Advertisement

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

09:32 AM Apr 22, 2024 | Team Udayavani |

ಗಂಗಾವತಿ: ಮೇಕೆ ಮರಿಯನ್ನು ಹಿಡಿಯಲು ಆಗಮಿಸಿದ್ದ ಚಿರತೆಯೊಂದು ಕುರಿಹಟ್ಟಿಯಲ್ಲಿ ಬಂಧಿಯಾಗಿ ನಂತರ ಜನರ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾದ ಘಟನೆ ತಾಲೂಕಿನ ಬಸವನದುರ್ಗ ಕೊರಮ್ಮ ಕ್ಯಾಂಪ್ ಹೊರವಲಯದಲ್ಲಿ ಸೋಮವಾರ ಬೆಳಗಿನ ಜಾವ ಜರುಗಿದೆ.

Advertisement

ಆನೆಗೊಂದಿ ಸುತ್ತಮುತ್ತಲಿರುವಾಗ ಬೆಟ್ಟ ಪ್ರದೇಶದಲ್ಲಿ ಚಿರತೆ ಮತ್ತು ಕರಡಿಗಳು ಗ್ರಾಮಗಳಿಗೆ ಆಹಾರ ಮತ್ತು ನೀರಿಗಾಗಿ ಆಗಮಿಸುತ್ತಿವೆ. ಸೋಮವಾರ ಬೆಳಗಿನ ಜಾವ ತಾಲೂಕಿನ ಬಸವನದುರ್ಗ ಕೊರಮ ಕ್ಯಾಂಪ್ ಹೊರವಲಯದ ಕುರಿಗಾಹಿಯ ಕುರಿಹಟ್ಟಿಗೆ ನುಗ್ಗಿದ ಚಿರತೆಯೊಂದು ಮೇಕೆ ಮರಿಯ ಮೇಲೆ ದಾಳಿ ನಡೆಸಿ ತಿನ್ನುವ ಹಂತದಲ್ಲಿದ್ದಾಗ ಕುರಿಗಾಹಿಗಳು ಶಬ್ದ ಮಾಡಿದ್ದರಿಂದ ಅಲ್ಲಿಂದ ಕುರಿ ಮತ್ತು ಮೇಕೆಗಳು ಕುರಿಹಟ್ಟಿಯಿಂದ ಹೊರಗೆ ಬಂದಿವೆ. ಈ ಸಂದರ್ಭದಲ್ಲಿ ಮೇಕೆ ಮರಿಯನ್ನು ತಿನ್ನುತ್ತಿದ್ದ ಚಿರತೆ ಕುರಿಹಟ್ಟಿಯಲ್ಲಿ ಬಂಧಿಯಾಗಿದೆ.

ಗ್ರಾಮದ ಗ್ರಾಮಸ್ಥರು ಕುರಿಹಟ್ಟಿಯ ಸುತ್ತ ಬಂದು ಸೇರಿದ್ದರಿಂದ ಚಿರತೆ ಗಾಬರಿಗೊಂಡು ಕುರಿಹಟ್ಟಿಯಲ್ಲಿ ಘರ್ಜನೆ ಮಾಡುತ್ತ ಸುತ್ತಾಡಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಅರವಳಿಕೆ ನೀಡುವ ಸಿದ್ಧತೆ ನಡೆಸಿದ ಸಂದರ್ಭದಲ್ಲಿ ಚಿರತೆ ಜನರ ಮೇಲೆ ದಾಳಿ ನಡೆಸುವಂತೆ ನುಗ್ಗಿದೆ. ಜನರು ಅಲ್ಲಿಂದ ಕಾಲ್ಕಿತ್ತ ಸಂದರ್ಭದಲ್ಲಿ ಚಿರತೆ ಕುರಿಹಟ್ಟಿಯಿಂದ ನಾಪತ್ತೆಯಾಗಿದೆ.

ಬೋನಿರಿಸುವಂತೆ ಆಗ್ರಹ: ಬೇಸಿಗೆಯ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಮತ್ತು ಆಹಾರದ ಕೊರತೆಯಾಗಿದ್ದು ಆನೆಗೊಂದಿ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಿಂದ ಚಿರತೆ ಮತ್ತು ಕರಡಿಗಳು ಗ್ರಾಮಕ್ಕೆ ನುಗ್ಗುತ್ತಿದ್ದು ಅರಣ್ಯ ಇಲಾಖೆಯವರು ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಜೊತೆಗೆ ಆಹಾರ ಮತ್ತು ನೀರಿನ ವ್ಯವಸ್ಥೆ ತಾತ್ಕಾಲಿಕ ಮಾಡಬೇಕಿದ್ದು, ಚಿರತೆ ಮತ್ತು ಕರಡಿಗಳನ್ನು ಸೆರಿ ಹಿಡಿಯಲು ಬೋನನ್ನು ಇರಿಸುವುದು ಅಗತ್ಯವಾಗಿದೆ. ಈಗಾಗಲೇ ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಗ್ರಾ.ಪಂ. ಸದಸ್ಯ ಡಾ. ಕೆ. ವಿ.ಬಾಬು ಹಾಗೂ ಹೊನ್ನಪ್ಪ ನಾಯಕ ಒತ್ತಾಯಿಸಿದ್ದಾರೆ.

Advertisement

ಆನೆಗುಂದಿ ಮತ್ತು ಅಂಜನಾದ್ರಿ ಕಿಷ್ಕಿಂದಾ ಸುತ್ತ ಬೆಟ್ಟಗುಡ್ಡಗಳಲ್ಲಿ ಚಿರತೆ ಮತ್ತು ಕರಡಿಗಳ ವಾಸವಾಗಿದ್ದು ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಆಹಾರ ಕೊರತೆಯಾಗಿದೆ. ಆದ್ದರಿಂದ ಗ್ರಾಮಗಳಿಗೆ ಕಾಡುಪ್ರಾಣಿಗಳು ಆಗಮಿಸುವ ಇಲಾಖೆಗೆ ಮಾಹಿತಿ ಇದ್ದು ಚಿರತೆಯನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶುಭಾಶಚಂದ್ರ ನಾಯಕ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next