Advertisement

ಗಂಗಾವತಿ: ಹಣದ ದಾಹಕ್ಕೆ ಕಣ್ಮರೆಯಾಗುತ್ತಿವೆ ಅಪರೂಪದ ಶಿಲಾಬಂಡಿಗಳು ಜೀವಿಸಂಕುಲಕ್ಕೆ ಸಂಚಕಾರ

01:26 PM Jun 05, 2022 | Team Udayavani |

ಗಂಗಾವತಿ : ತಾಲೂಕಿನಲ್ಲಿರುವ ಬೃಹತ್ ಗಾತ್ರದ ಬೆಟ್ಟಗುಡ್ಡಗಳಿಗೆ ಜಾಗತೀಕವಾಗಿ ವೈಶಿಷ್ಠ್ಯ ವಾದ ಸ್ಥಾನಮಾನವಿದ್ದು ಶಿಲಾರೋಹಿಗಳು ಪರಿಸರ ಪ್ರೇಮಿಗಳು ಹಾಗೂ ಶಿಲಾರೋಹಿಗಳು ಇಲ್ಲಿಯ ಕಲ್ಲಿನ ರಾಶಿ, ಬೃಹತ್ ಶಿಲೆಗಳ ಬಂಡೆಗಳನ್ನು ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಾಲೂಕಿನ ಬೆಟ್ಟಗುಡ್ಡಗಳಲ್ಲಿ ಬೃಹತ್ ಶಿಲಾ ಬಂಡೆಗಳು ಮನುಷ್ಯನ ಹಣದಾಹಕ್ಕೆ ರಾತ್ರೋರಾತ್ರಿ ಮಾಯವಾಗುತ್ತಿವೆ. ಇದನ್ನು ತಡೆಬೇಕಾದ ಅರಣ್ಯ, ಕಂದಾಯ, ಪರಿಸರ ಇಲಾಖೆಗಳ ಅಧಿಕಾರಿಗಳು ಚುನಾಯಿತರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ವೈಪರಿತ್ಯ ಬೀರುತ್ತಿದ್ದು ಮಳೆ ಬೆಳೆ ಏರುಪೇರಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ.

Advertisement

ನಮ್ಮ ಬೆಟ್ಟಗುಡ್ಡಗಳು ಭೂಮಿಯ ಆಯಸ್ಸುಗಿಂತಲೂ ಒಂದು ವರೆ ಪಟ್ಟು ಮೊದಲೇ ಜನ್ಮ ತಾಳಿವೆ. ವಿಶೇಷವಾಗಿ ಕಿಷ್ಕಿಂದಾ ಸೇರಿ ತಾಲೂಕಿನ ಏಳುಗುಡ್ಡ ಪ್ರದೇಶದಲ್ಲಿರುವ ಶಿಲಾ ರಾಶಿ ಅಪರೂಪದಿಂದ ಕೂಡಿದೆ.  ಇಲ್ಲಿಯ ಬೆಟ್ಟಗಳಲ್ಲಿ ಅತೀ ಚಿಕ್ಕ ಮತ್ತು ಬೃಹತ್ ಗಾತ್ರದ ಬಂಡೆಗಳು ಚಿತ್ರ ವಿಚಿತ್ರ ಆಕಾರದ ವಿನ್ಯಾಸವಿರುವ ಶಿಲೆಗಳು ಪರಿಸರ ಪ್ರೇಮಿಗಳು ಶಿಲಾ ರೋಹಿಗಳನ್ನು ಸೆಳೆಯುತ್ತಿವೆ. ಹಂಪಿ ಕಿಷ್ಕಿಂದಾ ಅಂಜನಾದ್ರಿ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು ಐಟಿ ಬಿಟಿ ಉದ್ಯೋಗಿಗಳು ದೇಶ ವಿದೇಶದವರು ಶಿಲಾರೋಹಣ ಮಾಡುವ ಹವ್ಯಾಸವಿರುವವರು ಸಾಣಾಪೂರ, ವಿರೂಪಾಪೂರಗಡ್ಡಿ, ಮಲ್ಲಾಪೂರ,ವಾಣಿಭದ್ರೇಶ್ವರ ಬೆಟ್ಟದ ಶಿಲೆಗಳನ್ನು ಬಹಳ ಇಷ್ಟಪಡುತ್ತಾರೆ. ಕಳೆದ ೧೦ ವರ್ಷಗಳಿಂದೀಚೆಗೆ ಇಲ್ಲಿ ಕೆಲವರು ಬೃಹತ್ ಬಂಡೆಗಳನ್ನು ಒಡೆದು ಕಂಬಗಳನ್ನು ಅನ್ಯ ರಾಜ್ಯದ ದ್ರಾಕ್ಷಿ, ಹಣ್ಣು ಹಂಪಲು ಬೆಳೆಯುವ ರೈತರಿಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದು ಇಲ್ಲಿಯ ಬೆಟ್ಟಗಳ ಶೇ. 20 ರಷ್ಟು ಬೃಹತ್ ಬಂಡೆಗಳನ್ನು ಒಡೆದು ಇಡೀ ಪರಿಸರವನ್ನು ನಾಶ ಮಾಡಿದ್ದಾರೆ. ಎಷ್ಟೇ ಕಠಿಣ ಕಾನೂನು ಕ್ರಮ ಕೈಗೊಂಡರೂ ರಾಜಕೀಯ ಪ್ರಭಾವ ಮತ್ತು ಜೀವನ ಮಾಡುವ ನೆಪದಲ್ಲಿ ಪದೇ ಪದೇ ಬೆಟ್ಟದ ಕಲ್ಲುಗಳನ್ನು ಒಡೆದು ಹಾಕಿ ಇಲ್ಲಿಯ ಅಪರೂಪದ ಪ್ರಾಣಿ ಪಕ್ಷಗಳ ಜೀವಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ. ಇದರಿಂದ ಬೆಟ್ಟ ಗುಡ್ಡದಲ್ಲಿದ್ದ ಚಿರತೆ, ಕರಡಿ, ಹಾವು,  ಕಾಡು ಹಂದಿಗಳು ರೈತರ ಹೊಲ ಗದ್ದೆ ಗ್ರಾಮಗಳಿಗೆ ನುಗ್ಗಿ ಪ್ರಾಣ ಹಾನಿ ಮಾಡುತ್ತಿವೆ.

ಮಾಯ: ಕಿಷ್ಕಿಂದಾ ಏಳುಗುಡ್ಡ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳು ವಿಶೇಷ ಹಾಲು, ನಕ್ಷತ್ರ ಆಮೆ, ಉಡಾ, ಓತಿಕ್ಯಾತ, ಹಾವುಗಳು, ಹಾಗೂ ವನಸ್ಪತಿ ಔಷಧಿ ಸಸ್ಯಗಳು ಗಿಡಗಳಿದ್ದವು. ಕಲ್ಲು ಬಂಡೆಗಳನ್ನು ಒಡೆದು ಹಾಕುತ್ತಿರುವುದರಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ಮೋರ್ಯರ ಬೆಟ್ಟದ ಶಿಲಾ ಸಮಾಧಿಗಳು, ಹಿರೇಬೆಣಕಲ್, ಮಲ್ಲಾಪೂರ, ಕಡೆಬಾಗಿಲು, ಜಂಗ್ಲಿ ರಂಗಾಪೂರ, ಹನುಮನಹಳ್ಳಿಯ ದ್ವಾಮಾರಕುಂಟೆಯ ಬೆಟ್ಟಗಳಲ್ಲಿ ಶಿಲಾಯುಗದ ಮನುಷ್ಯರು ಬರೆದ ಗುಹಾಂತರ ಚಿತ್ರಗಳು ಕಲ್ಲು ಬಂಡೆಗಳನ್ನು ಶೀಳುವುದರಿಂದ ನಾಶವಾಗುತ್ತಿವೆ. ಶಿಲಾರೋಹಣ ಮಾಡುವವರಿಗೆ ಅನಾನುಕೂಲವಾಗಿದೆ.

ಕಿಷ್ಕಿಂದಾ ಪ್ರದೇಶ ಸೇರಿ ಏಳು ಗುಡ್ಡ ಪ್ರದೇಶದಲ್ಲಿರುವ ಬೆಟ್ಟಗುಡ್ಡಗಳ ಬೃಹತ್ ಬಂಡೆಗಳು ಶಿಲಾರೋಹಣ ಕ್ರೀಡೆಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಇತ್ತೀಚೆಗೆ ಇಂತಹ ಪ್ರದೇಶದಲ್ಲಿ ಹಣದ ಆಸೆಗಾಗಿ ಬೃಹತ್ ಬಂಡೆಗಳನ್ನು ಒಡೆದು ಮಾರಾಟ ಮಾಡುವ ದಂಧೆ ಹೆಚ್ಚಾಗಿದ್ದು ಇದರಿಂದ ಶಿಲಾರೋಹಿಗಳಿಗೆ ನಿರಾಸೆಯಾಗಿದೆ. ಸರಕಾರ ಶಿಲಾರೋಹಿಗಳ ಜತೆ ಚರ್ಚೆ ಮಾಡಿ ಆನೆಗೊಂದಿ, ಮಲ್ಲಾಪೂರ, ಹಿರೇಬೆಣಕಲ್, ಸಾಣಾಪೂರ, ಜಂಗ್ಲಿ ರಂಗಾಪೂರ ಭಾಗದ ಬೆಟ್ಟಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶಿಲಾರೋಹಣ ಸ್ಥಳಗಳನ್ನು ಗುರುತಿಸಿ ಶಿಲಾರೋಹಣ ಸಾಹಸ ಕ್ರೀಡೆ ಮಾಡಲು ಸ್ಥಳೀಯರಿಗೆ ಅವಕಾಶ ಕಲ್ಪಿಸಿದರೆ. ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲುತ್ತದೆ. ಸ್ಥಳೀಯರಿಗೂ ಶಿಲಾರೋಹಿಗಳಿಂದ ಪ್ರವಾಸೋದ್ಯಮಕ್ಕೆ ಉದ್ಯೋಗ ಕಲ್ಪಿಸಲು ಅವಕಾಶವಾಗುತ್ತದೆ.ಪರಿಸರ ಸಂರಕ್ಷಣೆಗೂ ಶಿಲಾರೋಹಣ ಪ್ರವಾಸೋದ್ಯಮ ನೆರವಾಗಲಿದೆ.ಕೆ.ತಿಮ್ಮಪ್ಪ ಶಿಲಾರೋಹಿ ತರಬೇತಿದಾರ ವಿರೂಪಾಪೂರಗಡ್ಡಿ.

Advertisement

ಜಗತ್ತಿನಲ್ಲಿಯೇ ಅಪರೂಪದ ಬೆಟ್ಟಗುಡ್ಡಗಳುಳ್ಳ ಪ್ರದೇಶ ಕಿಷ್ಕಿಂದಾ ಅಂಜನಾದ್ರಿ ಸುತ್ತಲಿನ ಮತ್ತು ಹಿರೇಬೆಣಕಲ್, ಮುಕ್ಕುಪಿ, ಆಗೋಲಿ ಪ್ರದೇಶವಾಗಿದೆ. ಇಲ್ಲಿ ಬರೀ ಬೃಹತ್ ಬಂಡೆಗಳಿಲ್ಲ. ಈ ಪರಿಸರದಲ್ಲಿರುವ ಪ್ರಾಣಿ, ಪಕ್ಷಿಗಳು, ಹಾವು. ಚೇಳು, ಸರಿಸೃಪಗಳು ಬೇರೆ ಎಲ್ಲಿಯೂ ಕಾಣಲು ಸಿಗುವುದಿಲ್ಲ. ಪ್ರಸ್ತುತ ಹಣದಾಸೆಗಾಗಿ ಇಲ್ಲಿಯ ಗುಡ್ಡಗಳ ಬೃಹತ್ ಕಲ್ಲು ಬಂಡೆಗಳು ಮಾಯವಾಗುತ್ತಿವೆ. ಇಲ್ಲಿ ಸುಮಾರು 100 ಕ್ಕೂ ಹೆಚ್ಚು ಕಲ್ಲಿನ ಕ್ವಾರಿಗಳು, ಕ್ರಷರ್‌ಗಳಿದ್ದು ಇದರಿಂದ ನಿತ್ಯವೂ ಬೆಟ್ಟಗಳು ನೆಲಸಮವಾಗಿ ಪರಿಸರದ ಮೇಲೆ ಆತ್ಯಾಚಾರವಾಗುತ್ತಿದ್ದು ಸರಕಾರ ಕಣ್ಮುಚ್ಚಿ ಕುಳಿತ್ತಿದೆ. ಇದರಿಂದ  ಅಪರೂಪದ ಪರಿಸರ ನಾಶವಾಗಿ ಹವಾಮಾನ ವೈಫರಿತ್ಯಾವಾಗುತ್ತಿದೆ. ಈಗಲೇ ತಡೆದಿದ್ದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅಪರೂಪದ ಬಂಡೆಗಳ ಬೆಟ್ಟ ಸಂರಕ್ಷಣೆ ಮಾಡಿ ಶಿಲಾರೋಹಿಗಳ ಸ್ವರ್ಗ ಮಾಡಲು ಯೋಜನೆ ರೂಪಿಸಬೇಕಿದೆ. ಎನ್.ಚಂದ್ರಶೇಖರ ರೆಡ್ಡಿ ಪರಿಸರ ಪ್ರೇಮಿ.

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next