Advertisement

ಗಾಂಧಿ ತತ್ತ್ವ ಇಂದಿಗೂ ಪ್ರಸ್ತುತ: ಪಿ.ಸಿ.ವಿಷ್ಣುನಾಥನ್‌

12:34 AM Oct 03, 2019 | Team Udayavani |

ಮಂಗಳೂರು: ಅಧರ್ಮದ ವಿರುದ್ಧ ಹೋರಾಡಲು ಅಹಿಂಸೆ ಪ್ರಮುಖ ಅಸ್ತ್ರ. ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು ಎಂಬ ಗಾಂಧೀಜಿ ಅವರ ತತ್ತ್ವ ಇಂದಿಗೂ ಪ್ರಸ್ತುತ ಎಂದು ಎಐಸಿಸಿ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥನ್‌ ಹೇಳಿದರು.

Advertisement

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಂಗಳೂರು ವತಿಯಿಂದ ಬುಧವಾರ ಮಂಗಳಾ ಕ್ರೀಡಾಂಗಣ ಸಮೀಪದ ಕರಾವಳಿ ಉತ್ಸವ ಮೈದಾನದಿಂದ ಪುರಭವನದವರೆಗೆ ನಡೆದ ಕಾಲ್ನಡಿಗೆ ಜಾಥಾ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಆಯೋಜಿಸಿದ ದ.ಕ.ಜಿ. ಕಾಂಗ್ರೆಸ್‌ ನಾಯಕರು ರಾಜ್ಯಕ್ಕೆ ಮಾದರಿ ಎಂದರು.

ಗಾಂಧಿ ಹೃದಯ ಸಾಮ್ರಾಟ
“ಗಾಂಧೀ ಜೀವನ ಚರಿತ್ರೆ-ಚಿಂತನೆ’ ವಿಷಯದ ಬಗ್ಗೆ ಫಾರಂ ಫಾರ್‌ ಜಸ್ಟಿಸ್‌ನ ಜಿಲ್ಲಾಧ್ಯಕ್ಷ ದಯಾನಾಥ ಕೋಟ್ಯಾನ್‌ ಅವರು ಗಾಂಧೀಜಿ ಭಾರತೀಯರ ಹೃದಯ ಸಾಮ್ರಾಟ. ಪಾಶ್ಚಾತ್ಯರು ಗಾಂಧೀಜಿಯನ್ನು ಸುಲಭವಾಗಿ ಸ್ವೀಕರಿಸಲಿಲ್ಲ. ಭಾರತದಲ್ಲಿಯೂ ಅದೇ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಸಂಗ್ರಾಮ ಗಾಂಧೀಜಿಯವರ ದೊಡ್ಡ ಸಾಧನೆ ಎಂದು ಹೇಳಿದರು.

ಕರಾವಳಿ ಉತ್ಸವ ಮೈದಾನದಿಂದ ಜಾಥಾ ಹೊರಟು ಲಾಲ್‌ಬಾಗ್‌ ಜಂಕ್ಷನ್‌ನಲ್ಲಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಪಿವಿಎಸ್‌ ವೃತ್ತ, ಬಂಟ್ಸ್‌ ಹಾಸ್ಟೆಲ್‌ ವೃತ್ತ, ಅಂಬೇಡ್ಕರ್‌ ವೃತ್ತ, ಹಂಪನಕಟ್ಟೆ ವೃತ್ತದ ಮೂಲಕ ಸಾಗಿ ಪುರಭವನಕ್ಕೆ ತಲುಪಿತು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್‌, ವಸಂತ ಬಂಗೇರ, ಗಂಗಾಧರ ಗೌಡ, ಮಾಜಿ ಶಾಸಕರಾದ ಬಿ.ಎ. ಮೊದಿನ್‌ ಬಾವಾ, ಬಿ. ಶಕುಂತಳಾ ಶೆಟ್ಟಿ, ಜೆ.ಆರ್‌. ಲೋಬೊ, ಕಾಂಗ್ರೆಸ್‌ ನಾಯಕರಾದ ಮಿಥುನ್‌ ರೈ, ಶಶಿಧರ ಹೆಗ್ಡೆ, ಭಾಸ್ಕರ್‌ ಕೆ., ಮಹಮ್ಮದ್‌ ಮೋನು, ಕೋಡಿಜಾಲ್‌ ಇಬ್ರಾಹಿಂ, ಬಿ.ಎಚ್‌. ಖಾದರ್‌, ಡಾ| ರಘು, ಸಾಹುಲ್‌ ಹಮೀದ್‌, ನಝೀರ್‌ ಬಜಾಲ್‌, ಶಾಲೆಟ್‌ ಪಿಂಟೋ, ಮಮತಾ ಗಟ್ಟಿ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next