Advertisement

ಸಕಾಲಕ್ಕೆ ಸಿಗದ ಗಂಗಾ ಕಲ್ಯಾಣ

12:10 PM Aug 03, 2019 | Suhan S |

ಕೊಪ್ಪಳ: ರೈತಾಪಿ ವರ್ಗಕ್ಕೆ ಅನುಕೂಲವಾಗಲೆಂದು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಆದರೆ ಅದೇನೋ ಗೊತ್ತಿಲ್ಲ. ಯೋಜನೆಗಳು ರೈತರಿಗೆ ತಲುಪುವಷ್ಟರಲ್ಲಿ 3-4 ವರ್ಷ ಗತಿಸಿ ಹೋಗಿರುತ್ತದೆ. ಯೋಜನೆಯ ಲಾಭ ಪಡೆಯುವಷ್ಟರಲ್ಲಿ ರೈತ ಸುಸ್ತು ಹೊಡೆದಿರುತ್ತಾರೆ.

Advertisement

ಹೌದು. ಇದಕ್ಕೆ ತಾಜಾ ಸಾಕ್ಷಿ ಎಂಬಂತೆ ಗಂಗಾ ಕಲ್ಯಾಣ ಯೋಜನೆ ಕುರಿತು ನಿಗಮದಲ್ಲಿನ ಅಂಕಿ ಅಂಶ ಗಮನಿಸಿದರೆ ವಿಳಂಬ ನೀತಿ ತಿಳಿಯಲಿದೆ. ಅರ್ಜಿದಾರ ಈ ವರ್ಷ ಗಂಗಾ ಕಲ್ಯಾಣದಡಿ ಅರ್ಜಿ ಸಲ್ಲಿಸಿದನೆಂದರೆ ಎರಡು ವರ್ಷಗಳ ಬಳಿಕ ಬೋರ್‌ವೆಲ್ ಭಾಗ್ಯ ಕಾಣುತ್ತಾನೆ. ಅಲ್ಲಿಯವರೆಗೂ ದಾಖಲೆ ಸಂಗ್ರಹ, ಪತ್ರ ವ್ಯವಹಾರ, ಜೆಸ್ಕಾಂ ಕಾರ್ಯದಲ್ಲೇ ಕಾಲಹರಣ ನಡೆದಿರುತ್ತವೆ.

ಈ ಹಿಂದಿನ ಸರ್ಕಾರವು ರೈತರ ಅನುಕೂಲಕ್ಕಾಗಿಯೇ ಮಹತ್ವದ ಯೋಜನೆಯೊಂದನ್ನು ಜಾರಿ ಮಾಡಿದ್ದರೂ ಸರಿಯಾಗಿ ರೈತನಿಗೆ ತಲುಪುತ್ತಿಲ್ಲ. ಪ್ರತಿ ವರ್ಷ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮವು ವಿಧಾನಸಭಾ ಕ್ಷೇತ್ರವಾರು 20 ಫಲಾನುಭವಿ ಗುರಿ ನಿಗದಿ ಪಡಿಸಿ ಅರ್ಜಿ ಆಹ್ವಾನಿಸುತ್ತವೆ. ಅರ್ಜಿ ಪಡೆದ ನಂತರ, ದಾಖಲೆ ಸರಿಯಾಗಿರುವ ಕುರಿತು ಅವಲೋಕಿಸಲು ತಿಂಗಳುಗಟ್ಟಲೆ ಸಮಯ ವ್ಯಯವಾಗುತ್ತೆ. ಮತ್ತೆ ದಾಖಲೆ ದೃಢೀಕೃತವಾದ ಬಳಿಕ ಆಯ್ಕೆ ಸಮಿತಿ ಮುಂದೆ ಅರ್ಜಿಯನ್ನಿಡಲಾಗುತ್ತದೆ. ಅಲ್ಲಿ ಆಯಾ ಶಾಸಕರು ತಮ್ಮ ಕ್ಷೇತ್ರವಾರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಅಲ್ಲಿಗೆ ಒಂದು ವರ್ಷ ಪೂರೈಸಿರುತ್ತದೆ. ಮತ್ತೆ ಆಯ್ಕೆ ಪಟ್ಟಿಯಲ್ಲಿನ ಫಲಾನುಭವಿ ಹೊಲದಲ್ಲಿ ಬೋರ್‌ವೆಲ್ ಕೊರೆಸಲು ಆರೇಳು ತಿಂಗಳು ಗತಿಸಿರುತ್ತವೆ. ಮತ್ತೆ ಬೋರ್‌ವೆಲ್ ಕೊರೆಯಿಸಿದ ರೈತರನಿಗೆ ನಿಗಮದಿಂದ ಪಂಪ್‌ಸೆಟ್ ಹಾಗೂ ಪೈಪ್‌ಗ್ಳನ್ನು ಖರೀದಿಸಿ ಕೊಡಲು ಆರೇಳು ತಿಂಗಳು ಗತಿಸಿ ಎರಡು ವರ್ಷದ ಸಮೀಪ ದಾಟಿರುತ್ತದೆ.

ತರುವಾಯ, ಪಂಪ್‌ಸೆಟ್ ಸೇರಿ ಮೋಟರ್‌ಗಳನ್ನು ಫಲಾನುಭವಿಗೆ ವಿತರಣೆ ಮಾಡಿದ ಬಳಿಕ ನಿಗಮವು ಜೆಸ್ಕಾಂಗೆ ಆಯ್ಕೆ ಪಟ್ಟಿ ರವಾನಿಸಿ ಫಲಾನುಭವಿಗಳ ಬೋರ್‌ವೆಲ್ಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕೊಡಲು ಸೂಚನೆ ನೀಡುತ್ತದೆ. ಜೆಸ್ಕಾಂ ರೈತರ ಪಂಪ್‌ಸೆಟ್‌ಗೆ ವಿದ್ಯುತ್‌ ಸಂಪರ್ಕ ಕೊಡುವಷ್ಟರಲ್ಲಿ 3-4 ವರ್ಷ ಕಾಲ ಕಳೆದಿರುತ್ತವೆ. ಅಷ್ಟರಲ್ಲಾಗಲೇ ಕೊರೆಯಿಸಿದ ಬೋರ್‌ವೆಲ್ನಲ್ಲಿ ನೀರೂ ಸಹ ಕಡಿಮೆಯಾದಂತಹ ಉದಾಹರಣೆಗಳಿವೆ. ಸರ್ಕಾರಗಳ ಈ ನಿಧಾನಗತಿ ನೀತಿಯಿಂದ ಅನ್ನದಾತ ಬೇಸತ್ತು ಹೋಗಿದ್ದಾರೆ.

ಇನ್ನೂ ಜಿಲ್ಲಾ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ 2001-17ರ ವರೆಗಿನ ಲೆಕ್ಕಾಚಾರ ಗಮನಿಸಿದಾಗ, ನಿಗಮದಿಂದ 1427 ಬೋರ್‌ವೆಲ್ಗಳನ್ನು ಕೊರೆಯಿಸಿದೆ. ಇದರಲ್ಲಿ 1264 ಬೋರ್‌ವೆಲ್ಗೆ ವಿದ್ಯುತ್‌ ಸಂಪರ್ಕ ಕೊಟ್ಟಿದೆ. ಇನ್ನೂ 163 ಫಲಾನುಭವಿಗಳ ಹೊಲದಲ್ಲಿ ಬೋರ್‌ವೆಲ್ ಕೊರೆಯಿಸಬೇಕಿದೆ. ಇದರಲ್ಲಿ 154 ಬೋರ್‌ವೆಲ್ ಇನ್ನೂ ಜೆಸ್ಕಾಂನ ಹಂತದಲ್ಲೇ ಇವೆ. 9 ಫಲಾನುಭವಿ ಪಟ್ಟಿ ನಿಗಮದ ಹಂತದಲ್ಲಿವೆ.

Advertisement

2018-20ರ ಆಯ್ಕೆ ಪಟ್ಟಿ ವಿಳಂಬ! ಆಯಾ ವರ್ಷದ ಆಯ್ಕೆ ಪಟ್ಟಿ ಆಯ್ಕೆ ಮಾಡುವುದೇ ತುಂಬ ವಿಳಂಬ 2017-18ರ ಆಯ್ಕೆ ಪಟ್ಟಿ ಈಗಷ್ಟೆ ಇನ್ನೂ ನಿಗಮದ ಹಂತದಿಂದ ಜೆಸ್ಕಾಂಗೆ ವರ್ಗಾವಣೆ ಮಾಡಲಾಗಿದೆ. ಇನ್ನೂ 2018-19, 2019-20ರ ಆಯ್ಕೆ ಪಟ್ಟಿ ಆಯ್ಕೆಯನ್ನೇ ಮಾಡಿಲ್ಲ. ಆಯಾ ವರ್ಷದ ಪಟ್ಟಿಯನ್ನು ಅದೇ ವರ್ಷದಲ್ಲಿ ಆಯ್ಕೆ ಮಾಡುವುದೇ ವಿರಳ. ಇದರಿಂದ ಸರ್ಕಾರದ ಯೋಜನೆ ಪಡೆಯಬೇಕಾದ ರೈತ ಇಂತಹ ನಿಧಾನಗತಿ ವ್ಯವಸ್ಥೆಗೆ ಬೇಸತ್ತು ಹೋಗಿರುತ್ತಾನೆ.

ಪ್ರತಿ ಬಾರಿ ನಿಗಮಕ್ಕೆ ಅಲೆದಾಡಿ ಅಲೆದಾಡಿ ಸುಸ್ತು ಹೊಡೆದಿರುತ್ತಾರೆ. ದಾಖಲೆಗಳ ನಿರ್ವಹಣೆ ಮಾಡುವುದರಲ್ಲಿ ವರ್ಷಗಟ್ಟಲೆ ಸಮಯ ವ್ಯಯವಾಗಿರುತ್ತದೆ. ಇಂತಹ ನೀತಿಗಳು ಕೂಡಲೇ ಬದಲಾಗಬೇಕೆಂಬ ಒತ್ತಾಯ ರೈತ ಸಮೂಹದಿಂದ ಕೇಳಿ ಬರುತ್ತಿವೆ.

ನಮ್ಮ ನಿಗಮದಿಂದ 1427 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ 1264 ಫಲಾನುಭವಿಗಳಿಗೆ ಬೋರ್‌ವೆಲ್ ಕೊರೆಯಿಸಿ ಸಂಪರ್ಕ ಕಲ್ಪಿಸಲಾಗಿದೆ. ನಮ್ಮಲ್ಲಿ ಅರ್ಜಿ ಆಹ್ವಾನ, ಆಯ್ಕೆ ಪ್ರಕ್ರಿಯೆ, ಬೋರ್‌ವೆಲ್ ಕೊರೆತ, ಪಂಪ್‌ಸೆಟ್ ವಿತರಣೆ, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸ್ವಲ್ಪ ವಿಳಂಬವಾಗುತ್ತವೆ. ಆದರೂ ನಾವು ವಿಳಂಬ ಮಾಡದೇ ನಮ್ಮ ಕಾರ್ಯ ಮಾಡುತ್ತಿದ್ದೇವೆ.•ಜೀವನಕುಮರ, ವ್ಯವಸ್ಥಾಪಕರು, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next