Advertisement

ಗಣೇಶ್‌ ಶೋಧ ಅಂತ್ಯ?

12:30 AM Feb 03, 2019 | Team Udayavani |

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಯನ್ನು ಬಂಧಿಸಿದ ವಿಚಾರದಲ್ಲಿ ಕೀರ್ತಿ ಪಡೆಯುತ್ತಿರುವ ನೀವು ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್‌ ಅವರನ್ನು ಇಷ್ಟು ದಿನವಾದರೂ ಏಕೆ ಬಂಧಿಸಲಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದ್ದು, ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಜತೆಗೆ ಇಷ್ಟು ದಿನವಾದರೂ ಸಿಗದ ಕಂಪ್ಲಿ ಗಣೇಶ್‌ ಎಲ್ಲಿದ್ದಾರೆ ಎಂಬ ಬಗ್ಗೆ ಹಲವಾರು ಪ್ರಶ್ನೆಗಳೂ ಎದ್ದಿವೆ. ಜತೆಗೆ ಗಣೇಶ್‌ ಅವರ ಶೋಧದಲ್ಲಿ ತೊಡಗಿದ್ದ ರಾಮನಗರ ಪೊಲೀಸರು ಕೈಚೆಲ್ಲಿದ್ದಾರೆ ಎಂದೂ ಹೇಳಲಾಗಿದೆ.

Advertisement

ಗಣೇಶ್‌ ಬಂಧಿಸದ ಬಗ್ಗೆ ಸಿಎಂಗೆ ವ್ಯಂಗ್ಯ ಮಾಡಿರುವ ಬಿಜೆಪಿ, “ಅಣ್ಣಾ ಕುಮಾರಣ್ಣಾ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು ಕಂಪ್ಲಿ ಶಾಸಕ ಗಣೇಶ್‌ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ’ ಎಂದು ಟ್ವೀಟ್‌ ಮೂಲಕ ಕಾಲೆಳೆದಿದೆ.

ಬಿಜೆಪಿ ನಾಯಕರ ಆರೋಪಗಳಿಗೆ ಮೈಸೂರಿನಲ್ಲಿ ತಿರು ಗೇಟು ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ, ಕಾನೂನು ಮೀರಿ ತಪ್ಪು ಮಾಡಿದ ಯಾವುದೇ ಪಕ್ಷದ ಶಾಸಕರಿಗೂ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ ಶಾಸಕರಾಗಲಿ, ಬಿಜೆಪಿ ಶಾಸಕರಾಗಲಿ, ಕಾಂಗ್ರೆಸ್‌ ಶಾಸಕರಾಗಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. 

ಟ್ವೀಟ್‌ನಲ್ಲಿ ನನ್ನನ್ನು ಅಣ್ಣ ಎಂದ ಬಿಜೆಪಿಯವರಿಗೆ ಧನ್ಯವಾದಗಳು. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ. ಕಂಪ್ಲಿ ಗಣೇಶ್‌ ಬಂಧನಕ್ಕೆ ಸೂಚಿಸಿದ್ದೇನೆ. ಈ ಬಗ್ಗೆ ಪ್ರಶ್ನಿಸಿ ನನಗೆ ಟ್ವೀಟ್‌ ಮಾಡಿರುವ ಬಿಜೆಪಿ ಸೋದರರಿಗೆ ಶೀಘ್ರ ಸಿಹಿ ಸುದ್ದಿ ಕೊಡುತ್ತೇನೆ ಎಂದರು.

ಯಾರ ಕೈಗೂ ಸಿಗುತ್ತಿಲ್ಲ
ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಅನಂತರ ಶಾಸಕ ಗಣೇಶ್‌ ಯಾರ ಕೈಗೂ ಸಿಗುತ್ತಿಲ್ಲ ಎಂಬುದನ್ನು ಸ್ವತಃ ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರೇ ಒಪ್ಪಿಕೊಂಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಗಣೇಶ್‌ ಅವರನ್ನು ಮುಂಬಯಿಯಲ್ಲೇ ಬಂಧಿಸಲು ಪ್ರಯತ್ನಿಸಲಾಗಿತ್ತು. ಆಗ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಪರಾರಿಯಾಗಿದ್ದರು. ಈಗ ಯಾರ ಕೈಗೂ ಸಿಗುತ್ತಿಲ್ಲ. ಗೋವಾದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವಿಷಯವಾಗಿ 

Advertisement

ಕೈಚೆಲ್ಲಿದ ರಾಮನಗರ ಪೊಲೀಸರು?
ಶಾಸಕ ಗಣೇಶ್‌ ಬಂಧನಕ್ಕೆ ರಾಮನಗರ ಪೊಲೀಸರು ಸತತ ಕಾರ್ಯಾಚರಣೆ ನಡೆಸುತ್ತಿದ್ದರೂ ಇದುವರೆಗೆ ಸಣ್ಣ  ಸುಳಿವೂ ಲಭ್ಯವಾಗಿಲ್ಲ  ಎಂದು ತಿಳಿದುಬಂದಿದೆ. ಶಾಸಕ ಗಣೇಶ್‌ ಬಂಧನಕ್ಕೆ ಮೂರು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದರೂ ಅವರು ಪದೇ ಪದೆ ಸ್ಥಳ ಬದಲಾಯಿಸುತ್ತಿರುವ ಕಾರಣ ಅವರನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ. ಶಾಸಕರ ಬೆನ್ನತ್ತಿ ವಿಶೇಷ ತಂಡಗಳು ಗೋವಾ, ಮಹಾರಾಷ್ಟ್ರಕ್ಕೆ ತೆರಳಿದರೂ ಯಾವುದೇ ಸುಳಿವು ದೊರೆಯದೆ ವಾಪಸ್‌ ಬಂದಿವೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ಹೇಳಿಕೆ ಸಲುವಾಗಿ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ ಮತ್ತು ಗಣೇಶ್‌ ಬಳಸುತ್ತಿರುವ ಸರಕಾರದ ವತಿಯಿಂದ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ.

ದೂರವಾಗದ ಆಪರೇಷನ್‌ ಆತಂಕ

ಬೆಂಗಳೂರು: ಬಜೆಟ್‌ ಅಧಿವೇಶನ ಹತ್ತಿರ ವಾಗುತ್ತಿದ್ದಂತೆ ಸಮ್ಮಿಶ್ರ ಸರಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮತ್ತೆ ಆಪರೇಷನ್‌ ಕಮಲ ಕಾರ್ಯಾಚರಣೆ ಆತಂಕ ಎದುರಾಗಿದೆ.
ರಮೇಶ್‌ ಜಾರಕಿಹೊಳಿ, ನಾಗೇಂದ್ರ ಸಹಿತ ಆರು ಮಂದಿ ಶಾಸಕರು ಮುಂಬಯಿಯಲ್ಲಿದ್ದಾರೆ. ಅತೃಪ್ತ ಶಾಸಕರ ಜತೆಗೆ ಕಂಪ್ಲಿ ಗಣೇಶ್‌ ಸಹ ಸೇರಿಕೊಂಡಿದ್ದು, ಇನ್ನೂ ಹತ್ತು ಶಾಸಕರನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಆಪರೇಷನ್‌ ಕಮಲ ಪ್ರಯತ್ನವನ್ನು ಬಿಜೆಪಿ ಪೂರ್ತಿಯಾಗಿ ಕೈಬಿಡದಿರುವುದರಿಂದ ತಮ್ಮ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯತಂತ್ರ ರೂಪಿಸುತ್ತಿದ್ದು, ತೀರಾ ಅನಿವಾರ್ಯವಾದರೆ ಬಿಜೆಪಿಯ ನಾಲ್ವರು ಶಾಸಕರನ್ನು ಸೆಳೆಯುವ ತಂತ್ರವನ್ನೂ ಹೆಣೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next