Advertisement

ಗಣೇಶನ ಪಿಒಪಿ ಅವತಾರ ಈ ಸಲಕ್ಕೆ ಕೊನೆಯೇ?

11:29 AM Aug 18, 2017 | Team Udayavani |

ಬೆಂಗಳೂರು: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ- ಗೌರಿ ಮೂರ್ತಿಗಳ ಮಾರಾಟವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದ್ದು, ಇದಕ್ಕೆ ರಾಜಧಾನಿಯ ಜನತೆ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದಕ್ಕೆ ಈ ವರ್ಷದ ಹಬ್ಬದಲ್ಲಿ ಉತ್ತರ ಸಿಗಲಿದೆ. 

Advertisement

ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸುವ ಧಾರ್ಮಿಕ ಆಚರಣೆಗಳಲ್ಲಿ ಗಣೇಶೋತ್ಸವ ಪ್ರಮುಖ. ಗಣೇಶೋತ್ಸವ ಮುಗಿದು ತಿಂಗಳು ಕಳೆದರೂ ವಿಜೃಂಭಣೆಯ ಆಚರಣೆ ನಡೆದೇ ಇರುತ್ತದೆ. ಆದರೆ ಈ ಧಾರ್ಮಿಕ ಆಚರಣೆಯನ್ನು ಪರಿಸಸ್ನೇಹಿಯಾಗಿ ಆಚರಿಸುವ ಮೂಲಕ ಪ್ರಜ್ಞಾವಂತಿಕೆ ಮೆರೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಪ್ರತಿವರ್ಷ ನಗರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ 4.50 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತವೆ. ಇದರಲ್ಲಿ ಶೇ.40ರಷ್ಟು ಪಿಒಪಿ ಮೂರ್ತಿಗಳಾಗಿರುತ್ತವೆ ಎಂಬ ಅಂದಾಜು ಇದೆ. ಅಂದರೆ 1.80 ಲಕ್ಷಕ್ಕೂ ಅಧಿಕ ಪಿಒಪಿ ಮೂರ್ತಿಗಳು ಪ್ರತಿವರ್ಷ ಪ್ರತಿಷ್ಠಾಪನೆಯಾಗುತ್ತವೆ. ಆದರೆ ಈ ಮೂರ್ತಿಗಳನ್ನು ವಿಸರ್ಜಿಸಿದಾಗ ನೀರಿನಲ್ಲಿ ಕರಗಲು ಬಹಳ ಸಮಯ ಬೇಕಾಗುತ್ತದೆ.

ಅಲ್ಲದೇ ವಿಷಯುಕ್ತ ಬಣ್ಣ ಬಳಸಿರುವುದರಿಂದ ನೀರು ಕಲುಷಿತಗೊಳ್ಳುವ ಜತೆಗೆ ದುರ್ನಾತ ಬೀರುತ್ತದೆ.  ಆ ಕಾರಣಕ್ಕೆ ಪುಷ್ಕರಣಿಗಳು, ಕೆರೆ ಕುಂಟೆಗಳ ಬಳಿ ಪಿಒಪಿ ಗಣೇಶ ಮೂರ್ತಿ ವಿಸರ್ಜಿಸಿದ ಕೆಲ ಹೊತ್ತಿನಲ್ಲೇ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಪಕ್ಕಕ್ಕಿಡುತ್ತಾರೆ. ಬಳಿಕ ವಿಕಾರಗೊಂಡ ಮೂರ್ತಿಗಳನ್ನೆಲ್ಲಾ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. 

ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕವೆನಿಸಿರುವುದರಿಂದ ಕಳೆದ ವರ್ಷವೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ ಮೂರ್ತಿಗಳ ಮಾರಾಟವನ್ನು ನಿಷೇಧಿಸಿತ್ತು. ಆದರೆ ಈಗಾಗಲೇ ಉತ್ಪಾದನೆಯಾಗಿರುವ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಉತ್ಪಾದಕರು, ಮಾರಾಟಗಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಳೆದ ಬಾರಿ ವಿನಾಯ್ತಿ ನೀಡಲಾಗಿತ್ತು. ಬಳಿಕ ಮಂಡಳಿಯು ಪಿಒಪಿ ಮೂರ್ತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

Advertisement

ಇಷ್ಟಾದರೂ ನಿಯಮಬಾಹಿರವಾಗಿ ಪಿಒಪಿ ಮೂರ್ತಿಗಳನ್ನು ತಯಾರಿಸಿ ನಗರದ ಹಲವೆಡೆ ಮಾರಾಟಕ್ಕೆ ಇಡಲಾಗಿದೆ. ಪಿಒಪಿ ಮೂರ್ತಿ ನಿಷೇಧಿಸಿ ಮಂಡಳಿ ಆದೇಶ ಹೊರಡಿಸಿದ್ದರೂ ಅದನ್ನು ಮೇಲ್ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಪಾಲಿಕೆಗೆ ಸೇರಿದೆ. ಗಣೇಶೋತ್ಸವವು ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರವಾಗಿರುವುದರಿಂದ ಕಾನೂನು ಕ್ರಮ, ದಂಡ, ಬಲ ಪ್ರಯೋಗಿಸಲು ಮುಂದಾಗದೆ ಅರಿವು ಮೂಡಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.

ವರ್ಷಗಳು ಕಳೆದಂತೆ ಪಿಒಪಿ ಮೂರ್ತಿಗಳ ಬಳಕೆ ಕಡಿಮೆಯಾಗುತ್ತಿದೆ. ಈ ಬಾರಿ ಸಂಪೂರ್ಣ ನಿಷೇಧವಿರುವುದರಿಂದ ಸಾರ್ವಜನಿಕರು ಮಣ್ಣಿನ ಮೂರ್ತಿಗಳನ್ನೇ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next