Advertisement

ನಾಲ್ಕು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

01:15 PM Sep 25, 2022 | Team Udayavani |

ದೇವನಹಳ್ಳಿ: ಗ್ರಾಪಂಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ರಾಪಂಗೆ ಪ್ರತಿ ತಾಲೂಕಿಗೆ ಒಂದರಂತೆ ರಾಜ್ಯ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಗ್ರಾಪಂ ಈ ಬಾರಿ ಪ್ರಶಸ್ತಿಗೆ ಆಯ್ಕೆಗೊಂಡಿವೆ.

Advertisement

ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಪಂ, ಹೊಸಕೋಟೆ ತಾಲೂಕಿನ ಮುತ್ಸಂದ್ರ, ನೆಲಮಂಗಲ ತಾಲೂಕಿನ ಕಳಲುಘಟ್ಟ, ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿಗೆ 2020-21ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ. ಜಿಪಂ ಸಿಇಒ ನೇತೃತ್ವದಲ್ಲಿ ಆಯ್ಕೆ ಸಮಿತಿಯ ಮೂಲಕ ಶಿಫಾರಸ್ಸು ಮಾಡಿ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ರಾಜ್ಯ ಪುರಸ್ಕಾರಕ್ಕೆ ಆಯ್ಕೆ: ಪ್ರಶಸ್ತಿಗೆ ಆಯ್ಕೆಯಾದ ಪಂಚಾಯಿತಿಗೆ ತಲಾ 5 ಲಕ್ಷ ರೂ. ನಗದು ನೀಡಿ ಗೌರವಿಸಲಾಗುವುದು. ಗ್ರಾಪಂಗಳು ತಮ್ಮ ಶಾಸನ ಬದ್ಧ ಕಾರ್ಯಗಳ ಉತ್ತಮ ನಿರ್ವಹಣೆ, ಯೋಜನೆಗಳ ಅನುಷ್ಠಾನ, ದಾಖಲಾತಿ ನಿರ್ವಹಣೆ, ತೆರಿಗೆ ವಸೂಲಾತಿ, ಜನಸ್ನೇಹಿ ಪಂಚಾಯಿತಿ ಆಡಳಿತ ವ್ಯವಸ್ಥೆ ಸಭೆಗಳು, ಸೇವೆಗಳ ಒದಗಿಸುವಿಕೆ, ಮೊದಲಾದ 150 ಅಂಕಗಳ ಪ್ರಶ್ನಾವಳಿಗೆ ತಾಲೂಕುವಾರು ದಾಖಲಾತಿ ಪರಿಶೀಲಿಸಿ ಅದರ ಆಧಾರದಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸುವ ತಾಲೂಕಿನ ಗ್ರಾಪಂಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಪಂಚಾಯಿತಿ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಗ್ರಾಪಂಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ: ಗ್ರಾಪಂಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಪಂ ಅನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ಬರಲಾಗುತ್ತಿದ್ದು, ಕೋವಿಡ್‌ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂಗಳನ್ನು ಆಯ್ಕೆ ಮಾಡಿರಲಿಲ್ಲ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿರುವ ಪ್ರತಿ ಗ್ರಾಪಂಗೆ ರಾಜ್ಯ ಸರ್ಕಾರ 2021-22ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಅಗ್ರ ಪ್ರಶಸ್ತಿ ಲೆಕ್ಕ ಶೀರ್ಷಿಕೆಯಡಿ ಒದಗಿಸಲಾದ ಪ್ರಸ್ತುತ ಎಸ್‌ ಬಿಐ ಖಾತೆಯಲ್ಲಿ ಇರಿಸಲಾಗಿರುವ 8.80ಕೋಟಿ ರೂ.ನ ಅನುದಾನದಲ್ಲಿ ಪ್ರತಿ ಗ್ರಾಪಂಗೆ ತಲಾ 5 ಲಕ್ಷ ರೂ. ಪ್ರಶಸ್ತಿ ಹಣ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

ಮೂಲಸೌಕರ್ಯಕ್ಕೆ ಆದ್ಯತೆ: ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಬಿದಲೂರು ಗ್ರಾಪಂಗೆ ಗಾಂಧಿ ಪುರಸ್ಕಾರ ಲಭಿಸಿದೆ. ಬಿದಲೂರು ಗ್ರಾಪಂ ವ್ಯಾಪ್ತಿಯು 7 ಗ್ರಾಮಗಳಿಂದ ಕೂಡಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ನರೇಗಾ ಯೋಜನೆಯಡಿ ಕಾಮಗಾರಿಗಳು ರಸ್ತೆ, ಕುಡಿಯುವ ನೀರು ಹಾಗೂ ಇನ್ನಿತರೆ ಮೂಲಸೌಕರ್ಯ ನೀಡಿರುವ ಕಾರಣ ಬಿದಲೂರು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.

Advertisement

ಹೆಗ್ಗಡಿಹಳ್ಳಿ: ಶೇ.100ರಷ್ಟು ತೆರಿಗೆ ಸಂಗ್ರಹ: ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಾಲೂಕಿಗೆ ಒಂದರಂತೆ 2020-21ನೇ ಸಾಲಿನಲ್ಲಿ 4 ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನಿಂದ ಹೆಗ್ಗಡಿಹಳ್ಳಿ ಗ್ರಾಪಂ ಆಯ್ಕೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತೆರಿಗೆ ಸಂಗ್ರಹದಲ್ಲಿ ಶೇ.100ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿರುವ ಹೆಗ್ಗಡಿಹಳ್ಳಿ ಗ್ರಾಪಂ 14 ಗ್ರಾಮ ಒಳಗೊಂಡಿದೆ. ವಿವಿಧ ಯೋಜನೆ ಅನುಷ್ಠಾನಗೊಳಿಸಿ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗ್ರಾಪಂಗೆ ನೀಡುವ ಗ್ರಾಂಧಿ ಗ್ರಾಮ ಪುರಸ್ಕಾರಕ್ಕೆ 2020-21ನೇ ಸಾಲಿನಲ್ಲಿ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಪಂ ಭಾಜನವಾಗಿದೆ.

ಗ್ರಂಥಾಲಯ ಸೇವೆ: 7 ಸಾವಿರ ಜನಸಂಖ್ಯೆ ಹೊಂದಿರುವ ಪಂಚಾಯಿತಿ ಇದಾಗಿದ್ದು, 14 ಸದಸ್ಯರನ್ನು ಹೊಂದಿದೆ. ಜಮಾಬಂಧಿ, ಗ್ರಾಮ ಸಭೆಗಳು, ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸಲಾಗಿದ್ದು, ಸರ್ಕಾರದ ಅನುದಾನ ಬಳಸಿ, ಗ್ರಾಮಗಳಿಗೆ ಅಗತ್ಯ ಸೌಕರ್ಯ, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ, ಸಿಸಿ ರಸ್ತೆ, ಗ್ರಂಥಾಲಯ ಸೇವೆ ಕಲ್ಪಿಸಲಾಗಿದೆ. ಹೀಗೆ ಹಲವಾರು ಯೋಜನೆ ಬಳಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಗ್ರಾಪಂ ಅಧ್ಯಕ್ಷೆ ಪಲ್ಲವಿ, ಉಪಾಧ್ಯಕ್ಷೆ ಕವಿತಾ. ಎನ್‌ ಹಾಗೂ ಎಲ್ಲಾ ಸದಸ್ಯರ ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಪಿಡಿಒ ವಿ. ಸೌಮ್ಯಾ ತಿಳಿಸಿದ್ದಾರೆ.

ಬಿದಲೂರು ಗ್ರಾಪಂಗೆ ಹೆಚ್ಚಿನ ಅಭಿವೃದ್ಧಿ ಕಾರ್ಯ ಆಗುತ್ತಿರುವುದರಿಂದ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿ ಸು ತ್ತಿರುವುದು ಖುಷಿ ತಂದಿದೆ. ಗ್ರಾಮದ ಸಮಗ್ರ ಅಭಿ ವೃದ್ಧಿಗೆ ಶ್ರಮಿಸುತ್ತಿದ್ದೇವೆ. ಗ್ರಾಪಂ ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಪಿಡಿಒ, ಕಾರ್ಯದರ್ಶಿ ಹಾಗೂ ಗ್ರಾಪಂ ಸಿಬ್ಬಂದಿ ಸಹಕಾರದಿಂದ ಈ ಪ್ರಶಸ್ತಿ ಬರಲು ಸಹಕಾರಿ ಆಗಿದೆ. -ಹರ್ಷಿತಾ, ಬಿದಲೂರು ಗ್ರಾಪಂ ಅಧ್ಯಕ್ಷೆ

ಗ್ರಾಪಂಗೆ ಪ್ರಶಸ್ತಿ ಬಂದಿರುವುದು ಸಂತಸವಾಗಿದೆ. ಗಾಂಧಿ ಪುರಸ್ಕಾರಕ್ಕೆ 150 ಪ್ರಶ್ನೆ ಕೇಳಿದ್ದರು. ಆನ್‌ಲೈನ್‌ನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದರಿಂದ ಗ್ರಾಪಂ ಕೀರ್ತಿ ಹೆಚ್ಚಿದೆ. – ಸಿದ್ದರಾಜು, ಗ್ರಾಪಂ ಪಿಡಿಒ, ಬಿದಲೂರು

 

– ಎಸ್‌. ಮಹೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next