Advertisement

ಗಾಂಧಿ ಸಾಹಿತ್ಯ ಸಂಘ

03:42 PM Feb 11, 2017 | |

ಹಳೆಯ ಬೆಂಗಳೂರು ಅದೆಷ್ಟೋ ಚೆನ್ನಾಗಿತ್ತು ಎಂದು ಇಲ್ಲಿಯೇ ದಶಕಗಳಷ್ಟು ಜೀವನವನ್ನು ಕಳೆದಿರುವ ಹಿರಿಯರು ಹೇಳುವುದನ್ನು ಕೇಳಿರಬಹುದು. ಈಗಿನವರಿಗೆ ಅವರು ಹೇಳುವ ಹಳೆಯ ಬೆಂಗಳೂರನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾದ ಮಾತು. ಆದರೆ ಒಂದು ವೇಳೆ ಕಲ್ಪಿಸಿಕೊಳ್ಳುವುದು ಸಾಧ್ಯವಾದರೆ ಮಾತ್ರ ಅದೊಂದು ಸುಂದರ ಅನುಭವ. ಟ್ರಾಫಿಕ್‌ ಇಲ್ಲದ ರಸ್ತೆಗಳು. ಹೆಚ್ಚು ವಾಹನ ಸಂಚಾರವಿಲ್ಲದ ಬೀದಿಗಳು, ಸಂತೆ, ಹಬ್ಬಗಳು, ನೆನೆಸಿಕೊಳ್ಳುತ್ತಿದ್ದರೆ ಹಾಗಿರಬಾರದಿತ್ತೇ ಈಗಲೂ ಎನ್ನಿಸದೇ ಇರದು. ಬೆಂಗಳೂರು ಎಷೆcà ಮುಂದುವರಿದಿದ್ದರೂ, ಆಧುನಿಕ ಜಗತ್ತಿಗೆ ತೆರೆದುಕೊಂಡಿದ್ದರೂ ತನ್ನ ಗತ ವೈಭವವನ್ನು ಮರೆತಿಲ್ಲ. ಪಾರಂಪರಿಕ ಕಟ್ಟಡ, ಬೀದಿ, ಗ್ರಂಥಾಲಯಗಳ ಮೂಲಕ ತನ್ನ ಅಂತರಾಳದಲ್ಲಿ ಹಳೆಯ ಬೆಂಗಳೂರನ್ನು ಹುದುಗಿಸಿಕೊಂಡಿದೆ. ಇವತ್ತಿನ ದಿನದಲ್ಲಿ ಆ ಹಳೆಯ ಬೆಂಗಳೂರನ್ನು ನೋಡಬೇಕೆಂದರೆ ಐತಿಹಾಸಿಕ ಹಿನ್ನೆಲೆಯಿರುವ ಇಲ್ಲಿನ ಸ್ಥಳಗಳಿಗೆ ಭೇಟಿ ಕೊಟ್ಟರಾಯಿತು. ಅಂದಿನ ಬೆಂಗಳೂರು ನಿಮ್ಮ ಕಣ್ಣಿಗೆ ಗೋಚರಿಸುವುದರಲ್ಲಿ ಯಾವುದೇ ಸಂಶಯ ಬೇಡ. ಅಂತಹ ಸ್ಥಳಗಳಲ್ಲೊಂದು ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘ. ಮೆಜೆಸಿcಕ್‌ ಕಡೆಯಿಂದ ಬರುವಾಗ ಮಲ್ಲೇಶ್ವರಂ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿಕೊಂಡರೆ ಕೆ.ಸಿ ಜನರಲ್‌ ಆಸ್ಪತ್ರೆ ಸಿಗುತ್ತದೆ. ಪಕ್ಕದಲ್ಲೇ ಮೈದಾನವಿದೆ. ಅಲ್ಲಿಂದ ಎರಡು ಕ್ರಾಸು ಬಿಟ್ಟು ಸಿಗುತ್ತದೆ ಗಾಂಧಿ ಸಾಹಿತ್ಯ ಸಂಘ.

Advertisement

ಸಾಹಿತಿ ಸಿದ್ದವನಹಳ್ಳಿ ಕೃಷ್ಣಶರ್ಮಅವರ ಮುಂದಾಳತ್ವದಲ್ಲಿ ಸಂಘ ಸ್ಥಾಪನೆಯಾಗಿದ್ದು 1942ರಲ್ಲಿ! ಹೌದು ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಸಮಯದಲ್ಲೇ ಈ ಸಂಘ ಪ್ರಾರಂಭವಾಗಿದ್ದು. ಅದರ ಹಿಂದೆ ಒಂದು ಕತೆಯಿದೆ. ಭಾರತದಾದ್ಯಂತ ಸ್ವಾತಂತ್ರÂ ಹೋರಾಟದ ಕಿಚ್ಚು ಹಬ್ಬಿದ್ದ ಸಂದರ್ಭದಲ್ಲಿ ಯುವಕರೆಲ್ಲರೂ ಪಾಲ್ಗೊಳ್ಳಲು ಹಾತೊರೆಯುತ್ತಿದ್ದರು. ಆಗ ಬೆಂಗಳೂರಿನ ಯುವಕರಲ್ಲೂ ಗಾಂಧಿಯವರ ಹೋರಾಟದಲ್ಲಿ ಭಾಗಿಯಾಗಬೇಕೆಂಬ, ಆ ಮಹತ್ಕಾರ್ಯದಲ್ಲಿ ಅಳಿಲುಸೇವೆ ಸಲ್ಲಿಸಬೇಕೆಂಬ ಮಹದಾಸೆ ಮೊಳೆಯಿತು. ಅದರ ಫ‌ಲವಾಗಿ ತಲೆಯೆತ್ತಿದ್ದೇ ಗಾಂಧಿ ಸಾಹಿತ್ಯ ಸಂಘ. ಭಾರತೀಯರಲ್ಲಿ ಗಾಂಧಿಗಿರಿಯನ್ನು, ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಾಣಿಯನ್ನು ಹರಡುವುದು ಸಂಘದ ಉದ್ದೇಶವಾಗಿತ್ತು. ಅದಕ್ಕಾಗಿ ಅವೇ ವಿಚಾರಗಳುಳ್ಳ ಪುಸ್ತಕಗಳ ಪುಟ್ಟ ಲೈಬ್ರರಿಯೂ ಪ್ರಾರಂಭಗೊಂಡಿತು. ಮೊದಲು ಸಂಘದ್ದು ಅಂತ ಹೇಳಿಕೊಳ್ಳಬಹುದಾದ ಕಟ್ಟಡವಿರಲಿಲ್ಲ. ಬೆಂಗಳೂರಿನ ಹಲ ಪ್ರದೇಶಗಳಲ್ಲಿ ಒಂದಷ್ಟು ಕಾಲ ನೆಲೆ ನಿಂತ ಸಂಘ ಈಗಿರುವ ಮಲ್ಲೇಶ್ವರಂ ಕಟ್ಟಡಕ್ಕೆ ಬಂದಿದ್ದು 1958ರಲ್ಲಿ. 

ಅಂದಿನ ದಿನಗಳಲ್ಲಿ ಕ್ರಾಂತಿಕಾರಿ ಸಂದೇಶಗಳನ್ನು ಬಿತ್ತುತ್ತಿದೆಯೆಂದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಘ ಪ್ರಾರಂಭವಾದಾಗ ಗ್ರಂಥಾಲಯವನ್ನು ತೆರೆಯುವ ಯೋಚನೆಯೇನೂ ಸದಸ್ಯರಲ್ಲಿ ಇರಲಿಲ್ಲ. ಒಮ್ಮೆ ಗಾಂಧಿ ಜಯಂತಿಯನ್ನು ಆಚರಿಸಲು ಚಂದಾ ಎತ್ತಿದ ಹಣದಲ್ಲಿ 120ರು. ಉಳಿಯಿತು. ನೆನಪಿರಲಿ ಅಂದಿನ ನೂರು ರುಪಾಯಿ ಇಂದಿನ ಸಾವಿರಾರು ರು.ಗಳಿಗೆ ಸಮ. ಆ ಹಣವನ್ನೇನು ಮಾಡುವುದು ಅಂತ ಚಿಂತಿಸಿದಾಗ ಲೈಬ್ರರಿ ತೆರೆಯುವ ಯೋಚನೆ ಕಾರ್ಯರೂಪಕ್ಕೆ ಬಂದಿತು. ಸ್ವಾತಂತ್ರಾÂನಂತರ ಹೋರಾಟದಿಂದ ವಿಮುಖಗೊಂಡು ಸಂಪೂರ್ಣ ಸಾಹಿತ್ಯವನ್ನು ಅಪ್ಪಿಕೊಂಡ ಸಂಘ ಅಂದಿನಿಂದಲೂ ಸಾಹಿತಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ. ಇಲ್ಲಿನ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಮುಂತಾದ ಸಾಹಿತ್ಯ ಸಂಬಂಧಿ ಚಟುವಟಿಕೆಗಳಿಗೂ ಅವಕಾಶವಿದೆ.

ಸಂಘದ ಕಟ್ಟಡ ಅದರಲ್ಲೂ ಮಾಸ್ತಿ, ಜಿ.ಪಿ ರಾಜರತ್ನಂ, ತೀನಂಶ್ರೀ ಸೇರಿದಂತೆ ಅನೇಕ ಹೆಸರಾಂತ ಕನ್ನಡ ಸಾಹಿತಿಗಳ ಮೆಚ್ಚಿನ ಅಡ್ಡಾ ಆಗಿತ್ತು. ಗ್ರಂಥಾಲಯದ ಕೆಲ ಹಳೆಯ ಚಂದಾದಾರರು ಈಗಲೂ ನಾನಾ ಜಿಲ್ಲೆಗಳಿಂದ ಪುಸ್ತಕಗಳನ್ನು ಎರವಲು ಪಡೆಯಲು ಬರುತ್ತಾರೆ ಎನ್ನುವುದು ಈ ಸಂಘದ ಹೆಗ್ಗಳಿಕೆ. ಗ್ರಂಥಾಲಯದ ಸ್ಥಾಪಕರಲ್ಲೊಬ್ಬರಾದ ಡಾ. ಎಚ್‌ ಶ್ರೀನಿವಾಸಯ್ಯನವರು ಈಗಿನ ಯುವಕರಲ್ಲಿ ಪುಸ್ತಕಪ್ರೀತಿ ಕಡಿಮೆಯಾಗಿ ಸ್ಮಾರ್ಟ್‌ಫೋನುಗಳಲ್ಲೇ ಕಾಲ ಕಳೆಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಯಾವುದಾದರೊಂದು ದಿನ ಬಿಡುವು ಮಾಡಿಕೊಂಡು ಮನೆ ಮಂದಿ ಸಹಿತ ಗಾಂಧಿ ಸಾಹಿತ್ಯ ಸಂಘವನ್ನು ಕಂಡು ಬರಬಹುದು. ಅದೆಷ್ಟೋ ಗಾಂಧಿವಾದಿಗಳ ಕೈಗಳಲ್ಲಿ ಓದಿಸಿಕೊಂಡ ಅಲ್ಲಿನ ಪುಸ್ತಕಗಳನ್ನು, ಸಾಹಿತಿಗಳು ಕುಳಿತು ನಕ್ಕು ಹರಟಿದ ಅವರಣವನ್ನು ಕಂಡು ಹಳೆಯ ಬೆಂಗಳೂರನ್ನು ಮೆಲುಕು ಹಾಕಬಹುದು.

– ಹವನ

Advertisement
Advertisement

Udayavani is now on Telegram. Click here to join our channel and stay updated with the latest news.

Next