ಗಂಗಾವತಿ: ಪೀರ ಸಾಬನ ಲಾರಿಯಲ್ಲಿ ತಾವರಗೇರಿಯಿಂದ ಗಂಗಾವತಿಗೆ ಬಂದವನ್ನು ಕನ್ನಡ ಭಾಷೆ ಶಿಕ್ಷಕ ವೃತ್ತಿ ನೀಡಿ ಇದೀಗ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನೀಡಿದ್ದು ಕನ್ನಡ ಭಾಷೆಗೆ ಮನುಷ್ಯನ ಬದುಕನ್ನು ರೂಪಿಸುವ ಶಕ್ತಿ ಇದೆ ಎಂದು ಗಂಗಾವತಿ ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಿ.ಎಚ್.ನಾರಿನಾಳ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಉದಯವಾಣಿ ಜತೆ ಮಾತನಾಡಿ, ಕನ್ನಡ ಭಾಷೆ ಮತ್ತು ಕರುನಾಡಿನ ಮಾತೃ ಹೃದಯ ಬಹಳ ದೊಡ್ಡದು ಕನ್ನಡವನ್ನು ಮನಸ್ಸಿನಿಂದ ಪ್ರೀತಿಸಿದರೆ ಅತ್ಯುನ್ನತ ಸ್ಥಾನಕ್ಕೇರುವುದು ಖಚಿತ. ಅನ್ನ ಕೊಡುವ ಭಾಷೆಯ ಜತೆಗೆ ಮಾತೃಭಾಷೆ ಕನ್ನಡವನ್ನು ಮರೆತರೆ ಭವಿಷ್ಯ ಕಾಣಿಸದು ಆದ್ದರಿಂದ ಪ್ರತಿ ಹಂತದಲ್ಲೂ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಉದ್ಯೋಗ ಮತ್ತಿತರ ಕಾರಣಕ್ಕೆ ಇಂಗ್ಲೀಷ್ ಕಲಿಯುವುದು ಅನಿವಾರ್ಯವಾಗಿದೆ. ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವುದು ಸರಿಯಾದ ಕ್ರಮವಲ್ಲ.ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿ ಅಥವಾ ಸರಕಾರಗಳು ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕನ್ನಡ ಶಾಲೆಗಳಲ್ಲ. ಗುಣಾತ್ಮಕ ಕಲಿಕೆಗೆ ಆದ್ಯತೆ ನೀಡಬೇಕು. ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಮಕ್ಕಳನ್ನು ಪಾಲಕರು ಶಾಲೆಗೆ ದಾಖಲಿಸುವಂತೆ ಮಾಡಬೇಕು. ಸರಕಾರಿ ನೌಕರರು ರಾಜಕಾರಣಿಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ಓದುವ ವಾತಾವರಣ ಸೃಷ್ಠಿಯಾಗಬೇಕು. ಸಮ್ಮೇಳನದ ಹೆಸರಿನಲ್ಲಿ ಅದ್ದೂರಿತನ ಮೆರೆಯದೇ ಜನರ ಬದುಕನ್ನು ಹಸನು ಮಾಡುವ ಗೋಷ್ಠಿ, ವಿಚಾರ ಮಂಥನಗಳ ಕಾರ್ಯ ಹೆಚ್ಚಾಗಬೇಕು ಎಂದರು.
Related Articles
ವೃತ್ತಿಪರ ಬರಹಗಾರರು, ಲೇಖಕರು ಕಸಾಪ ಚುಕ್ಕಾಣಿ ಹಿಡಯುವಂತಾಗಬೇಕು. ಇತ್ತೀಚೆಗೆ ರಾಜಕೀಯ ನಿರಾಶ್ರಿತರು ಕಸಾಪದಲ್ಲಿ ಅಧಿಕಾರ ಪಡೆಯುತ್ತಿರುವುದು ವಿಷಾದದ ಸಂಗತಿಯಾಗಿದ್ದು ಇದು ಹೋಗಬೇಕು. ಕಸಾದ ಸದಸ್ಯತ್ವ ಪಡೆಯಲು ಕೆಲ ನಿಯಮಗಳು ಅಗತ್ಯವಾಗಿವೆ ಎಂದರು ಹೇಳಿದರು.
ಅನುಷ್ಠಾನ ಅಗತ್ಯ: ಸಾಹಿತ್ಯ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷರ ಭಾಷಣ ಮತ್ತು ಸಮ್ಮೇಳನದ ನಿರ್ಣಯಗಳನ್ನು ಸರಕಾರ ತಪ್ಪದೇ ಅನುಷ್ಠಾನ ಮಾಡಬೇಕು. ಗಂಗಾವತಿ ಭತ್ತದ ಕಣಜವಾಗಿತ್ತು. ಜಾಗತೀಕರಣದ ಪರಿಣಾಮ ರೈಸ್‌ಗಳು ಬಂದ್ ಆಗಿದ್ದು ಇಲ್ಲಿಯ ಜನ ಉದ್ಯೋಗಕ್ಕಾಗಿ ಅನ್ಯ ಊರುಗಳಿಗೆ ಹೋಗುವ ಸ್ಥಿತಿಯುಂಟಾಗಿದೆ ಎಂದರು.
ಕಿಷ್ಕಿಂದಾ ಅಂಜನಾದ್ರಿ, ಪಂಪಾಸರೋವರ, ಆನೆಗೊಂದಿ, ಸಾಣಾಪೂರ ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳು, ಸಾಣಾಪೂರ ಫಾಲ್ಸ್., ಲೇಕ್(ಕೆರೆ), ಮೋರ್ಯರ ಬೆಟ್ಟ, ಗಂಡುಗಲಿ ಕುಮಾರ ರಾಮನ ಬೆಟ್ಟ, ಹೇಮಗುಡ್ಡ, ಕನಕಗಿರಿ, ವಾಣಿಭದ್ರೇಶ್ವರ, ದೇವಘಾಟ ಅಮೃತೇಶ್ವರ ಹಾಗೂ ಕಿಷ್ಕಿಂಧಾ ಏಳುಬೆಟ್ಟ ಪ್ರದೇಶದ ವೀಕ್ಷಣೆಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಪ್ರಚಾರ ಮಾಡುವ ಮೂಲಕ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಠಿ ಯೋಜನೆ ಆರಂಭಿಸಬೇಕೆಂದರು.
ಸಾಹಿತಿ ಅಥವಾ ಬರಹಗಾರನಿಗೆ ಸಮುದಾಯದ ಕಾಳಜಿ ಅಗತ್ಯವಾಗಿದ್ದು ಶೋಷಿತರು ದೀನ ದಲಿತ ಬದುಕಿನ ಕಷ್ಟ ಸುಖಗಳ ಕುರಿತು ಪರಿಜ್ಞಾನವಿರಬೇಕು. ಗಂಗಾವತಿಯಲ್ಲಿ ಜರುಗಿದ ಪೌರಕಾರ್ಮಿಕ ಖಾಯಂ ಅಥವಾ ಸರಕಾರದಿಂದ ನೇರ ವೇತನ ಹೋರಾಟದಲ್ಲಿ ಕಾರ್ಮಿಕ ಮುಖಂಡರು, ನಾನು ಸೇರಿ ಸಾಹಿತಿಗಳ ಬೆಂಬಲ ಸಿಕ್ಕಿದ್ದರಿಂದ ರಾಜ್ಯದ 35 ಸಾವಿರ ಪೌರಕಾರ್ಮಿಕರಿಗೆ ಸೇವಾ ಭದ್ರತೆ ಲಭಿಸಿದ್ದು ಹೋರಾಟಗಾರರಿಗೆ ಸಾಹಿತಿಗಳಿಗೆ ಸಂದ ಜಯವಾಗಿದೆ. ಕನ್ನಡ ಭಾಷೆ ಅತ್ಯಂತ ಸೊಗಸಾಗಿದ್ದು ವಿದ್ಯಾರ್ಥಿ, ಯುವ ಜನರು ಮೊಬೈಲ್ ಗೀಳು ಬಿಟ್ಟು ಹೆಚ್ಚೆಚ್ಚು ಓದಬೇಕು. ಕುವೆಂಪು, ತೇಜಸ್ವಿ, ಕಾರ್ನಾಡ್, ಅನಂತಮೂರ್ತಿ, ಬಸವಣ್ಣ, ಡಾ|ಬಿ.ಆರ್.ಅಂಬೇಡ್ಕರ್ ಸೇರಿ ವಿಶ್ವದ ಕ್ರಾಂತಿಗಳ ಕುರಿತು ಅಧ್ಯಾಯನ ಮಾಡುವ ಮೂಲಕ ಕನ್ನಡ ನೆಲ, ಜಲ ಮತ್ತು ಭಾಷೆಯನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ. –ಸಿ.ಎಚ್.ನಾರಿನಾಳ ತಾಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು