ಗಂಗಾವತಿ: ಜನ-ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ 7 ವರ್ಷದ ಕರಡಿಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಪ್ರಕರಣ ತಾಲೂಕಿನ ಗಡ್ಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ಜರುಗಿದೆ.
ಕಳೆದ ಹಲವು ತಿಂಗಳಿಂದ ಗಡ್ಡಿ, ಉಡುಮಕಲ್, ಆಗೋಲಿ, ವಿಠಲಾಪೂರ, ಬೆಣಕಲ್ ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಹೊಲ-ಗದ್ದೆಗೆ ನೀರು ಕಟ್ಟಲು ಮತ್ತು ಬೆಳೆಗಳನ್ನು ಕಾಯಲು ತೆರಳುವವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆಗಳು ನಡೆದಿದ್ದವು.
ಸಾರ್ವಜನಿಕರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಗಡ್ಡಿ ಗ್ರಾಮ ಸೇರಿ ವಿವಿಧೆಡೆ ಬೋನುಗಳನ್ನು ಇರಿಸಿ ಕರಡಿ ಮತ್ತುಚಿರತೆಗಳ ಸೆರೆ ಹಿಡಿಯಲು ಯೋಜನೆ ರೂಪಿಸಿದ್ದರು. ಮಂಗಳವಾರ ರಾತ್ರಿ ಗಡ್ಡಿ ಗ್ರಾಮದಲ್ಲಿ ಕರಡಿ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಕರಡಿಯನ್ನು ವೈದ್ಯಕೀಯ ಪರೀಕ್ಷೆ ನಂತರ ಬಳ್ಳಾರಿ ಜಿಲ್ಲೆಯಲ್ಲಿ ನೂತನವಾಗಿ ಅರಣ್ಯ ಇಲಾಖೆ ಆರಂಭಿಸಿರುವ ಗುಡೇಕೋಟೆ ಕರಡಿ ಧಾಮಕ್ಕೆ ಬಿಡಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.