Advertisement

ಗುಜರಿ ಕೊಂಪೆಯಾದ ಗಾಂಧಿ ಪಾರ್ಕ್‌

11:03 AM Jun 28, 2022 | Team Udayavani |

ಕುಂದಾಪುರ: ಇಲ್ಲಿನ ಗಾಂಧಿ ಪಾರ್ಕ್‌ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಾಕಿಂಗ್‌ಗೆ, ಪ್ರೇಮಿಗಳಿಗೆ ಪಿಸುಮಾತಿನ ವಿಹಾರಕ್ಕೆ, ಸಣ್ಣಪುಟ್ಟ ಸಂಭ್ರಮಕ್ಕೆ ಈ ಪಾರ್ಕ್‌ ಹೇಳಿ ಮಾಡಿಸಿದಂತಿದೆ. ಅಚ್ಚುಕಟ್ಟಾಗಿದೆ. ಹೂಗಳ ಬನದಲ್ಲಿ ವಿಹರಿಸುತ್ತಾ, ಹಸುರು ರಾಶಿಯನ್ನು ಕಣ್ಮನ ತುಂಬಿಸಿಕೊಳ್ಳುತ್ತಾ ಸಮಯ ಕಳೆಯಬಹುದು. ಆದರೆ ನಿರ್ವಹಣೆ ಕೊರತೆಯಿಂದ ಒಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಳಾದ ವಾಹನ, ನಿರ್ವಹಣೆಯಿಲ್ಲದ ಆಟದ ಸಾಮಗ್ರಿಗಳಿಂದಾಗಿ ಹೆಸರು ಕೆಡಿಸಿಕೊಳ್ಳುತ್ತಿದೆ.

Advertisement

ಪಾರ್ಕ್‌ಗಳು

ಪುರಸಭೆ ವ್ಯಾಪ್ತಿಯಲ್ಲಿ ಇರುವ ದೊಡ್ಡ ಉದ್ಯಾನವನ ಎಂದರೆ ಇದೇ ಗಾಂಧಿ ಪಾರ್ಕ್‌. ಉಳಿದಂತೆ ಫೆರ್ರಿ ಪಾರ್ಕ್‌, ಟಿಟಿ ರೋಡ್‌ ವಾರ್ಡ್‌ ಪಾರ್ಕ್‌, ಕೋಡಿಯಲ್ಲಿ ಫ್ರೆಂಡ್ಸ್‌ ಗಾರ್ಡನ್‌ ಪಾರ್ಕ್‌ ಮೊದಲಾದವುಗಳಿವೆ. ಅವುಗಳೆಲ್ಲ ಸಣ್ಣಪುಟ್ಟವಾಗಿದ್ದು ಆಯಾ ವಾರ್ಡ್‌ನವರಿಗೆ ಸೀಮಿತವಾಗಿವೆ. ಆದರೆ ಗಾಂಧಿ ಪಾರ್ಕ್‌ ಮಾತ್ರ ನಗರದ ವಿವಿಧೆಡೆಯ ಜನರು ಬರುವುದಷ್ಟೇ ಅಲ್ಲ ಇತರೆಡೆ ಯವರೂ ಬರುವಂತಿದೆ. ನಗರ ಪ್ರದೇಶದಲ್ಲಿ ಇಂತಹ ಉದ್ಯಾನವನ ತೀರಾ ವಿರಳ. ಆಧುನೀಕರಣ ಅಂದರೆ ಟಿ.ವಿ, ಮೊಬೈಲ್‌ ಬರುವ ಮುಂಚೆ ಇದೇ ಉದ್ಯಾನ ವನದಲ್ಲೇ ಕುಂದಾಪುರದ ಅನೇಕರ ಬಾಲ್ಯದ ಸಂಜೆ ಕಳೆದದ್ದು, ಹಿರಿಯ ನಾಗರಿಕರ ಚರ್ಚಾ ಚಾವಡಿ ಆಗಿತ್ತು.

ಕೊಂಪೆ

ಇತ್ತೀಚೆಗೆ ಇದು ಪುರಸಭಾ ಕಸದ ಗಾಡಿ ಇಡುವ ತಂಗುದಾಣವಾಗಿ ಮಾರ್ಪಾಡಾಗಿದೆ. ಹಳೆಯ ಗುಜರಿ ವಾಹನವನ್ನು ಇಲ್ಲೇ ತಂದು ನಿಲ್ಲಿಸಲಾಗಿದೆ. ಪೈಪಿನ ರಾಶಿಗಳಿವೆ. ಕಸದ ವಾಹನಗಳು ಬಂದು ರಸ್ತೆ ಹಾಳಾಗಿ ಗುಂಡಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ಕೆಸರು ನೀರ ಸಿಂಚನವಾಗುತ್ತದೆ. ಇದನ್ನು ಅಭಿವೃದ್ಧಿಪಡಿಸಿದಲ್ಲಿ ಕುಂದಾಪುರಕ್ಕೆ ಒಂದು ಸುಂದರ ಸ್ವತ್ಛ ಉದ್ಯಾನವನ ಆಗುವುದರಲ್ಲಿ ಸಂಶಯ ಇಲ್ಲ. ನಗರಕ್ಕೆ ಬಂದವರು ವಿಶ್ರಾಂತಿಗೆ ಎಂದು ಇಲ್ಲಿಗೆ ಬಂದರೆ ಉದ್ಯಾನವನಕ್ಕೆ ಬಂದೆವೋ ಗುಜರಿ ಕೊಂಪೆಗೆ ಬಂದೆವೋ ಎಂಬ ಅನುಮಾನ ಕಾಡುವಂತಿದೆ. ಹಾಗಂತ ಇಡೀ ಉದ್ಯಾನವನ ಹಾಗಿದೆ ಎಂದಲ್ಲ. ಇಂತಹ ಗುಜರಿಗಳು ಉದ್ಯಾನವನದ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎನ್ನುವುದು ಸತ್ಯ.

Advertisement

ವೇದಿಕೆಗೆ ಬಣ್ಣ

ಗಾಂಧಿ ಮೈದಾನದ ಪಕ್ಕದಲ್ಲಿ ಇರುವ ಗಾಂಧಿ ಪಾರ್ಕ್‌ ಒಳಗೆ ಹೆಸರಿಗೆ ತಕ್ಕಂತೆ ಮಹಾತ್ಮಾ ಗಾಂಧಿ ವಿಗ್ರಹ ಇದೆ. ಕಾರಂಜಿ ಇದೆ. ಶಿಲಾಬಾಲಿಕೆ ಮಾದರಿಯಲ್ಲಿ ಸಿಮೆಂಟ್‌ ಶಿಲ್ಪ ಇದೆ. ಇದರ ಬಣ್ಣ ಮಾಸಿದ್ದು ಅದರ ಸಮೀಪದಲ್ಲಿರುವ ವೇದಿಕೆಗೆ ಇತ್ತೀಚೆಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಬಣ್ಣ ಬಳಿದಿದ್ದರು. ಪುರಸಭೆ ಇದರ ನಿರ್ವಹಣೆ ಕುರಿತು ಕಾಳಜಿ ವಹಿಸುವ ಅಗತ್ಯವಿದೆ. ಇದರಿಂದಾಗಿ ಪ್ರತಿನಿತ್ಯ ಇಲ್ಲಿಗೆ ಬರುವ ನೂರಾರು ಮಂದಿಗೆ ಅನುಕೂಲವಾಗಲಿದೆ.

ಹಾಳಾದ ಸಾಮಗ್ರಿ

ಮಕ್ಕಳ ಆಟದ ಕೆಲವು ಸಾಮಗ್ರಿಗಳು ಹಾಳಾಗಿವೆ. ತುಕ್ಕು ಹಿಡಿದಿವೆ. ಮಣ್ಣಿನಲ್ಲಿ ಹೂತು ಹೋಗಿವೆ. ಮಕ್ಕಳಿಗೆ ತಾಗಿ ಗಾಯವಾದರೆ ಮತ್ತೂಂದು ಅಪಾಯಕ್ಕೆ ಕಾರಣವಾಗಲಿದೆ. ಕತ್ತಲಲ್ಲಿ ಕೆಲವು ದೀಪಗಳು ಬೆಳಗುವುದೇ ಇಲ್ಲ. ಇದರಿಂದಾಗಿ ಸಂಜೆ ವೇಳೆಗೆ ವಾಕಿಂಗ್‌ಗಾಗಿ ಬರುವ ಹಿರಿಯ ನಾಗರಿಕರಿಗೆ ಆತಂಕ ಮೂಡುತ್ತದೆ. ಚಂದದ ಹೂಗಿಡಗಳು ಇದ್ದರೂ, ಹುಲ್ಲುಗಿಡಗಳು ಕಳೆಗಿಡಗಳಿಂದ ಕೆಲವೆಡೆ ತುಂಬಿ ಕಳಾಹೀನವಾಗಿವೆ. ಕೋವಿಡ್‌ ಸಂದರ್ಭದಲ್ಲಿ ಇಲ್ಲಿಗೆ ಸರಕಾರದ ಆದೇಶದಂತೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅದರ ಬಳಿಕ ರಸ್ತೆ ಬಳಿಯ ಗೇಟು ತೆರೆಯಲಿಲ್ಲ.

ಸರಿಪಡಿಸಲಿ: ಗಾಂಧಿ ಪಾರ್ಕ್‌ ಸರಿಪಡಿಸಿದರೆ ಎಲ್ಲರಿಗೂ ಪ್ರಯೋಜನಕ್ಕೆ ದೊರೆಯಲಿದೆ. ಪುರಸಭೆ ಈ ಕುರಿತು ಗಮನ ಹರಿಸಬೇಕಾದ ಅಗತ್ಯ ಇದೆ. –ಸಂತೋಷ್‌ ಸುವರ್ಣ, ಕುಂದಾಪುರ

ಪ್ರಸ್ತಾವನೆ ಸಲ್ಲಿಕೆ: ಗಾಂಧಿಪಾರ್ಕ್‌ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವಿಶೇಷ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ವಚ್ಛಗೊಳಿಸಿ, ಹಾಳಾದ ಆಟದ ಸಾಮಗ್ರಿಗಳನ್ನು ಬದಲಾಯಿಸಿ ನಿರ್ವಹಣೆ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. –ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next