ಗಂಗಾವತಿ: ನಗರದ ಕಿಲ್ಲಾ ಏರಿಯಾದಲ್ಲಿ ರವಿವಾರ ರಾತ್ರಿ ಕರ್ತವ್ಯ ನಿರತ ಪೊಲೀಸರ ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಗರದ ಕಿಲ್ಲಾ ಏರಿಯಾ ಬೀಟ್ ನಲ್ಲಿ ಶಿವರಾಜ್ ಮತ್ತು ಶರಣಪ್ಪ ಎಂಬ ಪೊಲೀಸ್ ಪೇದೆಗಳು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಮೂರು ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಯುವಕರು ನಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ನಿಮಗಿಲ್ಲ, ನಿಮ್ಮದು ಜಾಸ್ತಿಯಾಗಿದೆ ಎಂದು ಏಕಾಏಕಿ ಕಬ್ಬಿಣದ ಆಯುಧ ದಿಂದ ಪೊಲೀಸ್ ಶರಣಪ್ಪ ಮೇಲೆ ಹಲ್ಲೆ ಮಾಡಿದ್ದು, ತಲೆ ಮತ್ತು ಮುಖದ ಮೇಲೆ ಗಾಯಗಳಾಗಿವೆ. ಪ್ರಶ್ನೆ ಮಾಡಲು ಹೋದ ಇನ್ನೊಬ್ಬ ಪೊಲೀಸ್ ಶಿವರಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಈ ಸಂದರ್ಭದಲ್ಲಿ ಮಹಿಳಾ ಪಿಎಸ್ಐ ತಳಕ್ಕೆ ಆಗಮಿಸಿದ್ದು ಕಿಡಿಗೇಡಿಗಳು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.