Advertisement

ಪರಿಸರ ಸ್ನೇಹಿ ಗಂಗಮ್ಮ ಗುಡಿ ಪೊಲೀಸ್‌ ಠಾಣೆ!

03:13 PM Aug 12, 2021 | Team Udayavani |

ಬೆಂಗಳೂರು: ಸುಂದರ ಉದ್ಯಾನವನ, ದೇವಾಲಯ, ದಣಿವು ತಣಿಸಲು ಮರಗಳು, ಗೋಡೆಗಳ ಮೇಲೆ ಸಾಂಸ್ಕೃತಿಕ ಪರಂಪರೆ ಪರಿಚಯ, ಸುತ್ತಲು ಹುಲ್ಲು ಹಾಸು.. ಇಡೀ ವಾತಾವರಣವೇ ಹಸಿರುಮಯ.

Advertisement

ಇದು ಯಾವುದೋ ಉದ್ಯಾನವನವಲ್ಲ. ನಗರ ಉತ್ತರ ವಿಭಾಗದ ಗಂಗಮ್ಮ ಗುಡಿ ಪೊಲೀಸ್‌ ಠಾಣೆಯ ವಿಹಂಗಮ ನೋಟ. ಸುಮಾರು ವರ್ಷಗಳ ಕಾಲ ಹಳೆಯ ಕಟ್ಟಡದಲ್ಲೇ ಠಾಣೆ ನಿರ್ವಹಿಸಲಾಗಿತ್ತು. ನಂತರ2016ರಲ್ಲಿ ಹೊಸ ಠಾಣೆ ನಿರ್ಮಿಸಲು ಜಾಗ ನೀಡಿ,ಹೊಸ ಕಟ್ಟಡ ನಿರ್ಮಿಸಲಾಗಿತ್ತು.

ಆದರೆ, ಸರಿಯಾದ ನಿರ್ವಹಣೆ ಇರಲಿಲ್ಲ. ಆದರೆ, ಇದೀಗ ಇಡೀ ಠಾಣೆಯೇ ಸುಂದರ ತಾಣವಾಗಿ ಪರಿವರ್ತನೆಗೊಂಡಿದೆ. ಠಾಣಾಧಿಕಾರಿ ಸಿದ್ದೇಗೌಡ ಅವರು ಮುತುವರ್ಜಿ ವಹಿಸಿ ಠಾಣೆಯ ಸುತ್ತಲ ವಾತಾವರಣವನ್ನು ಹಸಿರು ಮಯಗೊಳಿಸಿದ್ದಾರೆ. ಠಾಣೆ ಮುಂಭಾಗದಲ್ಲಿ ಖಾಲಿಯಾಗಿ ಬಿದ್ದಿದ್ದ ಜಾಗವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಠಾಣೆ ಮುಂಭಾಗದಲ್ಲಿ ದೇವಾಲಯ, ಪುಟ್ಟ ಉದ್ಯನಾವನ, ಸುತ್ತಲು ಮರ-ಗಿಡಗಳ ಸಾಲು, ಪ್ರತ್ಯೇಕ ಧ್ವಜ ಸ್ತಂಭ ನಿರ್ಮಿಸಿ ಇಡೀ ಠಾಣೆಯನ್ನೇ ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಠಾಣಾಧಿಕಾರಿ ಸಿದ್ದೇಗೌಡ, ಪೊಲೀಸ್‌ ಠಾಣೆ ಎಂದರೆ ಭಯ. ಆತಂಕ ಇರುತ್ತದೆ. ಆದರೆ, ಈ ಠಾಣೆಗೆ ಬರುವ ನಿಮಗೆ ಅದನ್ನು ಹೋಗಲಾಡಿಸುತ್ತದೆ. ಪೊಲೀಸ್‌ ಇಲಾಖೆ ಜನ್ನಸ್ನೇಹಿ ಎಂಬುದು ತೋರಿಸುತ್ತದೆ. ಸಾರ್ವಜನಿಕರು ಮಾತ್ರವಲ್ಲದೆ, ತಮಗೂ ಕೂಡ
ಕೆಲದೊತ್ತಡದ ಸಂದರ್ಭದಲ್ಲಿ ಠಾಣೆ ಮುಂಭಾಗ ಇರುವ ಉದ್ಯಾನವನ ಅಥವಾ ದೇವಸ್ಥಾನದಲ್ಲಿ ಕೆಲ ಹೊತ್ತು ಕುಳಿತರೆ ಮನಸ್ಸಿಗೆ ನೆಮ್ಮದಿ ತರುತ್ತದೆ.ಹೀಗಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇರುವ ಜಾಗವನ್ನು ಸದ್ಭಳಕೆ ಮಾಡಿಕೊಂಡು ಸಾರ್ವಜನಿಕ ಪೂರಕ ವಾತಾವರಣ ನಿರ್ಮಿಸಲಾಗಿದೆ ಎಂದರು.

ಇದನ್ನೂ ಓದಿ:ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ: Sakrebailu ಆನೆ ಬಿಡಾರದಲ್ಲಿ ವಿಶೇಷ ಪೂಜೆ

ಉತ್ತರ ವಿಭಾಗದ ಸಭಾಂಗಣ: ಉತ್ತರ ವಿಭಾಗ ಪೊಲೀಸರ ಸಭೆಗೆ ಸೂಕ್ತ ಸಭಾಂಗಣ ಇರಲಿಲ್ಲ. ಯಶವಂತಪುರ ಠಾಣೆ ಕಟ್ಟಡದಲ್ಲಿರುವ ಡಿಸಿಪಿ ಅವರ ಕಚೇರಿಯ ಸಣ್ಣ ಜಾಗದಲ್ಲಿ ಸಭೆ ನಡೆಸ ಬೇಕಿತ್ತು. ಆದರೆ, ಇದೀಗ ಗಂಗಮ್ಮನಗುಡಿ ಠಾಣೆ ನವೀಕರಣ ಸಂದರ್ಭದಲ್ಲಿ ಕಟ್ಟಡದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್‌ ಮೀನಾ ಹೇಳಿದರು. ಪೊಲೀಸ್‌ ಆಯುಕ್ತರಿಂದ ಅಭಿನಂದನೆ: ಸಭಾಂಗಣ ಉದ್ಘಾಟನೆಗೆ ಬಂದಿದ್ದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಠಾಣೆ ವಾತಾವರಣ ಕಂಡು ನಗರದಲ್ಲಿಯೇ ಈ ಠಾಣೆ ಉತ್ತಮ ಮತ್ತು ಜನಸ್ನೇಹಿ ಪೊಲೀಸ್‌ ಠಾಣೆ ಎಂದು ಠಾಣಾಧಿಕಾರಿ ಸಿದ್ದೇಗೌಡ ಅವರನ್ನು ಅಭಿನಂದಿಸಿ, ಪೊಲೀಸ್‌ ಸಿಬ್ಬಂದಿ ಬೀಟ್‌ಗೆ ಸಂಬಂಧಿಸಿದ “ಸುಬಾಹು ಅನ್ನು ಲೋಕಾರ್ಪಣೆ ಮಾಡಿದರು. ಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ, ಪಶ್ಚಿಮ ವಿಭಾಗ ಡಿಸಿಪಿ ಸಂದೀಪ್‌ ಎಂ. ಪಾಟೀಲ್‌, ದಕ್ಷಿಣ ವಿಭಾಗ ಡಿಸಿಪಿ ಹರೀಶ್‌ ಪಾಂಡೆ ಇತರರು ಇದ್ದರು.

Advertisement

ಏನಿದು ಸುಬಾಹು?
ಸಿಬ್ಬಂದಿಯಕಾರ್ಯದಕ್ಷತೆ ಉತ್ತಮಪಡಿಸಲು ಈ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಸ್ವಆಸಕ್ತಿ ವಹಿಸಿ “ಸುಬಾಹು’ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್‌ ಅನ್ನು ಪೊಲೀಸ್‌ ಸಿಬ್ಬಂದಿ ಹೊರತು ಪಡಿಸಿ ಸಾರ್ವಜನಿಕರು ಬಳಸಲು ಸಾಧ್ಯವಿಲ್ಲ. ಎಲ್ಲ ಹಂತದ ಅಧಿಕಾರಿ
ಮತ್ತು ಸಿಬ್ಬಂದಿ ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಈ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ತಮ್ಮ ಪೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಪ್ರದೇಶಗಳ ಬೀಟ್‌ ಹೊಣೆಯನ್ನು ಆಯಾ ಸಿಬ್ಬಂದಿಗೆ ವಹಿಸಲಾಗಿದೆ. ನಿತ್ಯ ಠಾಣೆಯಲ್ಲಿರುವ ಹಿರಿಯ ಅಧಿಕಾರಿಗಳು ಬೀಟ್‌ಗೆ ಹೊರಡುವ ಸಿಬ್ಬಂದಿಯ ಫೋಟೋವನ್ನು ಅವರ ಮೊಬೈಲ್‌ನಿಂದಲೇ ತೆಗೆದು, ಜಿಪಿಎಸ್‌ ಆನ್‌ ಮಾಡಿ ಆ್ಯಪ್‌ ಮೂಲಕ ಬೀಟ್‌ ನಿಗದಿಪಡಿಸುತ್ತಾರೆ. ಬೀಟ್‌ ಸ್ಥಳಕ್ಕೆ ಹೋಗಿ ಅಲ್ಲಿರುವ ಕ್ಯುಆರ್‌ಕೋಡ್‌ ಅನ್ನು ತಮ್ಮ ಮೊಬೈಲ್‌ನಿಂದ ಸ್ಕ್ಯಾನ್‌ ಮಾಡಬೇಕು. ಆಗ ಸರ್ವರ್‌ ಮೂಲಕ ಸಿಬ್ಬಂದಿಯ ಹಾಜರಾತಿ ಸಂದೇಶ ಮೇಲಧಿಕಾರಿಗಳಿಗೆ ರವಾನೆಯಾಗುತ್ತದೆ. ಹೊಸದಾಗಿ ಬಂದಿರುವ ಅಧಿಕಾರಿಗಳುಕೂಡ ಆ್ಯಪ್‌ನಲ್ಲಿರುವ ರೂಟ್‌ ಮ್ಯಾಪ್‌ ಮೂಲಕ ಸಂಚರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next