ಗಂಗಾವತಿ: ಬೃಹತ್ ಟಿಪ್ಪರ್ ಗಳಲ್ಲಿ ಬೆಂಗಳೂರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ರಾತ್ರಿ ವೇಳೆ ಮರಳನ್ನು ಅಕ್ರಮವಾಗಿ ಬೆಂಗಳೂರು, ಹುಬ್ಬಳ್ಳಿ, ಗದಗ, ಹೊಸಪೇಟೆ ಸಾಗಿಸುವ ಲಾರಿ, ಟಿಪ್ಪರ್ ಗಳ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಿದ್ದು ಗುರುವಾರ ರಾತ್ರಿ ನಗರದ ಕೊಪ್ಪಳ ರಸ್ತೆಯ ಸಮರ್ಥ ಹೋಟೆಲ್ ಬಳಿ 16 ಟನ್ ಮರಳನ್ನು ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಟಿಪ್ಪರ್ ಮೇಲೆ ತಹಸೀಲ್ದಾರ್ ಯು ನಾಗರಾಜ ಪೊಲೀಸ್ ಇಲಾಖೆ ನೇತೃತ್ವದ ತಂಡ ದಾಳಿ ನಡೆಸಿ ಟಿಪ್ಪರ್ ನ್ನು ವಶಕ್ಕೆ ಪಡೆದಿದೆ.
ಟಿಪ್ಪರ್ ನ್ನು ವಶಕ್ಕೆ ಪಡೆದು 12 ಗಂಟೆ ಕಳೆದರೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಇದುವರೆಗೂ ಕೇಸ್ ದಾಖಲಾಗಿಲ್ಲ ಅಥವಾ ದಂಡವನ್ನು ವಸೂಲಿ ಮಾಡಲಾಗಿದೆ ಎನ್ನಲಾಗಿದೆ.
ಈ ಮಧ್ಯೆ ತಹಸೀಲ್ದಾರ್ ಯು. ನಾಗರಾಜ ಉದಯವಾಣಿ ಜತೆ ಮಾತನಾಡಿ ರಾತ್ರಿ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ಟಿಪ್ಪರ್ ನ್ನು ವಶಕ್ಕೆ ಪಡೆಯಲಾಗಿದೆ. ಮರಳು ಅಕ್ರಮ ಸಾಗಣೆ ಬಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಮಾಲೀಕರನ್ನು ಕರೆಸಿ ದಂಡ ಅಥವಾ ಕೇಸ್ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.