Advertisement

ಗಂಗಾವತಿ: ಸವಳು ಸಹಿಷ್ಣು ಜಿ.ಎನ್.ವಿ-1109 ಭತ್ತದ ತಳಿಯಿಂದ ಅಧಿಕ ಇಳುವರಿ

05:54 PM Nov 22, 2022 | Team Udayavani |

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ನೀರು ರಸಾಯನಿಕ ಗೊಬ್ಬರ ಬಳಕೆಯ ಪರಿಣಾಮ ಭೂಮಿ ಸವಳಾಗಿದ್ದು, ಸವಳಾಗಿರುವ ಭೂಮಿಯಲ್ಲಿ ಭತ್ತವನ್ನು ಬೆಳೆಯಲು ಅನುಕೂಲವಾಗುವಂತೆ ಕೃಷಿ ವಿಜ್ಞಾನಿಗಳು ಜಿಎನ್‌ವಿ-1109 ಭತ್ತದ ತಳಿಯನ್ನು ಸಂಶೋಧನೆ ಮಾಡಿದ್ದು ಕಡಿಮೆ ಖರ್ಚಿನಲ್ಲಿ ಅಧಿಕ ಭತ್ತದ ಇಳುವರಿಗಾಗಿ ಪ್ರತಿಯೊಬ್ಬ ರೈತ ಜಿಎನ್‌ವಿ-1109 ಭತ್ತದ ತಳಿಯನ್ನು ಹಾಕುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|ರಾಘವೇಂದ್ರ ಎಲಿಗಾರ ಸಲಹೆ ನೀಡಿದರು.

Advertisement

ಅವರು ತಾಲೂಕಿನ ಚಳ್ಳೂರು ಗ್ರಾಮದ ರೈತ ಮಹಾದೇವಪ್ಪ ಗದ್ದೆಯಲ್ಲಿ ಜಿಎನ್‌ವಿ-1109 ಭತ್ತದ ಗದ್ದೆಯ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಸವಳು ಭೂಮಿಗೆ ಸೂಕ್ತವಾದ ಜಿ.ಎನ್.ವಿ-1109 ಹೊಸ ತಳಿಯನ್ನು ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದು. ಹೊಸ ತಳಿಗಳ ಹಾಗೂ ಹೊಸ ತಂತ್ರಜ್ಞಾನಗಳ ಕ್ಷೇತ್ರೋತ್ಸವಗಳಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಡಾ|ಮಹಾಂತ ಶಿವಯೋಗಯ್ಯ ಮಾತನಾಡಿ, ಜಿ.ಎನ್.ವಿ-1109 (ಗಂಗಾವತಿ ಚುರುಮುರಿ) ತಳಿಯು ಮಂಡಕ್ಕಿ ತಯಾರಿಸಲು ಬಳಸಬಹುದಾಗಿದ್ದು, ಸವಳು ಮಣ್ಣಿಗೆ ಸೂಕ್ತವಾದ ತಳಿಯಾಗಿದ್ದು, 130 ದಿನಗಳಲ್ಲಿ ಕಟಾವಿಗೆ ಬರುವುದು ಹಾಗೂ ಸಿಂಪಡಣೆ ವೆಚ್ಚ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆಯಿದ್ದು, ಮಾಗಿದ ಹಂತದಲ್ಲಿ ಕಾಳುಗಳು ಸಿಡಿಯುವುದಿಲ್ಲವಾದ್ದರಿಂದ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದೆಂದು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಹಿರಿಯ ತಾಂತ್ರಿಕ ಅಧಿಕಾರಿ ಫರ್ಜಾನ್‌ ಎಂ. ಕೊರಬು, ಬೀಜ ವಿಜ್ಞಾನಿ ರಾಧಾಜೆ. ಕಾರಟಗಿಯ ಕೃಷಿ ಅಧಿಕಾರಿ ಬೀರಪ್ಪರ, ರೈತರಾದ ಗಾದಿಲಿಂಗಪ್ಪ, ಮಹಾದೇವ ಹಾಗೂ ಶರಣಪ್ಪ ಪಂಪನಗೌಡ, ಸಿದ್ದಪ್ಪ, ರಮೇಶ, ಶಿವಾನಂದ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next