Advertisement

ಅವಳಿ ಜಿಲ್ಲೆಯಲ್ಲಿ ಗಾಂಧೀಜಿ, ಶಾಸ್ತ್ರಿ ಸ್ಮರಣೆ

03:57 PM Oct 03, 2022 | Team Udayavani |

ಚಿಕ್ಕಬಳ್ಳಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದ ಮೂಲಕ ಅವಿರತ ಹೋರಾಡಿ ಇಡೀ ಜೀವನವನ್ನೇ ಮುಡಿಪಾಗಿಟ್ಟು ಬದುಕು ಸವೆಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಬಣ್ಣಿಸಿದರು.

Advertisement

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ನಡೆದ ಮಹಾತ್ಮ ಗಾಂಧೀಜಿ ಮತ್ತು ಭಾರತರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ದೇಶದ ಸ್ವಾತಂತ್ರ್ಯ ಮತ್ತು ಸಾಮಾಜಿಕ ಬದಲಾವಣೆಗಾಗಿ ಅತ್ಯಂತ ಪ್ರಾಮಾಣಿಕವಾಗಿ ದುಡಿದ ಮಹಾನ್‌ ಚೇತನ ಮಹಾತ್ಮ ಗಾಂಧೀಜಿ. ಸರಳತೆ, ಸಜ್ಜನಿಕೆ, ಸತ್ಯ ಮತ್ತು ಪ್ರಾಮಾಣಿಕತೆ ಸಾಕಾರಮೂರ್ತಿಯಾಗಿದ್ದ ಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟ ಮಾಡಿದ್ದಲ್ಲದೇ ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡಿದರು. ಇತರೆ ಹೋರಾಟಗಾರರು ಮತ್ತು ಸಹವರ್ತಿಗಳೊಂದಿಗೆ ಸಣ್ಣಪುಟ್ಟ ಅಭಿಪ್ರಾಯ ಭೇದಗಳಿದ್ದರೂ ಅವುಗಳನ್ನೂ ಗೌರವಿಸಿ ವಿಚಾರಗಳಿಂದ ಸಮಸ್ಯೆ, ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತಿದ್ದ ನಿಷ್ಕಳಂಕ ವ್ಯಕ್ತಿತ್ವ ಗಾಂಧೀಜಿಯವರದ್ದು ಎಂದರು.

ದೇಶದ ಪ್ರಧಾನಿ ಹುದ್ದೆಯಂತಹ ಅತ್ಯಂತ ಉನ್ನತ ಹುದ್ದೆಯನ್ನು ಹೊಂದಿದ್ದರೂ ಸದಾ ದೇಶಕ್ಕಾಗಿ ಮಿಡಿದ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರು ದೇಶದ ರೈತ ಮತ್ತು ಸೈನಿಕರ ಪರವಾಗಿ ಅಪಾರ ತುಡಿತ ಹೊಂದಿ ಅವರ ಘನತೆಯನ್ನು ಹೆಚ್ಚಿಸಲು ಮತ್ತು ಎತ್ತಿಹಿಡಿಯಲು ಹಗಲಿ ರುಳು ಶ್ರಮಿಸಿದರು. ರೈಲ್ವೆ ಸಚಿವರಾಗಿದ್ದ ವೇಳೆ ರೈಲು ಅಪಘಾತ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿ ಜವಾಬ್ದಾರಿಯುತ ವಾಗಿ ನಡೆದುಕೊಂಡ ಮೇರು ವ್ಯಕ್ತಿತ್ವ ಅವರದು ಎಂದರು.

ಗಾಂಧೀಜಿಯವರಿಗೆ ಪ್ರಿಯವಾದ ಮತ್ತು ಗಾಂಧೀಜಿಯವರ ವ್ಯಕ್ತಿತ್ವ, ಬದುಕನ್ನು ಬಿಂಬಿಸುವ ಗೀತಗಾಯನ ಕಾರ್ಯಕ್ರಮವನ್ನು ಮಹಾಲಿಂಗಯ್ಯ ಮಠದ್‌ ಮತ್ತು ತಂಡ ನಡೆಸಿಕೊಟ್ಟಿತು. ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರಮದಾನದ ಮೂಲಕ ಸ್ವತ್ಛತಾ ಅಭಿಯಾನ ನಡೆಯಿತು. ಗೀತಾ ಸತ್ಸಂಗ ಸಮಿತಿಯ ಸದಸ್ಯರಾದ ನಳಿನಾಕ್ಷಿ, ನಿರ್ಮಲರಾಜ್‌, ಅಖಿಲ, ಜಮಾತ್‌ ಅಹ್ಲೆ ಇಸ್ಲಾಂನ ಮನ್ಸೂರ್‌ ಅಹ್ಮದ್‌, ಸಿಎಸ್‌ಐ ಚರ್ಚೆ ಸ್ಟೀಮನ್‌ ರಾಬಿನ್‌ ಹಾಗೂ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸರ್ವಧರ್ಮಗಳ ಪ್ರಾರ್ಥನೆ ನಡೆಸಿಕೊಟ್ಟರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ್‌, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್‌, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next