಮಿತಿಯವರು ಆಯೋಜಿಸಿದ್ದ ಮೆರವಣಿಗೆಯಲ್ಲಿ ಹೆಚ್ಚಿನ ಧ್ವನಿವರ್ಧಕ ಬಳಸಿ ಡಿಜೆ ಹಾಗೂ ಲೇಜರ್ ಲೈಟ್ ಗಳನ್ನು ಬಳಸಿ ಬೃಹತ್ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸುದೀಪ್ ಸಜ್ಜನ (26) ಎಂಬ ಯುವಕ ಕುಣಿಯುವ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಮಂಗಳವಾರ ಸಂಜೆ 5.45ಕ್ಕೆ ಕೇಸ್ ದಾಖಲಿಸಿಕೊಂಡಿದೆ.
ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್, ಪ್ರಶಾಂತನಗರ ಗಣೇಶ ಸಮಿತಿಯ ಬಸವರಾಜ ತಾವರಗೇರಾ, ರವಿ ಪವಾಡಶೆಟ್ಟಿ, ಡಿಜೆ ಮಾಲೀಕ ಸಂತೋಷ ಮುಧೋಳ, ಡಿಜೆ ಆಪರೇಟರ್ ಶಿವಸಾಗರ ರಾಮದುರ್ಗಾ, ಟ್ರಾಕ್ಟರ್ ಚಾಲಕ ಮತ್ತು ಮಾಲೀಕ ಕೆ. ಅಶೋಕ ಜುಲೈ ನಗರ ಇವರ ಮೇಲೆ ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಪೊಲೀಸರು ಬಂಧಿಸಿಲ್ಲ.
ಇದನ್ನೂ ಓದಿ: KGF ನಂತಹ ಸಿನಿಮಾ ಸಿಕ್ಕಿದ್ದು ಯಶ್ ಅದೃಷ್ಟ..ರವಿತೇಜ ಮಾತಿಗೆ ಗರಂ ಆದ ರಾಕಿಭಾಯ್ ಫ್ಯಾನ್ಸ್