Advertisement

Ganesh Chaturthi: ಗಜಮುಖನೆ ಗಣಪತಿಯೇ ನಿನಗೆ ವಂದನೆ

09:45 AM Sep 08, 2024 | Team Udayavani |

ವಂದಿಪೆ ನಿನಗೆ ಗಣನಾಥ ಎಂಬ ಸ್ತುತಿಯೊಂದಿಗೆ ನಮ್ಮ ಬಾಲ್ಯದ ದಿನಗಳ ಆರಂಭ. ಗಣಪತಿ ಯನ್ನು ಆರಾಧಿಸದೆ ಇರುವ ಮನೆಯಿಲ್ಲ. ಯಾವುದೇ ಒಂದು ಶುಭಕಾರ್ಯ ಆರಂಭಗೊಳ್ಳಬೇಕಾದರೆ ಮೊದಲು ವಿಘ್ನ ನಿವಾರಕ ಗಣಾಧಿಪತಿಗೆ ಮೊದಲು ಪೂಜಿಸುವರು.

Advertisement

ಸಣ್ಣವರಿದ್ದಾಗ ಗಣೇಶ ಚತುರ್ಥಿ ಬಂತು ಎಂದರೆ ಅದೇನೋ ರೀತಿಯ ಸಂಭ್ರಮ. ಊರಿನಲ್ಲಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಆರಂಭಗೊಂಡು, ಮೂರನೇ ದಿನ ವಿಶೇಷ ಶೋಭಯಾತ್ರೆಯೊಂದಿಗೆ ಗಣೇಶನ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಗುತ್ತದೆ.

ಡೊಳ್ಳು ಹೊಟ್ಟೆಯ, ಸಣ್ಣ ಕಣ್ಣಿನ ಕಿರೀಟ ತೊಟ್ಟು ಕೂತ ಸರ್ವಾಲಂಕಾರಭೂಷಿತ ಗಣೇಶನ ವಿಗ್ರಹವನ್ನು ನೋಡಿದಾಗ ಇದೇನು ದೇವರು ಕೂಡ ಇಷ್ಟೊಂದು ಮುದ್ದಾಗಿ ಸುಂದರವಾಗಿ ಇರುವನಲ್ಲಾ ಎಂದು ಅನಿಸುತ್ತಿತು.

ಅದೇನೋ ಗೊತ್ತಿಲ್ಲ ಕೊನೆಯ ದಿನ ಒಂದು ರೀತಿಯ ಬೇಸರದ ಭಾವನೆ ಮನದಲ್ಲಿ ಇರುತ್ತದೆ.

ನನಗಂತೂ ಸಣ್ಣವಳಿದ್ದಾಗ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸುವ ದಿನದಂದು ಮನದಲ್ಲಿ ಒಂದು ರೀತಿಯ ಗೊಂದಲ ಮಿಶ್ರಿತ ಬೇಸರವು ಮನೆ ಮಾಡಿರುತ್ತಿತ್ತು. ಅಯ್ಯೋ… ಪಾಪ…ಗಣಪತಿಯನ್ನು ನೀರಿನಲ್ಲಿ ಬಿಟ್ಟರೆ ಮುಳುಗಿ ಆತನಿಗೆ ಉಸಿರು ಗಟ್ಟಿದಂತಾಗುವುದಿಲ್ಲವೇ…? ಆತನಿಗೆ ಒಬ್ಬನಿಗೆ ಅದೆಷ್ಟು ಭಯವಾಗಿರಬಹುದು ಎಂಬ ಬೇಸರ ಒಂದೆಡೆಯಾದರೆ, ಇನ್ನೊಂದೆಡೆ ಅಮ್ಮ ಹೇಳುತ್ತಿದ್ದ ಗೌರಿಯು ಗಣೇಶನ ತಾಯಿ ತನ್ನ ತಾಯಿಯ ಬಳಿಗೆ ಮಗನನ್ನು ಸೇರಿಸಲಾಗುತ್ತದೆ ಎಂದು ಹೇಳುತ್ತಿದ್ದುದ್ದನ್ನು ಕೇಳಿ ಏನೋ ಸಮಾಧಾನದ ಭಾವ. ಹೀಗೆ ಅರ್ಥವಿಲ್ಲದ ಅನೇಕ ಪ್ರಶ್ನೆಗಳು ಮನದಲ್ಲಿ ಸುಳಿದಾಡುತ್ತಿದ್ದವು.

Advertisement

ಆ ವಯಸ್ಸೇ ಅಂತಹುದು. ಮುಗ್ಧತೆ ಬಿಟ್ಟರೆ ಬೇರೇನೂ ಇಲ್ಲ. ಮನೆಯಲ್ಲಿ ಗಣಪತಿಗೆಂದು ಇಟ್ಟ ಹಾಲನ್ನು ಗಣಪ ಕುಡಿಯುವನೇನೋ ಎಂದು ಕುತೂಹಲದಿಂದ ಕಾದು, ಕೊನೆಗೆ ಸಾಕಾಗಿ ಅಮ್ಮನ ಕಣ್ಣು ತಪ್ಪಿಸಿ ಹಾಲೆಲ್ಲ ಕುಡಿದು, ಅಮ್ಮಾ ಗಣಪತಿ ಹಾಲು ಕುಡಿದ ಎಂದು ಹೇಳಿಬಿಡುತ್ತಿದ್ದೆ.

ಮನೆಯಲ್ಲಿ ಎಲ್ಲರೂ ಚೌತಿ ಪೂಜೆ ಮಾಡುವುದರಲ್ಲಿ ಮುಳುಗಿದ್ದರೆ, ನಾನು ಮಾತ್ರ ಗಣೇಶನ ಎದುರಿನಲ್ಲಿ ಇಟ್ಟ ಸಿಹಿ ತಿಂಡಿಗಳನ್ನು ಬಾಚಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ನನ್ನದೇ ಆದ ಯೋಚನೆಯಲ್ಲಿ ತಲ್ಲೀನನಾಗಿರುತ್ತಿದ್ದೆ.

ಅಂದು ಮನೆಯಲ್ಲಿ ಮಾಡುತ್ತಿದ್ದ ಆ ಸಣ್ಣ ಪೂಜೆಯಲ್ಲಿ ಇರುತ್ತಿದ್ದ ಸಂಭ್ರವವು ಇಂದು ನಮ್ಮಷ್ಟು ಎತ್ತರವಾದ ವಿಗ್ರಹವನ್ನು ಇಟ್ಟು ಪೂಜಿಸುವ ಗಣೇಶೋತ್ಸವದಲ್ಲಿ ಪಾಲ್ಗೊಂಡಾಗಲೂ ಕೂಡ ಸಿಗುವುದಿಲ್ಲ.

ಕಾಲ ಬದಲಾದಂತೆ ಆಚರಣೆಗಳ ರೀತಿಯು ಬದಲಾಗುತ್ತಾ ಹೋಗುತ್ತದೆ ಮಾತ್ರವಲ್ಲದೇ ಆಚರಿಸು ಆಚರಣೆಯಲ್ಲಿ ಭಾಗಿಗಳಾಗುವವರ ಮನಸ್ಥಿತಿಯಲ್ಲಿಯು ಕೂಡ ಅನೇಕ ವ್ಯತ್ಯಾಸಗಳು ಉಂಟಾಗಿರುತ್ತದೆ.

 -ಪ್ರಸಾದಿನಿ ಕೆ. ತಿಂಗಳಾಡಿ

ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.