Advertisement

ನಂದಳಿಕೆ ಗ್ರಾ.ಪಂ. ನೂತನ ಕಚೇರಿ ಕಟ್ಟಡ ಕಾಮಗಾರಿಗೆ ವಿಘ್ನ

01:22 AM Jul 23, 2019 | Team Udayavani |

ಬೆಳ್ಮಣ್‌: ಕಳೆದ ಗ್ರಾ.ಪಂ. ಚುನಾವಣೆಯ ಸಂದರ್ಭ ಬೆಳ್ಮಣ್‌ ಗ್ರಾಮ ಪಂಚಾಯತ್‌ನಿಂದ ಬೇರ್ಪಟ್ಟು ಸ್ವಂತ ಅಸ್ತಿತ್ವದ ಮೂಲಕ ಪ್ರಾರಂಭಗೊಂಡ ನಂದಳಿಕೆ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ಕಾಮಗಾರಿಗೆ ವಿಘ್ನ ಒದಗಿದೆ.

Advertisement

ಖಾಸಗಿಯವರವ ತಡೆ

ನೂತನ ಕಟ್ಟಡದಲ್ಲಿ ಕಾರ್ಯಾಚರಿಸಬೇಕೆಂಬ ಹಂಬಲದಿಂದ ಸುಮಾರು 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾದ ಕಾಮಗಾರಿಗೆ ಪಂಚಾಯತ್‌ನ ಹಿಂಭಾಗದ ಖಾಸಗಿಯವರು ತಡೆಯಾಜ್ಞೆ ತಂದಿದ್ದು ನಂದಳಿಕೆ ಗ್ರಾಮ ಪಂಚಾಯತ್‌ ಇಕ್ಕಟ್ಟಿಗೆ ಸಿಲುಕಿದೆ. ಖಾಸಗಿಯವರ ಮನೆ ಹಾಗೂ ಜಮೀನಿಗೆ ಹೋಗಲು ರಸ್ತೆಯ ಪರ್ಯಾಯ ವ್ಯವಸ್ಥೆವ ಇಲ್ಲದ ಕಾರಣ ಪಂಚಾಯತ್‌ ನಿರ್ಮಿಸಲುದ್ದೇಸಿಸಿದ ಕಟ್ಟಡದ ಜಾಗದಲ್ಲಿಯೇ ತಮ್ಮ ದಾರಿ ಇರುವುದಾಗಿ ವಾದಿಸಿರುವ ಖಾಸಗಿಯವರು ಇದೀಗ ತಡೆದಿದ್ದಾರೆ ಎಂದು ಪಂಚಾಯತ್‌ ತಿಳಿಸಿದೆ.

ಬಾಡಿಗೆ ಕಟ್ಟಡದಲ್ಲಿ ಪಂಚಾಯತ್‌ ಕಚೇರಿ

ನಂದಳಿಕೆ ಗ್ರಾ.ಪಂ. ಆಡಳಿತ ಈ ಹಿಂದೆ ಕಂದಾಯ ಇಲಾಖೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಬಳಿಕ ಸ್ವಂತ ಅಸ್ತಿತ್ವಕ್ಕಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಇಳಿದಿತ್ತು. ಇದೀಗ ಬಾಡಿಗೆ ಕಟ್ಟಡದಲ್ಲಿ ಕಚೇರಿ ಸಹಿತ ಆಡಳಿತ ನಿರ್ವಹಣೆ ನಡೆಯುತ್ತಿದ್ದು ತಿಂಗಳಿಗೆ 4,500 ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ. ಜನಸಾಮಾನ್ಯರ ತೆರಿಗೆ ಹಣ ಈ ರೀತಿ ಬಾಡಿಗೆಗೆ ವ್ಯವಯವಾಗುತ್ತಿರುವ ಬಗ್ಗೆಯೂ ಜನರಲ್ಲಿ ವ್ಯಾಪಕ ಆಸಮಾಧಾನ ಇದೆ. ಕಟ್ಟಡ ನಿರ್ಮಾಣದ ಬಗ್ಗೆ ಇರುವ ಗೊಂದಲ ಪರಿಹರಿಸಿ ಸ್ವಂತ ನೆಲೆ ಕಂಡುಕೊಳ್ಳುವಲ್ಲಿ ಪಂಚಾಯತ್‌ ಆಡಳಿತ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂಬ ಬಲವಾದ ಕೂಗೂ ಕೇಳಿ ಬರುತ್ತಿದೆ.

Advertisement

ಅಂಗನವಾಡಿ ಮಕ್ಕಳು ಅಪಾಯದಲ್ಲಿ

ಈ ಕಟ್ಟಡ ನಿರ್ಮಾಣ ಕಾಮಗಾರಿಯ ಜಾಗದ ಪಕ್ಕದಲ್ಲಿಯೇ ಅಂಗನವಾಡಿಯೂ ಇದೆ. ಕಟ್ಟಡ ನಿರ್ಮಾಣದ ಪಿಲ್ಲರ್‌ ರಚನೆಗೆಂದು ತೋಡಲಾದ ಗುಂಡಿಗಳು ಇನ್ನೂ ತೆರೆದ ಸ್ಥಿತಿಯಲ್ಲಿದ್ದು ನೀರಿನಿಂದ ತುಂಬಿರುವ ಕಾರಣ ಅಂಗನವಾಡಿ ಮಕ್ಕಳಿಗೆ ಅಪಾಯ ಆಹ್ವಾನಿಸುವಂತಿದೆ. ಈ ಬಗ್ಗೆ ಪಂಚಾಯತ್‌ ತಡೆಬೇಲಿ ನಿರ್ಮಿಸಿದ್ದರೂ ಅದು ಈಗ ಚೆಲ್ಲಾ ಪಿಲ್ಲಿಯಾಗಿರುವ ಕಾರಣ ಆತಂಕ ಎದುರಾಗಿದೆ.

ಇನ್ನು ಕೆಲವೇವ ತಿಂಗಳುಗಳಲ್ಲಿ ಪಂಚಾಯತ್‌ ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನ ನೂತನ ಕಟ್ಟಡ ನಿರ್ಮಿಸಿ ಎಂದು ಜನ ಆಗ್ರಹಿಸಿದ್ದಾರೆ.

ನೂತನ ಕಟ್ಟಡ ಶೀಘ್ರ ನಿರ್ಮಿಸಿ

ಬಾಡಿಗೆ ಕಟ್ಟಡಕ್ಕೆ ಜನ ಸಾಮಾನ್ಯರ ತೆರಿಗೆ ಹಣ ಬಾಡಿಗೆ ನೀಡುವ ಬದಲು ಖಾಸಗಿಯವರ ತಡೆಯ ಸಮಸ್ಯೆಯ ಬಗ್ಗೆ ಗಮನ ಹರಿಸಿ ನೂತನ ಕಟ್ಟಡ ಶೀಘ್ರ ನಿರ್ಮಿಸಿ.
– ಹರಿ, ನಂದಳಿಕೆ ಗ್ರಾಮಸ್ಥ
Advertisement

Udayavani is now on Telegram. Click here to join our channel and stay updated with the latest news.