ನಟ ಗಣೇಶ್ ಅವರ ಸಿನಿಮಾ ಎಂದರೆ ಅದೊಂದು ಫ್ಯಾಮಿಲಿ ಪ್ಯಾಕೇಜ್ ಆಗಿರುತ್ತದೆ. ಕಾಮಿಡಿ, ಎಮೋಶನ್, ಆ್ಯಕ್ಷನ್, ಲವ್‌ಸ್ಟೋರಿ… ಹೀಗೆ ಎಲ್ಲಾ ಅಂಶಗಳೊಂದಿಗೆ ರಂಜಿಸುತ್ತದೆ. ಈಗ “ತ್ರಿಬಲ್ ರೈಡಿಂಗ್’ ಸಿನಿಮಾ ಕೂಡಾ ಅದೇ ವಿಶ್ವಾಸ ಮೂಡಿಸಿದೆ.
ಹೌದು, ಗಣೇಶ್ ಅವರ “ತ್ರಿಬಲ್ ರೈಡಿಂಗ್’ ಚಿತ್ರ ನ.25ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರಿಗೆ ಇದೊಂದು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್‌ಟೈನರ್ ಎನ್ನುವುದು ಎದ್ದು ಕಾಣುತ್ತದೆ. ನಾಯಕನ ಸುತ್ತ ಸುತ್ತುವ ಮೂವರು ಚೆಂದದ ನಾಯಕಿಯರು, ಸಾಧುಕೋಕಿಲ, ರಂಗಾಯಣ ರಘು ಕಾಮಿಡಿ, ಕಲರ್‌ಫುಲ್ ಲೊಕೇಶನ್, ಟ್ರೆಂಡಿ ಸಾಂಗ್ಸ್, ಮಾಸ್ ಪ್ರಿಯರಿಗೆ ಬೇಕಾದ ಫೈಟ್… ಹೀಗೆ ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ.
ಹೀಗೆ ಕಲರ್‌ಫುಲ್ ಆಗಿ ಮೂಡಿಬಂದಿರುವ ಟ್ರೇಲರ್ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಇತ್ತೀಚೆಗೆ ಅದ್ಧೂರಿಯಾಗಿ ಆಯೋಜಿಸಿತ್ತು. ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಗಣೇಶ್, ನಾಯಕಿಯರಾದ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್, ನಟರಾದ ಸಾಧುಕೋಕಿಲ, ರಂಗಾಯಣ ರಘು, ಛಾಯಾಗ್ರಾಹಕ ಜೈ ಆನಂದ್, ನಿರ್ಮಾಪಕ ರಾಮ್‌ಗೋಪಾಲ್, ನಿರ್ದೇಶಕ ಮಹೇಶ್ ಸೇರಿದಂತೆ ಇಡೀ ತಂಡದ ಹಾಜರಿದ್ದು, ಸಿನಿಮಾ ಮೂಡಿಬಂದ ರೀತಿ, ಚಿತ್ರೀಕರಣದ ವೇಳೆ ನಡೆದ ಘಟನೆಗಳು, ಇಡೀ ತಂಡವನ್ನು ನಿರ್ಮಾಪಕರು ನೋಡಿಕೊಂಡ ಚೆನ್ನಾಗಿ ನಡೆಸಿಕೊಂಡ ಬಗೆ… ಹೀಗೆ ಹಲವು ವಿಚಾರಗಳನ್ನು ಚಿತ್ರತಂಡ ಮೆಲುಕು ಹಾಕಿತು.
ಇನ್ನು, ಈಗಾಗಲೇ ಬಿಡುಗಡೆಯಾಗಿ ರುವ “ತ್ರಿಬಲ್ ರೈಡಿಂಗ್’ ಸಿನಿಮಾದ ಎರಡೂ ಹಾಡುಗಳೂ ಸೂಪರ್ ಹಿಟ್ ಆಗಿದ್ದು, ಇತ್ತೀಚೆಗೆ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಡಿಫರೆಂಟ್ ಲುಕ್‌ನಲ್ಲಿ ಗಣೇಶ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.