Advertisement

Gangavati: ಅಕ್ರಮ ಪಟಾಕಿ ದಾಸ್ತಾನು… ಅಧಿಕಾರಿಗಳ ದಾಳಿ, ಲಕ್ಷಾಂತರ ರೂ. ಪಟಾಕಿ ವಶಕ್ಕೆ

05:10 PM Oct 12, 2023 | Team Udayavani |

ಗಂಗಾವತಿ: ಬೆಂಗಳೂರು ಮತ್ತು ತಮಿಳುನಾಡು ಪಟಾಕಿ ದಾಸ್ತಾನು ಮಳಿಗೆಗಳಲ್ಲಿ ಬೆಂಕಿ ಅನಾಹುತ ಜರುಗಿ ಹಲವರು ಮೃತರಾದ ಬೆನ್ನ ಹಿಂದೆ ಸರಕಾರ ಎಚ್ಚೆತ್ತುಕೊಂಡಿದ್ದು ಸರಕಾರದ ಸೂಚನೆ ಮೇರೆಗೆ ತಾಲೂಕು ಆಡಳಿತ ನಗರದ ಪಟಾಕಿ ಮಾರಾಟಗಾರರ ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ.ಗಳ ಪಟಾಕಿ ಮತ್ತು ಸಿಡಿ ಮದ್ದುಗಳನ್ನು ವಶಕ್ಕೆ ಪಡೆದಿದೆ.

Advertisement

ತಹಸೀಲ್ದಾರ್ ಸೂಚನೆ ಮೇರೆಗೆ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ತಾತ್ಕಲಿಕ ಪರವಾನಿಗೆ ಪಡೆದಿರುವ ಮತ್ತು ಅರ್ಜಿ ಸಲ್ಲಿಸಿರುವ ಕರಿಬಸಪ್ಪ ಅಂಗಡಿ, ಅಶೋಕ ಹೂಗಾರ, ಮಹಾಬಳೇಶ್ವರ, ಪಾಂಡುರಂಗ, ಬಳ್ಳಾರಿ ಚನ್ನಬಸಪ್ಪ, ಚಂದ್ರಶೇಖರ, ಪಾರ್ವತಿ, ಪ್ರಲ್ಹಾದ್ ಇವರ ಅಂಗಡಿ ಮತ್ತು ದಾಸ್ತಾನು ಮಳಿಗೆಗಳ ಮೇಲೆ ತಾಲೂಕು ಆಡಳಿತದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ಒಟ್ಟು ಮೂರು ಕಡೆ ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿ ಮತ್ತು ಸಿಡಿ ಮದ್ದುಗಳ ಪಂಚನಾಮೆ ನಡೆಸಿ ವಶಕ್ಕೆ ಪಡೆದು ಅಕ್ರಮವಾಗಿ ಸಂಗ್ರಹಿಸಿದವರ ಮೇಲೆ ನಗರಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

ದಾಳಿಯಲ್ಲಿ ಡಿವೈಎಸ್‌ಪಿ ಸಿದ್ದಲಿಂಗಪ್ಪ ಗೌಡ, ನಗರಠಾಣೆ ಪ್ರಭಾರಿ ಪಿಐ ಮಂಜುನಾಥ ಸಿಲವೇರಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ತಾ.ಪಂ.ಇಒ ಲಕ್ಷ್ಮಿ ದೇವಿ, ಲೋಕೊಪಯೋಗಿ ಇಲಾಖೆಯ ಎಇಇ ವಿಶ್ವನಾಥ, ಜೆಸ್ಕಾಂ ಇಂಜಿನಿಯರ್ ಪ್ರವೀಣ ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳಿದ್ದರು.

ಜನತೆಯ ಸುರಕ್ಷತೆಯ ದೃಷ್ಠಿಯಿಂದ ಜನ ವಸತಿ ಪ್ರದೇಶದಲ್ಲಿ ಪಟಾಕಿ, ಸಿಡಿಮದ್ದುಗಳ ಅಕ್ರಮ ದಾಸ್ತಾನು ಪತ್ತೆ ಮಾಡಲು ಸರಕಾರ ಸೂಚನೆ ನೀಡಿದೆ. ಗಂಗಾವತಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳ ಮಾರಾಟ ಮಾಡುವವರ ಮಳಿಗೆ ಅಂಗಡಿಗಳಲ್ಲಿ ಪಟಾಕಿ ದಾಸ್ತಾನು ಪರಿಶೀಲನೆ ನಡೆಸಲಾಗುತ್ತಿದೆ. ಗಂಗಾವತಿಯಲ್ಲಿ 2-3 ಕಡೆ ಅಕ್ರಮ ಪಟಾಕಿಗಳ ದಾಸ್ತಾನು ಪತ್ತೆಯಾಗಿದ್ದು ಪಂಚನಾಮೆ ಇತರೆ ಅಗತ್ಯ ಕಾನೂನು ರೀತ್ಯಾ ಅವರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಸಾರ್ವಜನಿಕರು ಸಹ ತಾಲೂಕಿನಲ್ಲಿ ಅಕ್ರಮವಾಗಿ ಪಟಾಕಿ, ಸಿಡಿಮದ್ದುಗಳು ಮತ್ತು ಸ್ಪೋಟಕ ವಸ್ತುಗಳನ್ನು ಯಾರಾದರೂ ಸಂಗ್ರಹಿಸಿದ ಮಾಹಿತಿ ಇದ್ದರೆ ಪೊಲೀಸ್ ಇಲಾಖೆ ಅಥವಾ ತಹಸೀಲ್ ಕಚೇರಿಗೆ ತಿಳಿಸಬೇಕು.
-ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್‌ಪಿ.

ಇದನ್ನೂ ಓದಿ: Dudhsagar Falls: ನಿರ್ಬಂಧ ತೆರವು… ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಮುಕ್ತ ಅವಕಾಶ

Advertisement
Advertisement

Udayavani is now on Telegram. Click here to join our channel and stay updated with the latest news.

Next