Advertisement

ಗಣೇಶೋತ್ಸವ ಸಮಿತಿ: ನಿರ್ಗತಿಕಳಿಗೆ ಮನೆ ನಿರ್ಮಾಣ

09:21 AM Oct 03, 2019 | sudhir |

ಉಡುಪಿ: ನಿರ್ಗತಿಕಳೊಬ್ಬಳಿಗೆ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯು ನಿರ್ಮಿಸಿದ ಮನೆಯನ್ನು ಗಾಂಧೀ ಜಯಂತಿಯಂದು ಬೆಳಗ್ಗೆ 10.30ಕ್ಕೆ ಹಸ್ತಾಂತರಿಸಲಾಗುತ್ತಿದೆ.

Advertisement

ಇತ್ತೀಚೆಗೆ ಸುರಿದ ಮಳೆಯಲ್ಲಿ ಇಂದ್ರಾಳಿ ಮಂಜುಶ್ರೀನಗರದ ಕೊರಗ ಸಮುದಾಯದ ಸುಮತಿಯವರ ಮನೆ ಬಿದ್ದಿತ್ತು. ಮಂಚಿಕೋಡಿ ಶಾಲೆಯವರು ನೀಡುವ ಊಟದಿಂದ ಇವರ ಜೀವನ ನಡೆಯುತ್ತಿತ್ತು. ಮನೆಯಲ್ಲಿರುವುದು ಇವರೊಬ್ಬರೇ. ಇದನ್ನು ಗಮನಿಸಿದ ಗಣೇಶೋತ್ಸವ ಸಮಿತಿ ಕಾರ್ಯಕರ್ತರು ಮತ್ತು ಸ್ಥಳೀಯ ಆರೆಸ್ಸೆಸ್‌ ಕಾರ್ಯಕರ್ತರು ನೂತನ ಮನೆ ನಿರ್ಮಿಸಲು ನಿರ್ಧರಿಸಿದರು. ಒಟ್ಟು 84 ಕಾರ್ಯಕರ್ತರು ಮನೆ ನಿರ್ಮಾಣದಲ್ಲಿ ಕರಸೇವಕರಾಗಿ ಶ್ರಮಿಸಿದರು. ಇವರಲ್ಲದೆ ಕೊರಗ ಸಮುದಾಯದ ಗುರಿಕಾರ ಸುಂದರ ಗುರಿಕಾರರ ನೇತೃತ್ವದಲ್ಲಿ ಸಮುದಾಯದ ಯುವಕರೂ ಕೈಜೋಡಿಸಿದರು.

ನಗರಸಭಾ ಸದಸ್ಯ, ಆಟೋ ರಿಕ್ಷಾ ಚಾಲಕ ಅಶೋಕ ನಾಯಕ್‌ ಅವರು ಸ್ವತಃ ಪೇಂಟ್‌ ಕೊಟ್ಟರು. ವಿದ್ಯುತ್‌ ಸಂಪರ್ಕ ಕಲ್ಪಿಸಿದರೆ ವಿದ್ಯುತ್‌ ಬಿಲ್‌ ಕೊಡುವುದು ಯಾರೆಂಬ ಪ್ರಶ್ನೆ ಉದ್ಭವಿಸಿ ನಾಲ್ಕು ಬಲುºಗಳನ್ನು ಹೊಂದಿದ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಯಿತು. ಶ್ರಮದಾನ ಹೊರತುಪಡಿಸಿ ಒಟ್ಟು 2.2 ಲ.ರೂ. ಮನೆ ನಿರ್ಮಾಣಕ್ಕೆ ಖರ್ಚಾಗಿದೆ. ಸಚಿವ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್‌, ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಮೊದಲಾದವರ ಉಪಸ್ಥಿತಿಯಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಉಡುಪಿ ನಗರಸಭೆ ವ್ಯಾಪ್ತಿಯ ಇಂದ್ರಾಳಿ ಮಂಜುಶ್ರೀನಗರದಲ್ಲಿರುವ ಕೊರಗ ಸಮುದಾಯಕ್ಕೆ ಸೇರಿದ 16 ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವಿಲ್ಲ. ಅರ್ಜಿ ಸಲ್ಲಿಸಲು ಹೋದರೆ ನಿರಾಕ್ಷೇಪಣ ಪತ್ರ ಇತ್ಯಾದಿಗಳನ್ನು ಅಧಿಕಾರಿಗಳು ತರಲು ಹೇಳುತ್ತಾರೆ. ಕೊರಗ ಸಮುದಾಯದವರು ಇಂತಹ ದಾಖಲೆ ಪತ್ರಗಳನ್ನು ತರುವುದು ಸಾಧ್ಯವೆ? ಈ ಕುರಿತು ಜಿಲ್ಲಾಡಳಿತ ವಿಶೇಷ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಕಡಿಯಾಳಿ ಗಣೇಶೋತ್ಸವ ಸಮಿತಿ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next