ಯಾವುದೇ ಹಬ್ಬ ಇರಲಿ, ಅದೊಂದು ಸಂಭ್ರಮವೇ. ಅದರಲ್ಲೂ ಗಣೇಶ ಚೌತಿ ಅಂದ್ರೆ ಇಡೀ ದೇಶದಲ್ಲಿ ಆಚರಿಸುವ ಹಬ್ಬ. ಗಣೇಶ ಮೂರ್ತಿ ತರೋದು, ಪೂಜೆ, ಹೊಸ ಬಟ್ಟೆ, ತರಹೇವಾರಿ ತಿಂಡಿ ತಿನಿಸು… ಇದು ಮನೆಯ ಸಂಭ್ರಮಾಚರಣೆ. ಚಂದನವನದ ಚೆಂದದ ನಟಿಮಣಿಯರ ಮನೆಯಲ್ಲೂ ಈ ಬಾರಿ ಗಣೇಶ ಚೌತಿ ಹಬ್ಬ ಜೋರು. ಅವರ ಮನೆಯಲ್ಲಿನ ಹಬ್ಬ, ಸಂಪ್ರದಾಯ, ಚೌತಿ ಎಂದಾಗ ಅವರ ಬಾಲ್ಯದ ನೆನಪು, ಮರೆಯಲಾಗದ ಕ್ಷಣ.. ಹೀಗೆ ಒಂದಿಷ್ಟು ಸ್ವಾರಸ್ಯಗಳ ಕುರಿತ ಒಂದು ರೌಂಡಪ್ ಇಲ್ಲಿದೆ.
ಊರೆಲ್ಲ ಸುತ್ತಿ ಗಣೇಶ ನೋಡ್ತಿದ್ವಿ: ರೀಷ್ಮಾ ನಾಣಯ್ಯ
ಗಣೇಶ ಹಬ್ಬದ ತಯಾರಿ ಜೋರಾಗಿನೇ ನಡಿತಾ ಇದೆ. ಇದೊಂದು ಎನರ್ಜಿಟಿಕ್ ಹಬ್ಬ. ಚಿಕ್ಕವಳಿಂದಲೂ ಹಬ್ಬದ ದಿನ ಅಜ್ಜಿ ಮನೆಗೆ ಹೋಗೊದು, ಅಲ್ಲೆ ನಮ್ಮ ಸಂಭ್ರಮಾಚರಣೆ. ನಮ್ಮ ಮನೇಲಿ ಗಣೇಶ ಕೂಡಿಸಲ್ಲ, ಕೇವಲ ಪೂಜೆ ಇರುತ್ತೆ. ಹಬ್ಬದ ದಿನ ಬೆಳಗ್ಗೆ ಎದ್ದ ತಕ್ಷಣ, ತಯಾರಾಗಿ ಅಜ್ಜಿ ಮನೆಗೆ ಹೋಗಿಬಿಡ್ತಿದ್ದೆ. ಪೂಜೆಯೆಲ್ಲ ಮುಗಿದ ಮೇಲೆ, ಫ್ರೆಂಡ್ಸ್ ಜತೆ ಊರು ಸುತ್ತೋದು. ಎಲ್ಲೆಲ್ಲಿ ಗಣೇಶ ಕೂಡಿಸಿದಾರೆ ನೋಡಿಕೊಂಡು ಬರೋದು. ಆಮೇಲಿ ಎಲ್ಲ ಫ್ರೆಂಡ್ಸ್ ಮನೆಗೆ ಹೋಗಿ ಅಲ್ಲಿ ಪೂಜೆ, ಪ್ರಸಾದ… ಇದೇ ನನ್ನ ನೆನಪು.
ಅಜ್ಜಿ ಮನೇಲಿ ಹಬ್ಬ: ಸೋನು ಗೌಡ
ಗಣೇಶ ಚೌತಿ ಹಬ್ಬ ನನಗೊಂದು ದೊಡ್ಡ ಸಂಭ್ರಮ. ನಮ್ಮ ಮನೇಲಿ ಬೆಳ್ಳಿ ಗಣೇಶನ ಪೂಜೆ, ಗೌರಿ ಪೂಜೆ ಇರುತ್ತೆ. ಹಬ್ಬದ ದಿನ ಹೆಚ್ಚಾಗಿ ಅಜ್ಜಿ ಮನೆಯಲ್ಲಿ ನಮ್ಮ ಕುಟುಂಬದವರೆಲ್ಲ ಸೇರುತಿದ್ವಿ. ನಾವೆಲ್ಲ ಕಸಿನ್ಸ್ ಸೇರಿದ್ರೆ 18 ಜನ. ಬೆಳಗ್ಗೆ ಪೂಜೆಯಿಂದ ರಾತ್ರಿ ವಿಸರ್ಜನೆ ಆಗೋವರೆಗೂ ಇಡೀ ದಿನ ನಮ್ಮ ಊಟ-ಆಟ ಎಲ್ಲ ಇರ್ತಿತ್ತು. ನಮ್ಮ ಕುಟುಂಬದಲ್ಲಿ ನಾವು ಏಳು ಜನ ಹುಡುಗಿಯರು. ಏಳೂ ಜನಕ್ಕೂ ನಮ್ಮ ಚಿಕ್ಕಪ್ಪ ನಮಗೆಲ್ಲ ಒಂದೇ ರೀತಿಯ ರೇಶೆ¾ ಲಂಗಾ ದಾವಣಿ ಕೊಡಿಸ್ತಿದ್ರು. ಆಗ ಅದನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದು ನೆನಪು… ನನ್ನ ಇಬ್ಬರೂ ಅಜ್ಜಿಯರ ಮನೆ ಹತ್ತಿರವೇ ಇತ್ತು. ಒಬ್ಬರ ಮನೇಲಿ ವಿಸರ್ಜನೆ ಮಾಡಿ, ಇನ್ನೊಂದು ಮನೆಗೆ ಹೋಗಿ ಗಣಪತಿ ವಿಸರ್ಜಿಸ್ತಿದ್ವಿ. ಇಡೀ ದಿನ ನಮಗೆ ದೊಡ್ಡ ಖುಷಿ. ಕಾಯಿ ಒಬ್ಬಟ್ಟು, ಸಿಹಿ ಕಡುಬು, ಖಾರದ ಕಡಬು ಎಲ್ಲ ಇಷ್ಟ. ಒಬ್ಬ ಅಜ್ಜಿ ಮನೇಲಿ ಮಹಾರಾಷ್ಟ್ರ ಸಂಪ್ರದಾಯಂತೆ ಹಬ್ಬ ಮಾಡ್ತಾರೆ. ಆಗ ಕಡಬನ್ನು ಎಣ್ಣೆಯಲ್ಲಿ ಹಾಕಿ ಕರೆದಿರ್ತಾರೆ, ಅದಂತೂ ತುಂಬಾ ಇಷ್ಟ ನನಗೆ.
ಹಬ್ಬ ಅಂದ್ರೆ ಮೋದಕ, ಕಡುಬು..: ಚೈತ್ರಾ ಆಚಾರ್
ನಮ್ಮ ಮನೇಲಿ ಬೆಳಗ್ಗೆ 7 ಗಂಟೆ ಹೊತ್ತಿಗೆಲ್ಲ ಗಣಪತಿ ತಂದು ಪೂಜೆ ಮಾಡಿ ಮುಗಿಸಿಬಿಡ್ತಾರೆ. ಆಮೇಲೆನಿದ್ರೂ ಹಬ್ಬಕ್ಕಂತ ಮಾಡಿರೋ ತಿಂಡಿಗಳನ್ನ ನಾನು, ನನ್ನ ತಮ್ಮ ಇಡೀ ದಿನ ಕೂತು ತಿನ್ನೋದು. ಮೊದಲೆಲ್ಲ ಹೊರಗಡೆಯಿಂದ ಗಣಪತಿ ತರ್ತಿದ್ವಿ. ಈಗ ಮೂರು ವರ್ಷ ಆಯ್ತು, ನನ್ನ ತಮ್ಮ ಮನೋಹರ್ ಮನೆಯಲ್ಲೇ ಮಣ್ಣು ತಂದು ಗಣಪತಿ ಮೂರ್ತಿ ಮಾಡ್ತಾನೆ. ಹಬ್ಬದ ದಿನ ಚಂದ್ರನ ನೋಡಬಾರದು ಅಂತ ಹೇಳ್ತಾರೆ, ಹಾಗಾಗಿ ಸಂಜೆ ಆದಮೇಲೆ ತಲೆ ತಗ್ಗಿಸಿಕೊಂಡು ಓಡಾಡ್ತಾ ಇದ್ವಿ, ಅದೇ ಬಾಲ್ಯದ ನೆನಪು. ಮನಸ್ಸು ಚಂಚಲ, ಚಂದ್ರನನ್ನ ನೋಡಿದ್ರೆ ಏನಾಗುತ್ತೆ, ಹೀಗೆಲ್ಲ ಪ್ರಶ್ನೆ ಬರ್ತಿದ್ದರು. ಅದಕ್ಕೆ ಎಷ್ಟೋ ಬಾರಿ ಸಂಜೆ 6 ಗಂಟೆ ನಂತರ ಮನೆಯಿಂದ ಹೊರಗೆ ಕಾಲೇ ಇಡ್ತಿರಲಿಲ್ಲ. ಹಬ್ಬದ ದಿನ ಅಮ್ಮ ಒಳ್ಳೆ ಅಡುಗೆ ಮಾಡ್ತಾರೆ. ಮೋದಕ, ಎಳ್ಳಿನ ಕಡಬು, ಬಾಳೆ ಹಣ್ಣಿನ ಸೀಕರಣೆ, ಬೆಳೆ ಒಬ್ಬಟ್ಟು, ಕೋಸಂಬ್ರಿ, ಹಣ್ಣಿನ ರಸಾಯನ ಇವೆಲ್ಲ ಇಷ್ಟ. ಗಣಪತಿ ಹಬ್ಬದ ದಿನ ಎಲ್ಲ ಕಡೆ ಆರ್ಕೆಸ್ಟ್ರಾದವರು ಬಂದು ಹಾಡು ಹಾಡ್ತಿದ್ರು. ಎಷ್ಟೋ ಸಿನಿಮಾ ಸ್ಟಾರ್‌ಗಳು ಬರ್ತಿದ್ರು. ಅವರನ್ನೆಲ್ಲ ನೋಡಲಿಕ್ಕೆ ಹೋಗ್ತಿದ್ವಿ. ಶಾಲೆಯಲ್ಲೂ ಗಣಪತಿ ಕೂಡಿಸ್ತಿದ್ರು. ಅಲ್ಲೂ ನಮ್ಮ ಆಚರಣೆ ಇರ್ತಿತ್ತು.
ಬಾಗಿನ ಸಂಭ್ರಮ: ಅಂಕಿತಾ ಅಮರ್
ಗಣೇಶ ಚೌತಿ ಅಂದ್ರೆ ಮೊದಲು ನೆನಪಾಗೋದೆ ಅಜ್ಜಿ-ತಾತ. ಪ್ರತಿ ವರ್ಷ ಗಣಪತಿ ಹಬ್ಬ ಅಲ್ಲೇ ಆಚರಣೆ. ಪ್ರತಿದಿನ 108 ಗಣೇಶ ನೋಡೋದು, ಪ್ರತಿ ಗಣೇಶನಿಗೆ ಮೂರಿ ಬಾರಿ ಪ್ರದಕ್ಷಿಣೆ ಹಾಕೋದು, ಅದನ್ನು ಎಣಿಸೋದು, ಎಲ್ಲ ಕಡೆ ಸ್ವಲ್ಪ ಸ್ವಲ್ಪ ಪ್ರಸಾದ ತೆಗೊಂಡು ಅದರಲ್ಲೇ ಹೊಟ್ಟೆ ತುಂಬಿಸಿ ಕೊಳ್ಳೊದು.. ಹಬ್ಬದ ದಿನ ಅಪ್ಪ ಪೂಜೆ ಮಾಡ್ತಾರೆ. ತಪ್ಪದೇ ಶಮಂ ತಕ ಕಥೆ ಕೇಳುವೆ. ಗೌರಿ ಹಬ್ಬ ನನಗೆ ಹೆಚ್ಚು ಖುಷಿ ನೀಡೋದು ವ್ರತ, ಬಾಗಿನ ಕೊಡೋದರಲ್ಲಿ… ನಾನು ಚಿಕ್ಕವಳಿರು ವಾಗ ಅಮ್ಮ ಲಂಗಾ ದಾವಣಿ ಹಾಕಿಸಿ, ನನಗಂತಲೇ ಪುಟ್ಟ ಬಾಗಿನ ತಯಾರಿ ಮಾಡ್ತಿದ್ರು. ಅದರಲ್ಲಿ ಕ್ಲಿಪ್, ಬ್ಯಾಂಡ್ ಆಗ ನಮಗೆ ಬೇಕಾದ ವಸ್ತು ಎಲ್ಲ ಇರ್ತಿದ್ರು. ಅದನ್ನ ಹೋಗಿ ಗೆಳತಿಯರಿಗೆ ಕೊಡ್ತಿದ್ದೆ.
ಮಣ್ಣಿನಿಂದ ಇಲಿ!: ಮಾನ್ವಿತಾ ಕಾಮತ್
ಮದುವೆಯಾದ ಮೇಲೆ ಇದೇ ಮೊದಲ ಗಣೇಶ ಚೌತಿ. ಗಂಡನ ಮನೆಯಲ್ಲಿ ಮೈಸೂರಿನಲ್ಲಿ ಈ ಬಾರಿ ಆಚರಣೆ. ಇಲ್ಲಿ ನಮ್ಮ ಮನೆತನದ ಗಣಪತಿ ದೇವಸ್ಥಾನ ಇದೆ. ಅಲ್ಲಿ ಗಣ ಹೋಮ, ಮತ್ತಿತರ ಪೂಜೆಯಲ್ಲಿ ಭಾಗವಹಿಸಬೇಕು. ಮೊದಲೆಲ್ಲ ಹಬ್ಬ ಬಂತಂದ್ರೆ ನನ್ನ ಊರು ಕಾರ್ಕಳದ ಎಣ್ಣೆಹೊಳೆಗೆ ಹೋಗ್ತಿದ್ದೆ. ನನ್ನ ಚಿಕ್ಕಪ್ಪ ಪ್ರೇಮಾನಂದ ಅವರು ಪ್ರಸಿದ್ಧ ಗಣಪತಿ ಮೂರ್ತಿಕಾರರು. ಅವರುಮೂರ್ತಿ ಮಾಡ್ತಿದ್ದಾಗ, ನಮಗೂ ಮಣ್ಣು ಕೊಟ್ಟು ಇಲಿ ಮಾಡಲಿಕ್ಕೆ ಹೇಳ್ತಿದ್ರು. ಅದೇ ನಮಗೊಂದು ಸಂಭ್ರಮ. ಹಬ್ಬ ಬಂದಾಗ ಊರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇರ್ತಿತ್ತು. ಮಹಾಪುರುಷರ ವೇಷಭೂಷಣ ಹಾಕೊಂಡು ನಾನು ತಯಾರಾಗ್ತಿದ್ದೆ. ನನ್ನಮ್ಮ ಬರೀ ಗಾಂಧೀಜಿ ವೇಷನೇ ಹಾಕಿಸ್ತಿದ್ರು. ಯಾಕಂದ್ರೆ ಆ ವೇಷದಲ್ಲಿ ತಯಾರಿ ಮಾಡೋದು ತುಂಬಾ ಸರಳ. ಆಮೇಲೆ ನಾನು ನಟನೆಗೆ ಅಂತ ಬಂದಾಗ ಭಕ್ತ ಕುಂಬಾರ ಹೀಗೆ ಬೇರೆ ಬೇರೆ ವೇಷ ಹಾಕಲಿಕ್ಕೆ ಶುರು ಮಾಡಿದೆ. ಹಬ್ಬಕ್ಕೆ ಕೊಟ್ಟೆ ಕಡುಬು, ಕೆಸುವಿನೆಲೆಯ ಪತ್ರೊಡೆ, ಅವಲಕ್ಕಿ ತಿಂಡಿ ಮಾಡ್ತಾರೆ. ಅದಂದ್ರೆ ತುಂಬಾ ಇಷ್ಟ.
ನಿತೀಶ ಡಂಬಳ