Advertisement
52 ಮಂದಿ ಆಯ್ಕೆ: ಗಂಗಾ ಕಲ್ಯಾಣ ಯೋಜನೆಗೆ 2018ನೇ ಸಾಲಿನಲ್ಲಿ ತಾಲೂಕಿನ 34 ಮಂದಿ ಹಾಗೂ 2019ನೇ ಸಾಲಿನಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ 18 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಒಟ್ಟು 52 ಫಲಾನುಭವಿಗಳು ತಮ್ಮ ಜಮೀನಿಗೆ ಎಂದು ಕೊಳವೆ ಬಾವಿ ಲಾರಿ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
Related Articles
Advertisement
ಈಗ ಬಿಟ್ಟರೆ ಮತ್ತೆ 1 ವರ್ಷ ಬೇಕು: ಬೇಸಿಗೆ ಕಾಲ ಮುಗಿದರೆ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಎಲ್ಲಾ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಜಮೀನಿನ ಮಾರ್ಗವಾಗಿ ಬೋರ್‌ವೆಲ್ ಲಾರಿ ಫಲಾನುಭವಿಗಳ ಜಮೀನು ಸೇರಲು ಇತರ ರೈತರು ಸಹಕಾರ ನೀಡುವುದಿಲ್ಲ. ಹದಮಾಡಿಕೊಂಡ ಭೂಮಿ ಮೇಲೆ ಭಾರೀ ಗಾತ್ರದ ಲಾರಿಗಳು ಸಂಚರಿಸಿದರೆ ಬಿತ್ತನೆಗೆ ಅಡಚಣೆಯಾಗುತ್ತದೆ
ಹಾಗೂ ಭೂಮಿ ಕೂಡ ಗಟ್ಟಿಗೊಂಡು ಉಳುಮೆಗೂ ತೊಂದರೆ ಆಗುತ್ತದೆ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಕೊಳವೆ ಬಾವಿ ಕೊರೆಸಿದರೆ ಅನುಕೂಲ ಆಗುತ್ತದೆ. ಈ ಅವಧಿ ಪೂರ್ಣಗೊಂಡರೆ ಮತ್ತೆ ಒಂದು ವರ್ಷ ಕಳೆಯಬೇಕಾಗುತ್ತದೆ. ಹೀಗಾಗಿ ಕ್ಷೇತ್ರದ ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳ ಗಮನಕ್ಕೆ ತಂದು ಕೊಳವೆಬಾವಿ ಕೊರೆಸಿಕೊಡಬೇಕು ಎಂದು ಫಲಾನುಭವಿ ರೈತರು ಆಗ್ರಹಿಸಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು ಏನಂತಾರೆ?: ರಾಜ್ಯ ಸರ್ಕಾರದ ಆದೇಶದಂತೆ ಕಳೆದ 2018ನೇ ಸಾಲಿನಲ್ಲಿ ತಾಲೂಕಿನ ಸಣ್ಣ ಅತಿಸಣ್ಣ ರೈತರು ಕೃಷಿಯಲ್ಲಿ ಸಬಲೀಕರಣರಾಗಬೇಕು ಎಂಬ ಉದ್ದೇಶದಿಂದ ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆಗೆ ತಾಲೂಕಿನಿಂದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿದ್ದೇನೆ. ಆದರೆ, ಸರ್ಕಾರದಲ್ಲಿ ಅನುದಾನ ಇಲ್ಲದ ಕಾರಣ ಬೋರ್‌ವೆಲ್ ಕೊರೆಸಲು ಸಾಧ್ಯವಾಗಿಲ್ಲ, ಈ ಕುರಿತು ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚೆ ನಡೆಸಿ, ಅತೀ ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದ್ದಾರೆ.
ಫಲಾನುಭವಿಗಳು ಏನಂತಾರೆ?: ಕಳೆದ 2 ವರ್ಷಗಳ ಹಿಂದೆ ನನಗಿದ್ದ 3.10 ಎಕರೆ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸುವ ಯೋಜನೆಗೆ ಅರ್ಜಿ ಸಲ್ಲಿಸಿದ್ದೆ. ಶಾಸಕರು ಯೋಜನೆಗೆ ನನ್ನನ್ನು ಆಯ್ಕೆ ಮಾಡಿ ಎರಡು ವರ್ಷ ವರ್ಷ ಕಳೆದೆರೂ ಇನ್ನೂ ಕೊಳವೆಬಾವಿ ಕೊರೆಸಿಲ್ಲ. ನನ್ನ ಜಮೀನಿಗೆ ಬೋರ್‌ವೆಲ್ ಲಾರಿ ಬರಲು ಇತರ ಮೂವರು ರೈತರ ಜಮೀನು ಹಾದು ಬರಬೇಕು.
ಕೊಂಚ ಮಳೆಯಾದರೂ ರೈತರು ತಮ್ಮ ಜಮೀನಿನಲ್ಲಿ ತಿರುಗಾಡಲು ಬಿಡುವುದಿಲ್ಲ. ಆಗ ಕೊಳವೆಬಾವಿ ಕೊರೆಸಲು ಸಾಧ್ಯವಾಗದೇ ಮತ್ತೆ ಮುಂದಿನ ವರ್ಷದ ತನಕ ಕಾಯಬೇಕು. ಇದು ನನ್ನೊಬ್ಬನ ಸ್ಥಿತಿಯಲ್ಲ, ತಾಲೂಕಿನಲ್ಲಿ ಬಹುತೇಕ ರೈತರ ಸಮಸ್ಯೆ ಇದಾಗಿದ್ದು, ಕೂಡಲೇ ಶಾಸಕರು ಮಳೆ ಬೀಳುವ ಮುನ್ನ ಆಯ್ಕೆಪಟ್ಟಿಯಂತೆ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಬೇಕು ಎಂದು ಫಲಾನುಭವಿ ರೈತ ಬಸವರಾಜು ಮತ್ತಿತರರು ಆಗ್ರಹಿಸಿದ್ದಾರೆ.
* ಎಚ್.ಬಿ.ಬಸವರಾಜು