Advertisement

ಬಡತನದ ದಿರಿಸು ಧರಿಸಿದ ಸಿರಿವಂತ

10:19 AM Oct 02, 2021 | Team Udayavani |
1888ರಲ್ಲಿ 18ನೆಯ ವಯಸ್ಸಿನಲ್ಲಿ ಬ್ಯಾರಿಸ್ಟರ್‌ ಪದವಿ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ಹೋದ ಸಂದರ್ಭ ಅವರು ಅಲ್ಲಿನ ಶೋಕಿ ನಾಗರಿಕನಾಗಲು, ಇಂಗ್ಲಿಷ್‌ ಜಂಟಲ್‌ಮ್ಯಾನ್ ಆಗಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಿದೇಶಕ್ಕೆ ಹೋಗುವ ಮೊದಲು ತಾಯಿಗೆ ಮಾತುಕೊಟ್ಟಂತೆ ಮಾಂಸ, ಮದ್ಯ, ಮಹಿಳೆಯರಿಂದ ದೂರವಿರುವುದು ಮತ್ತು ಆಂಗ್ಲ ಸಭ್ಯತೆ ಒಂದಕ್ಕೊಂದು ವಿರುದ್ಧವಾಗಿತ್ತು. ಮುಂಬಯಿಯಲ್ಲಿ ಹೊಲಿಸಿದ್ದ ಉಡುಪು ಆಂಗ್ಲ ಸಮಾಜಕ್ಕೆ ತಕ್ಕದ್ದಲ್ಲವೆಂದು ಬೇರೆ ಉಡುಪುಗಳನ್ನು ಹೊಲಿಸಿದರು. ದುಬಾರಿಯಾದ ಚಿಮ್ನಿ ಪಾಟ್‌ ಹ್ಯಾಟ್‌ (ಟೋಪಿ), ಈವ್ನಿಂಗ್‌ ಸೂಟು ಖರೀದಿಸಿದ್ದರು. ಉದಾರಿ ಯಾದ ಅಣ್ಣನಿಗೆ ಪತ್ರ ಬರೆದು ಜೇಬುಗಳಿಗೆ ಇಳಿಬಿಡುವ ಗಡಿಯಾರದ ಬಂಗಾರದ ಎರಡೆಳೆ ಸರಪಣಿಯನ್ನು ಕೊಂಡುಕೊಂಡರು...
Now pay only for what you want!
This is Premium Content
Click to unlock
Pay with

-ಮಟಪಾಡಿ ಕುಮಾರಸ್ವಾಮಿ

Advertisement

ಐಶಾರಾಮಿ ಉಡುಗೆಗಳನ್ನು ತೊಡುತ್ತಿದ್ದ ಗಾಂಧೀಜಿಯವರಿಗೆ ಕನಿಷ್ಠ ಉಡುಗೆಯನ್ನು ಸ್ವೀಕರಿಸುವ ಮನಃಸ್ಥಿತಿ ಹೇಗೆ ಉಂಟಾಯಿತು ಎನ್ನುವುದು ಜಗತ್ತಿನಲ್ಲಿ ಬಡತನ ಇರುವಷ್ಟು ಕಾಲ ಚಿಂತನೀಯ ವಿಷಯ. ಜನಸಾಮಾನ್ಯರು ಬಡತನದಿಂದ ಲಂಗೋಟಿ ಧರಿಸು ವಾಗ ತಾವು ಧರಿಸುತ್ತಿದ್ದ ಖಾದಿ ಬಟ್ಟೆ ಕೂಡ ದುಬಾರಿಯದು ಎಂದು ತಿಳಿದು ಗಾಂಧೀಜಿ ಕನಿಷ್ಠ ಉಡುಗೆಯ ನಿರ್ಧಾರಕ್ಕೆ ಬಂದಿದ್ದರು. ನಾವೆಲ್ಲ ಒಂದರ್ಥದಲ್ಲಿ ಒಂದಲ್ಲ ಒಂದು ಮಹಾನುಭಾವರ ಉತ್ತರಾ ಧಿಕಾರಿಗಳು. ಕನಿಷ್ಠ ಬಟ್ಟೆ (ಸರಳ ಉಡುಗೆ), ಕನಿಷ್ಠ ಆಭರಣಗಳನ್ನು ಉಪದೇಶಿಸಿದ್ದ ಗಾಂಧೀಜಿಯವರ ಉತ್ತರಾಧಿಕಾರಿಗಳಾದ ನಮ್ಮ ನಮ್ಮ ಮನೆಗಳ ಕಪಾಟುಗಳನ್ನು (ಮನಸ್ಸು) ಶೋಧಿಸಬೇಕಾಗಿದೆ. ನಿಸರ್ಗದಿಂದ ಕಡಿಮೆ ಪ್ರಯೋಜನ ಪಡೆದಾಗ ಮಾತ್ರ ಸಮಾನತೆ ಸಾಧ್ಯ ಎನ್ನುವುದನ್ನು ಗಾಂಧಿ ಜಯಂತಿಯಂದು (ಅ. 2) ಮನಗಾಣಬಹುದು.

ಖಾದಿಯ ಅರ್ಧ ಪಂಚೆ, ತುಂಡು ಶಲ್ಯದ ಗಾಂಧೀಜಿ ಅವರ ಜನಪ್ರಿಯ ಉಡುಪು ಜಾರಿಗೆ ಬಂದದ್ದು ವಿವಿಧ ರೀತಿಯ ಉಡುಗೆ ಪ್ರಯೋಗಗಳ ಬಳಿಕ. ಅವರು ಪ್ರಸಿದ್ಧಿಗೆ ಬಂದದ್ದೂ, ಈ ಉಡುಗೆಯನ್ನು ಆರಿಸಿಕೊಂಡದ್ದೂ 50 ವಯಸ್ಸಿನ ಬಳಿಕ.

ಒಟ್ಟು ಜೀವಿತಾವಧಿಯನ್ನು ಅವಲೋಕಿಸಿದರೆ ಆರಂಭದಿಂದ ಸುಮಾರು 50 ವರ್ಷಗಳವರೆಗೆ ಒಂದು ಘಟ್ಟ, ಅನಂತರದ 30 ವರ್ಷ ಒಂದು ಘಟ್ಟ ಎಂದು ಪರಿಗಣಿಸಬಹುದು.

1888ರಲ್ಲಿ 18ನೆಯ ವಯಸ್ಸಿನಲ್ಲಿ ಬ್ಯಾರಿಸ್ಟರ್‌ ಪದವಿ ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ಹೋದ ಸಂದರ್ಭ ಅವರು ಅಲ್ಲಿನ ಶೋಕಿ ನಾಗರಿಕನಾಗಲು, ಇಂಗ್ಲಿಷ್‌ ಜಂಟಲ್‌ಮ್ಯಾನ್ ಆಗಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಿದೇಶಕ್ಕೆ ಹೋಗುವ ಮೊದಲು ತಾಯಿಗೆ ಮಾತುಕೊಟ್ಟಂತೆ ಮಾಂಸ, ಮದ್ಯ, ಮಹಿಳೆಯರಿಂದ ದೂರವಿರುವುದು ಮತ್ತು ಆಂಗ್ಲ ಸಭ್ಯತೆ ಒಂದಕ್ಕೊಂದು ವಿರುದ್ಧವಾಗಿತ್ತು. ಮುಂಬಯಿಯಲ್ಲಿ ಹೊಲಿಸಿದ್ದ ಉಡುಪು ಆಂಗ್ಲ ಸಮಾಜಕ್ಕೆ ತಕ್ಕದ್ದಲ್ಲವೆಂದು ಬೇರೆ ಉಡುಪುಗಳನ್ನು ಹೊಲಿಸಿದರು. ದುಬಾರಿಯಾದ ಚಿಮ್ನಿ ಪಾಟ್‌ ಹ್ಯಾಟ್‌ (ಟೋಪಿ), ಈವ್ನಿಂಗ್‌ ಸೂಟು ಖರೀದಿಸಿದ್ದರು. ಉದಾರಿ ಯಾದ ಅಣ್ಣನಿಗೆ ಪತ್ರ ಬರೆದು ಜೇಬುಗಳಿಗೆ ಇಳಿಬಿಡುವ ಗಡಿಯಾರದ ಬಂಗಾರದ ಎರಡೆಳೆ ಸರಪಣಿಯನ್ನು ಕೊಂಡುಕೊಂಡರು. ಭಾರತದಲ್ಲಿ ಕಟ್ಟಿಂಗ್‌ ಮಾಡುವ ದಿನ ಮಾತ್ರ ಕನ್ನಡಿ ನೋಡುತ್ತಿದ್ದ ಗಾಂಧಿ ಇಂಗ್ಲೆಂಡ್‌ನ‌ಲ್ಲಿ ದೊಡ್ಡ ಕನ್ನಡಿ ಮುಂದೆ ಕಂಠಬಂಧ (ನೆಕ್‌ಟೈ) ಕಟ್ಟಿಕೊಳ್ಳುತ್ತ ತಲೆಗೂದಲು ಬಾಚಿಕೊಳ್ಳಲು ನಿತ್ಯ ಹತ್ತು ನಿಮಿಷ ತೆಗೆದುಕೊಳ್ಳುತ್ತಿದ್ದರು. ಕೇವಲ ಬಟ್ಟೆಯಿಂದ ನಾಗರಿಕನಾಗಲು ಸಾಧ್ಯವೆ? ನರ್ತನ ಬೇಕಲ್ಲ ಎಂದು ನರ್ತನ ಕಲಿಯಲು ಹೋಗಿ ಶಿಕ್ಷಕನ ಪಿಯಾನೋ ಅರಿಯದೆ ಕೈಬಿಟ್ಟರು. ಶಾಕಾಹಾರದ ವಿಷಯದಲ್ಲಿಯೂ ಬಹಳ ಮುಜುಗರವನ್ನು ಅನುಭವಿಸಿದ್ದರು.

Advertisement

ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ

“ನಾಗರಿಕನಾಗಬೇಕೆಂಬ ಹುಚ್ಚು ನನಗೆ ಸುಮಾರು ಮೂರು ತಿಂಗಳು ಇತ್ತು. ಆದರೆ ಠೀವಿಯ ಬಟ್ಟೆಗಳ ಹುಚ್ಚು ಅನೇಕ ವರ್ಷ ಇತ್ತು’ ಎನ್ನುವುದನ್ನು ಆತ್ಮಕಥನದಲ್ಲಿ ಉಲ್ಲೇಖೀಸಿದ್ದಾರೆ.

1891ರಿಂದ ಭಾರತದಲ್ಲಿ, 1893ರಲ್ಲಿ ದಕ್ಷಿಣ ಆಫ್ರಿಕಾ ದಲ್ಲಿ ವಕಾಲತ್ತು ನಡೆಸಿದರು. ನಟಾಲ್‌ ಇಂಡಿಯನ್‌ ಕಾಂಗ್ರೆಸ್‌ ಮೂಲಕ ಭಾರತೀಯರ ಸಂಘಟನೆಗಳನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಬಂದರು.

ಭಾರತಕ್ಕೆ ಬಂದದ್ದು, ವ್ಯಾಪಕ ಪ್ರವಾಸ ನಡೆಸಿದ್ದು ಗೋಪಾಲಕೃಷ್ಣ ಗೋಖಲೆಯವರ ಸಲಹೆ ಮೇರೆಗೆ. 1915ರಲ್ಲಿ ದಕ್ಷಿಣ ಆಫ್ರಿಕಾ ದಿಂದ ಭಾರತಕ್ಕೆ ಬಂದಾಗ ಗಾಂಧೀಜಿ ಮತ್ತು ಪತ್ನಿ ಕಸ್ತೂರ್ಬಾ ಗುಜರಾತಿನ ಉಡುಗೆ ಧರಿಸಿದ್ದರು. ಲಂಡನ್‌ನಲ್ಲಿ ಭಾರೀ ಬ್ಯಾರಿಸ್ಟರ್‌ ಪದವಿ ಗಳಿಸಿ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವೀ ವಕೀಲರಾದ “ಹೀರೋ’ ಗಾಂಧೀಜಿ ಸರಳ ಕಾಥೇವಾಡಿ ಶೈಲಿಯ ಮುಂಡಾಸು, ಜುಬ್ಬ, ಧೋತಿ ಧರಿಸಿದ್ದನ್ನು ಕಂಡು ಜನರು ಅಚ್ಚರಿಪಟ್ಟಿದ್ದರು.

ಅಸಹಕಾರ ಚಳವಳಿ ಆರಂಭಿಸುವಾಗ (1920) ಕಾತೆವಾಡಿ ಜುಬ್ಬ, ಮುಂಡಾಸನ್ನು ಬಿಟ್ಟು ತಾವೇ ವಿನ್ಯಾಸಗೊಳಿಸಿದ ಬಿಳಿಯ ಟೋಪಿ (ಗಾಂಧಿ ಟೋಪಿ) ಧರಿಸಿದರು. 1920ರ ಆ. 19ರಂದು ಮಂಗಳೂರಿಗೆ ಬಂದಾಗ ಟೋಪಿ, ಸಾಮಾನ್ಯ ಕೈಮಗ್ಗದ ಜುಬ್ಬ, ಧೋತಿ ಧರಿಸಿದ್ದರು ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ದಾಖಲೆಗಳು ಸಾರುತ್ತಿವೆ.

ತಮಿಳುನಾಡಿನ ಮಧುರೆಯಲ್ಲಿ 1921ರ ಸೆ. 22ರಂದು ಮಹತ್ವದ ನಿರ್ಣಯ ಕೈಗೊಂಡರು. ಆಗ ಗಾಂಧೀಜಿ ಸಾಮಾನ್ಯ ಜನರಿಗೆ ಖಾದಿ ಧರಿಸಲು ಉಪದೇಶಿಸುತ್ತಿದ್ದರು. ಜನರು ಖಾದಿ ಕೊಳ್ಳಲು ಆಗದಷ್ಟು ಬಡವರೆನ್ನುವುದು ತಿಳಿಯಿತು. ಬಡತನದಿಂದ ಕಡ್ಡಾಯ ಲಂಗೋಟಿ ಮಾತ್ರ ತೊಡಬೇಕಾಗಿರುವ ಜನಸಮೂಹದ ಎದುರು ತಾವೂ ಅದಕ್ಕೆ ಸಮನಾದ ದಿರಿಸು ಧರಿಸಲು ನಿರ್ಧರಿಸಿದರು. ಅಂದು ಬೆಳಗ್ಗೆದ್ದು ಹೊರಗೆ ಹೊರಟಾಗ ಅದುವರೆಗೆ ಧರಿಸುತ್ತಿದ್ದ ಟೋಪಿ, ಅಂಗಿ, ಧೋತಿ ಬಿಟ್ಟು ಒಂದು ಖಾದೀ ಬಟ್ಟೆಯ ತುಂಡನ್ನು ಕಚ್ಚೆಯಂತೆ ಧರಿಸಿದರು. ಅಂಗಿ ಕಿಸೆಯಲ್ಲಿ ಇಟ್ಟುಕೊಳ್ಳುವ ವಸ್ತುಗಳಿಗಾಗಿ ಖಾದಿ ಬಟ್ಟೆಯ ಸಣ್ಣ ಜೋಳಿಗೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡರು. ತುಂಡು ಬಟ್ಟೆಯನ್ನು ಹೆಗಲ ಮೇಲೆ ಹಾಕಿಕೊಂಡರು. ಈ ವಸ್ತ್ರ ಸಂಹಿತೆಯನ್ನು ಕೊನೆಯವರೆಗೂ ಪಾಲಿಸಿದರು.

ಸಮಾಜದಲ್ಲಿ ಎದ್ದ ಸಂದೇಹಗಳಿಗೆ ಉತ್ತರವಾಗಿ ಅನುಯಾಯಿಗಳಿಗೆ “ನನ್ನನ್ನು ಅನುಸರಿಸಿ ವಸ್ತ್ರಗಳನ್ನು ತ್ಯಾಗ ಮಾಡಬಾರದು. ಬದಲಾಗಿ ವಿದೇಶಿ ವಸ್ತ್ರಗಳ ಬಹಿಷ್ಕಾರದ ಮಹತ್ವ ಮತ್ತು ಸ್ವದೇಶೀ ಅರ್ಥವನ್ನು ಮಾಡಿಕೊಳ್ಳಿ’ ಎಂದು ಕರೆ ನೀಡಿದ್ದರು. ಚಳವಳಿಯಲ್ಲಿ ವಿದೇಶೀ ವಸ್ತ್ರಗಳ ಬಹಿಷ್ಕಾರ ಮತ್ತು ಖಾದಿ (ಸ್ವದೇಶಿ) ವಸ್ತ್ರದ ಬಳಕೆ ಪ್ರಧಾನ ವಿಷಯ. ಖಾದಿಯನ್ನು ಕೇವಲ ಸ್ವದೇಶೀ ಮಂತ್ರವಾಗಿ ಕಾಣದೆ ಸ್ವಾವಲಂಬನೆ, ಸರಳತೆ ಮತ್ತು ಆತ್ಮಗೌರವದ (ಸ್ವಾಭಿಮಾನ) ಸಂಕೇತವಾಗಿ ಕಂಡಿದ್ದರು.

ದೇಶ ಸುತ್ತಿ…
ಚಳವಳಿಗೆ ಮುನ್ನ ಗಾಂಧೀಜಿ ಒಂದು ವರ್ಷ ರೈಲಿನ ಮೂರನೆಯ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ದೇಶ ಸುತ್ತಿ ಅನುಭವ ಪಡೆದರು. ಇದು ದಿರಿಸು ಬದಲಾವಣೆಗೆ ಕಾರಣವಾಯಿತು. ದೇಶ ಸುತ್ತಿದವರಿಗೆಲ್ಲ ಇಂತಹ ಮಾನಸಿಕ ಬದಲಾವಣೆಯಾದರೆ ಎಂತಹ ಸಮಾಜ ನಿರ್ಮಾಣಗೊಳ್ಳಬಹುದು?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.