ಗಂಗಾವತಿ: ಕಸಾಪ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಸಮ್ಮೇಳನದ ವೇದಿಕೆಯಲ್ಲಿ ಶೇಖರಗೌಡ ಮಾಲೀಪಾಟೀಲ್ ಪರವಾಗಿ ಅವರ ಬಣದ ಕೆಲವರು ವೇದಿಕೆ ಮೇಲೆ ಹಾಗೂ ಸಮ್ಮೇಳನಕ್ಕೆ ಆಗಮಿಸಿದ ಕಸಾಪ ಅಜೀವ ಸದಸ್ಯ ಮತದಾರರಿಗೆ ಶೇಖರಗೌಡ ಮಾಲೀಪಾಟೀಲ್ ಫೋಟೊ ಇರುವ ಕರಪತ್ರಗಳನ್ನು ವಿತರಿಸಿ ಬೆಂಬಲಿಸುವಂತೆ ಕೋರಿದರು.
ಸಮ್ಮೇಳನದಲ್ಲಿ ಕಸಾಪ ರಾಜ್ಯ ಅಭ್ಯರ್ಥಿ ಶೇಖರಗೌಡ ಮಾಲೀಪಾಟೀಲ್ ಪರ ಅವರ ಬೆಂಬಲಿಗರೊಬ್ಬರು ಭಿತ್ತಿ ಪತ್ರಗಳನ್ನು ಅತಿಥಿಗಳಿಗೆ ವಿತರಿಸಿದ್ದು, ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.
ಕಲ್ಗುಡಿ ಗ್ರಾಮದಲ್ಲಿ ಚಿದಾನಂದ ಅವಧೂತರ ಮಹಾಮಂಟಪದಲ್ಲಿ ನಡೆದ 2ನೇ ದಿನದ ಸಮ್ಮೇಳನದಲ್ಲಿ ಕವಿಗೋಷ್ಠಿಯ ವೇದಿಕೆಯಲ್ಲಿ ಬೆಂಗಳೂರಿನ ಶೇಖರಗೌಡ ಬೆಂಬಲಿಗ ಮಹೇಶ ಎನ್ನುವರು ವೇದಿಕೆ ಮೇಲಿದ್ದ ಅತಿಥಿಗಳಿಗೆ ಚುನಾವಣೆಯ ಕರ ಪತ್ರಗಳನ್ನು ವಿತರಿಸಿ ಪ್ರಚಾರ ನಡೆಸಿದರು. ಶೇಖರಗೌಡ ಅವರು ವೇದಿಕೆ ಮುಂದೆ ಕುಳಿತು ಪ್ರಚಾರ ನಡೆಸಿದರು. ಇದು ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ಬಹುತೇಕ ಪದಾಧಿಕಾರಿಗಳ ಹತ್ತಿರ ಶೇಖರಗೌಡ ಮಾಲೀಪಾಟೀಲ್ ಪೊಟೊ ಇರುವ ಕರಪತ್ರ ಕಂಡುಬಂದವು.
ಕರಪತ್ರ ಹಂಚಿದ್ದು ಗೊತ್ತಿಲ್ಲ: ವೇದಿಕೆಯಲ್ಲಿ ನನ್ನ ಪರವಾಗಿ ಚುನಾವಣಾ ಕರಪತ್ರ ಹಂಚಿಕೆ ಮಾಡಿರುವುದು ನನಗೆ ಗೊತ್ತಿಲ್ಲ ಚುನಾವಣೆ ನೀತಿಸಂಹಿತೆ ಇರುವುದರಿಂದ ನಾನು ವೇದಿಕೆಗೆ ಹೋಗಿಲ್ಲ. ಸಮ್ಮೇಳನ ವೀಕ್ಷಣೆ ಮಾಡಲು ಬಂದಿದ್ದೆ. ಯಾರು ಸಹ ಚುನಾವಣೆ ಪ್ರಚಾರಕ್ಕೆ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಉಪಯೋಗುಸಿಕೊಳ್ಳಬಾರದೆಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ್ ಉದಯವಾಣಿ ಗೆ ತಿಳಿಸಿದರು.