ಗಂಗಾವತಿ: ಅಧಿಕಾರದ ಆಸೆಯಿಂದ ಸಮಾಜವನ್ನು ಕಡೆಗಣಿಸುತ್ತಿರುವ ಸಚಿವ ಸಿಸಿ ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ತಕ್ಕ ಪಾಠವನ್ನು ಜನತೆ ಕಲಿಸಲಿದ್ದಾರೆಂದು ಆಮ್ ಅದ್ಮಿ ಪಾರ್ಟಿಯ ಮುಖಂಡ ಹಾಗೂ ನ್ಯಾಯವಾದಿ ಶರಣಪ್ಪ ಸಜ್ಜಿಹೊಲ ಟೀಕಿಸಿದ್ದಾರೆ.
ಪಂಚಮಸಾಲಿ ಸಮಾಜ ಕಳೆದ ಹತ್ತಾರು ವರ್ಷಗಳಿಂದ ಪೂಜ್ಯ ಜಯಬಸವ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದೆ. ಹಿಂದುಳಿದ ಮತ್ತು ಕೃಷಿಕ ಪಂಚಮಸಾಲಿ ಸಮಾಜವನ್ನು ಅಭಿವೃದ್ಧಿ ಪಡಿಸುವ ಉದ್ದೇಶಕ್ಕಾಗಿ ನಿಸ್ವಾರ್ಥ ರೀತಿಯಲ್ಲಿ 2ಎ ಮೀಸಲಾತಿಯ ಹಕ್ಕಿಗಾಗಿ ನಿರಂತರ ಪರಿಶ್ರಮ ಪಡುತ್ತಿರುವ ಪೂಜ್ಯರ ವಿಷಯದಲ್ಲಿ ಮತ್ತು ಸಮಾಜದ ವಿಷಯದಲ್ಲಿ ತೋರುತ್ತಿರುವ ಅಗೌರವ ಹಾಗೂ ನಿರ್ಲಕ್ಷ್ಯ ಮತ್ತು ನಿಂದೆಗಳನ್ನು ಪಂಚಮಸಾಲಿ ಸಮಾಜ ಸಹಿಸುವುದಿಲ್ಲ ಎಂದರು.
ತಮ್ಮ ಅಧಿಕಾರ ದಾಹಕ್ಕಾಗಿ ಮತ್ತು ಹೈಕಮಾಂಡ್ ಅನ್ನು ಮೆಚ್ಚಿಸುವ ಉದ್ದೇಶದಿಂದ ಈ ರೀತಿಯ ಸಮಾಜದ ಶ್ರೀಗಳ ವಿರುದ್ಧ ಶ್ರೀಗಳ ಸಮಾಜಮುಖಿ ಧೋರಣೆಯನ್ನು ಖಂಡಿಸಿ ಹೇಳಿಕೆ ನೀಡಿದ ಸಚಿವ ಸಿ ಸಿ ಪಾಟೀಲರು ಮತ್ತು ಮುರುಗೇಶ್ ನಿರಾಣಿ ಯವರು ಇಡೀ ಸಮಾಜದ ಖಂಡನೆಗೆ ಅರ್ಹರಾಗಿದ್ದಾರೆ. ಸಿಸಿ ಪಾಟೀಲರು ಮತ್ತು ನಿರಾಣಿ ಈ ಕೂಡಲೇ ಶ್ರೀಗಳ ಮತ್ತು ಸಮಾಜದ ಕ್ಷಮೆ ಕೋರಬೇಕು ಹಾಗೂ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಪಾಟೀಲರನ್ನು ಸಮಾಜದ ನಾಯಕರೆಂದುಕೊಂಡು ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ಸಮಾಜ ನೀಡಿದ್ದು ಅದರ ಬಲದಿಂದ ಸಚಿವರಾಗಿರುವ ಸಿಸಿ ಪಾಟೀಲರು ಮತ್ತು ನಿರಾಣಿ ಯವರು ಈ ರೀತಿ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಮತ್ತು ಸಮಾಜದಿಂದ ವಿಮುಖ ರಾಗುತ್ತಿರುವುದು ಅವರಿಗೆ ಒಳಿತಲ್ಲ. ಬರುವ ಚುನಾವಣೆಯಲ್ಲಿ ಸಮಾಜವು ತಕ್ಕ ಪಾಠವನ್ನು ಕಲಿಸುತ್ತದೆಎಂದು ಎಚ್ಚರಿಸಿದ್ದಾರೆ ಎಂದು ಹೇಳಿದರು.