Advertisement

ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ ಗಾಂಧಿನಗರ

03:22 PM May 09, 2022 | Team Udayavani |

ಸಿಂಧನೂರು: ವಿಶ್ವೇಶ್ವರ ಶಿವಪಂಚಾಯತ ದೇಗುಲ ನಿರ್ಮಿಸಿ ಕಲ್ಯಾಣ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಸ್ಥಳದಲ್ಲೇ ಮತ್ತೊಂದು ಐತಿಹಾಸಿಕ ಲಕ್ಷ ಲಿಂಗ ಸಹಿತ ಆತ್ಮಲಿಂಗ ಮಹಾಗಿರಿ ಪ್ರತಿಷ್ಠಾಪನೆಯಾಗಿದ್ದು, ತಾಲೂಕಿನ ಗಾಂಧಿ ನಗರ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.

Advertisement

ಶಿವ ದೇಗುಲದ ದರ್ಶನಕ್ಕೆ ಭೇಟಿ ನೀಡುತ್ತಿದ್ದ ಅಪಾರ ಸಂಖ್ಯೆಯ ಭಕ್ತರಿಗೆ ಶಿವಪರಿವಾರ ಸಮೇತ ಮಹಾಗಿರಿಯ ದರ್ಶನಕ್ಕೂ ಅವಕಾಶ ದೊರಕಿದೆ. ಧಾರ್ಮಿಕ ಪುಣ್ಯಕ್ಷೇತ್ರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಮಹಾಗಿರಿಯ ವಿಶೇಷ ಏನು?

ಒಂದು ಲಕ್ಷ ಶಿವಲಿಂಗಗಳು, ದೇಶದಲ್ಲೇ ಅಪರೂಪವಾಗಿರುವ ಆತ್ಮಲಿಂಗ, ಅಷ್ಟಬೈರವ ಮೂರ್ತಿಗಳು, ದಕ್ಷಿಣಾಮೂರ್ತಿ, ವೀರಭದ್ರಸ್ವಾಮಿ, ಗಣಪತಿ- ಕಾರ್ತಿಕೇಯ ಸಮೇತ ಅರ್ಧನಾರೀಶ್ವರ ಲಿಂಗ, ಸದ್ಯೋಜಾತ- ಆಘೋರ- ವಾಮದೇವ- ಈಶಾನ- ತತ್ಪುರುಷ ಮೂರ್ತಿಗಳು, ಭಗೀರಥ ಪರಾಶಿವ, ಗಂಗೆ, ಗೌರಿ, ನಂದಿ ಸಮೇತ ಗಂಗಾವತರಣಂ, ಧ್ಯಾನ ಈಶ್ವರಮೂರ್ತಿ ಏಕಾದಶ ರುದ್ರರು, ಈಶಾನ ರುದ್ರಮೂರ್ತಿ, ನವಬ್ರಹ್ಮರು, ನಂದೀಶ್ವರ, ಚಂಡೀಶ್ವರ, ಭೃಂಗೀಶ್ವರ, ಸಪ್ತಮಾತೃಕೆಯರು, ಅನ್ನಪೂರ್ಣದೇವಿ, ವಿಶ್ವಜನನಿಮಾತೆ, ಅಪರ್ಣಾದೇವಿ ಒಳಗೊಂಡಂತೆ 58 ದಿವ್ಯಶಕ್ತಿ ದೇವರೊಂದಿಗೆ ಈ ಲಕ್ಷ ಲಿಂಗ ಮಹಾಗಿರಿಯ ಪ್ರತಿಷ್ಠಾಪನೆ ನೆರವೇರಿಸಲಾಗಿದೆ.

ಶಿವರಾತ್ರಿಯಲ್ಲಿ ಮಾತ್ರ ಅವಕಾಶ

Advertisement

ಲಕ್ಷ ಲಿಂಗ ಸಮೇತ ಆತ್ಮಲಿಂಗ ಪ್ರತಿಷ್ಠಾಪನಾ ಮಹೋತ್ಸವ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಅವಕಾಶ ಮಾಡಿಕೊಡಲಾಗಿತ್ತು. ಸಾಮಾನ್ಯ ದಿನಗಳಲ್ಲಿ ಆತ್ಮಲಿಂಗ ದೇಗುಲದೊಳಕ್ಕೆ ಪ್ರವೇಶ ಇರಲ್ಲ. ಮಹಾಶಿವರಾತ್ರಿಯ ಕಾರ್ತಿಕ ಹುಣ್ಣಿಮೆ ದಿನಗಳಲ್ಲಿ ಅನುಮತಿ ಪಡೆಯುವ ದಂಪತಿಗೆ ಮಾತ್ರ ಲಿಂಗಾಭಿಷೇಕಕ್ಕೆ ಅವಕಾಶವಿರುತ್ತದೆ. ವರ್ಷದಲ್ಲಿ ಒಂದು ದಿನ ಬೆಳಗ್ಗೆ 4ಗಂಟೆಯಿಂದ 5.30ರವರೆಗೆ ದರ್ಶನ-ಅಭಿಷೇಕಕ್ಕೆ ಮಾತ್ರ ಅವಕಾಶ. ಅವರು ತಮ್ಮೊಂದಿಗೆ 10 ಮಂದಿಯನ್ನು ಮಾತ್ರ ಕರೆದುಕೊಂಡು ಹೋಗಿ ಅಭಿಷೇಕದಲ್ಲಿ ಭಾಗವಹಿಸಬಹುದು. ಶಿವಪರಿವಾರದ ಎಲ್ಲ ಶಕ್ತಿ ದೇವರು ಹಾಗೂ ಕರ್ನಾಟಕದಲ್ಲಿಯೇ ಅಪರೂಪವಾದ ಸ್ಪಟಿಕ ಲಿಂಗ (ಆತ್ಮಲಿಂಗ)ವನ್ನು ಪ್ರತಿಷ್ಠಾಪಿಸಿರುವುದರಿಂದ ಶ್ರೀಕ್ಷೇತ್ರ ಅಂತಾರಾಜ್ಯಮಟ್ಟದಲ್ಲೂ ಭಕ್ತರ ಗಮನ ಸೆಳೆಯುತ್ತಿದೆ.

ದೇಶದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದು, ಗಾಂಧಿ ನಗರದಲ್ಲಿ ನಿರ್ಮಿಸಿರುವ ಸ್ಫಟಿಕಲಿಂಗ ಮಹಾಗಿರಿಯನ್ನು ನೋಡಿರಲಿಲ್ಲ. ಇದೊಂದು ಐತಿಹಾಸಿಕ ಪುಣ್ಯಕ್ಷೇತ್ರವಾಗಲಿದೆ. – ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next