Advertisement

ಕಲಾವಿದರಿಂದ ರೂಪುಗೊಳ್ಳುತ್ತಿವೆ ವಿಗ್ರಹಗಳು

11:48 PM Aug 30, 2019 | Sriram |

ಬಂಟ್ವಾಳ: ಸ್ವಾತಂತ್ರ್ಯ ಪಡೆಯುವ ಉದ್ದೇಶದಿಂದ ಮುಂಬಯಿಯಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ರಾಷ್ಟ್ರವ್ಯಾಪಿಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಅಂಕಿಅಂಶ ಪ್ರಕಾರ ಈ ಬಾರಿ 82 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ.

Advertisement

ವಿಗ್ರಹ ನಿರ್ಮಾಪಕರ ಪ್ರಕಾರ ಗೃಹ ಪೂಜಿತ ಸಹಿತ 222 ಗಣೇಶ ಮೂರ್ತಿಗಳ ನಿರ್ಮಾಣ ನಡೆದಿದೆ. ಸಾರ್ವಜನಿಕ ಉದ್ದೇಶದ್ದು ಮೂರರಿಂದ ಐದು ದಿನ, ಮನೆ ಬಳಕೆಗೆ ಒಂದು ದಿನದ ಪೂಜೆಗೆ ವಿಗ್ರಹ ತಯಾರಿ ಆಗುತ್ತದೆ. ಆಧುನಿಕ ಸೌಲಭ್ಯಗಳಿಂದ ವಿಗ್ರಹ ರಚನೆ ಹೊಸ ಬಗೆಯಲ್ಲಿ ಆಗುತ್ತಿದ್ದು, ಹಾಸನ, ಬೆಂಗಳೂರು ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಸಿದ್ಧ ವಿಗ್ರಹಗಳ ಮಾರಾಟದ ವ್ಯವಸ್ಥೆಯೂ ಇರುವುದರಿಂದ ಜನಸಾಮಾನ್ಯರು ಜಿಲ್ಲೆಯಲ್ಲಿ ಇಂತಹ ವಿಗ್ರಹಗಳನ್ನು ಬಳಸುವ ಸುಲಭ ವಿಧಾನಕ್ಕೆ ಬದಲಾಗುತ್ತಿದ್ದಾರೆ. ಅನೇಕರು ಮಂಗಳೂರು, ಪುತ್ತೂರಿನ ವಿಗ್ರಹ ನಿರ್ಮಾಪಕರಲ್ಲಿ ಖರೀದಿಸಿ ತರುತ್ತಾರೆ.

ಭಂಡಾರಿಬೆಟ್ಟು ನಿವಾಸಿ ಬಿ. ಶಂಕರನಾರಾಯಣ ಹೊಳ್ಳರು ತನ್ನ ತಂದೆಯ ಕಾಲದಲ್ಲಿ ಮಾಡುತ್ತಿದ್ದ ಸೇವೆಯನ್ನು ಮುಂದುವರಿಸಿದ್ದಾರೆ. ಬಸ್ತಿ ಸದಾಶಿವ ಶೆಣೈ ಸ್ವಂತ ನೆಲೆಯಲ್ಲಿ
ಸ್ವತಃ ಶಿಲಾ ಶಿಲ್ಪಿಯಾಗಿದ್ದು, ಮಣ್ಣಿನ ವಿಗ್ರಹ ರಚನೆ ಸೇವೆಯನ್ನು ಹಿರಿಯರ ಮಾರ್ಗದರ್ಶನದಂತೆ ಮುಂದುವರಿಸಿದ್ದಾರೆ.

ಗಣೇಶ ಚತುರ್ಥಿ ಪ್ರಯುಕ್ತ ಗಣಪನ ಆರಾಧನೆಗೆ ಬಂಟ್ವಾಳದ ಪ್ರತಿ ಗ್ರಾಮ ಗ್ರಾಮಗಳಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಗಣಪನ ವಿಗ್ರಹ ತಯಾರಿಸುವಲ್ಲಿ ಕಲಾವಿದರು ಹಗಲು-ರಾತ್ರಿ ಎನ್ನದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಲೂಕಿನ ಪ್ರಮುಖ ಗಣೇಶೋತ್ಸವಗಳು
- ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಾಯಿ-8ನೇ ವರ್ಷ
-ಸಾರ್ವಜನಿಕ ಶ್ರೀ ಗಣೇಶೋತ್ಸವ ಇರ್ವತ್ತೂರು-13ನೇ ವರ್ಷ
-ಸಾರ್ವಜನಿಕ ಶ್ರೀ ಗಣೇಶೋತ್ಸವ ಅಚರಣ ಸಮಿತಿ ಜಕ್ರಿಬೆಟ್ಟು-16ನೇ ವರ್ಷ
-ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು-16ನೇ ವರ್ಷ
-ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ನೀರಪಾದೆ ಬಾಳ್ತಿಲ- 23ನೇ ವರ್ಷ
- ಹಿಂದೂ ಹಿತರಕ್ಷಣ ವಿಶ್ವಸ್ಥ ಮಂಡಳಿ ಸಂಗಬೆಟ್ಟು ಸಿದ್ದಕಟ್ಟೆ-32ನೇ ವರ್ಷ
-ವಾಮದಪದವು ಗಣೇಶ ಮಂದಿರ ಗೌರಿಗಣೇಶೋತ್ಸವ-36ನೇ ವರ್ಷ
-ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ-37ನೇ ವರ್ಷ
-ಹಿಂದೂ ಧಾರ್ಮಿಕ ಸೇವಾ ಸಮಿತಿ, ಬಿ.ಸಿ. ರೋಡ್‌-40ನೇ ವರ್ಷ
-ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ಬಂಟ್ವಾಳ-44ನೇ ವರ್ಷ
-ಕಲ್ಲಡ್ಕ ಶ್ರೀರಾಮ ಮಂದಿರ-44ನೇ ವರ್ಷ

Advertisement

ಪರಿಸರ ಸ್ನೇಹಿಯಾಗಿ ಆಚರಿಸಿ
ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿ ಸಂಭ್ರಮವಾಗಿ ಆಚರಿಸುವಂತೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.

ವಿಗ್ರಹವನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಬೇಕು. ಜೇಡಿಮಣ್ಣನ್ನು ಬಳಕೆ ಮಾಡುವುದು, ವಿಗ್ರಹಕ್ಕೆ ವಿಷಕಾರಿ ಅಲ್ಲದ, ನೀರಿನಲ್ಲಿ ಕರಗುವ ಬಣ್ಣ ಬಳಕೆ, ನಿಷೇಧಿತ ಬಣ್ಣ ಬೇಡ, ತಾತ್ಕಾಲಿಕ ಸೀಮಿತ ಕೊಳಗಳನ್ನು ವಿಗ್ರಹ ವಿಸರ್ಜನೆಗೆ ಬಳಸಿ- ನದಿ, ಸರೋವರ, ಕುಡಿಯುವ ನೀರಿನ ವ್ಯವಸ್ಥೆ ಬಳಕೆ ಬೇಡ, ಘನ ತ್ಯಾಜ್ಯ ಸುಡುವುದು-ವಿಸರ್ಜನೆ ಮಾಡುವುದು ಬೇಡ, ಪ್ಲಾಸ್ಟಿಕ್‌ ಅಲಂಕಾರಿಕ ವಸ್ತುಗಳನ್ನು ಬಳಸಬಾರದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

40 ವರ್ಷಗಳಿಂದ ಸೇವೆ
ತಂದೆ ಕಾಲದಿಂದ ಗಣಪತಿ ವಿಗ್ರಹ ಮಾಡುತ್ತಿದ್ದೇವೆ. ನಾನು 40 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಪ್ರಸ್ತುತ ವರ್ಷ 90 ವಿಗ್ರಹ ನಿರ್ಮಾಣಕ್ಕೆ ಒಪ್ಪಿಕೊಂಡಿ ದ್ದೇನೆ. 20-30 ದಿನಗಳಲ್ಲಿ ಸಹಾಯಕರನ್ನು ಇಟ್ಟುಕೊಂಡು ಎಲ್ಲ ವಿಗ್ರಹ ರಚಿಸ‌ಬಹುದು.
– ಬಿ. ಶಂಕರನಾರಾಯಣ ಹೊಳ್ಳ
ಬಂಟ್ವಾಳ ಭಂಡಾರಿಬೆಟ್ಟು ಚಿಲಿಪಿಲಿ ಗೊಂಬೆ ಬಳಗ

 25 ವರ್ಷಗಳಿಂದ ಸೇವೆ
ಪ್ರಸ್ತುತ ವರ್ಷದಲ್ಲಿ ನನಗೆ 68 ಗಣಪತಿ ವಿಗ್ರಹ ರಚನೆಯ ಆರ್ಡರ್‌ ಇದೆ. ಐದು ಅಡಿ ಎತ್ತರದ ವಿಗ್ರಹ ಅಥವಾ ಜನರ ಅಪೇಕ್ಷೆಯಂತೆ ವಿಗ್ರಹ ಮಾಡಲಾಗುತ್ತದೆ. ಸುಮಾರು ಮೂರು ತಿಂಗಳ ಹಿಂದೆ ಗಣಪತಿ ವಿಗ್ರಹ ಮಾಡಲು ಆರಂಭಿಸಿದ್ದೇನೆ. ಕಳೆದ 25 ವರ್ಷಗಳಿಂದ ಈ ಸೇವೆ ಮಾಡುತ್ತಿದ್ದೇನೆ.
– ಬಸ್ತಿ ಸದಾಶಿವ ಶೆಣೈ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next