Advertisement

ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ: ಸಿಎಂ ಶ್ಲಾಘನೆ

08:52 PM Mar 24, 2023 | Team Udayavani |

ಬೆಂಗಳೂರು: ಜನರಿಗೆ ಅತೀ ಹತ್ತಿರವಿರುವ ಇಲಾಖೆಯೆಂದರೆ ಗ್ರಾಮ ಪಂಚಾಯಿತಿ, ಆದ್ದರಿಂದ ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯೋಜಿಸಿದ್ದ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಹಾಗೂ ಪಂಚತಂತ್ರ 2.0, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ, ತೆರಿಗೆ ಸಂಗ್ರಹದ ಪಿಓಎಸ್‌ ಉಪಕರಣಗಳ ಲೋಕಾರ್ಪಣೆ ಮತ್ತು ಜಲಶಕ್ತಿ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ರಾಜ್ಯವು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ನೀಡುವ ಅನುದಾನವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚುವರಿ ಅನುದಾನಕ್ಕೆ ರಾಜ್ಯದ ಅನೇಕ ಪಂಚಾಯಿತಿಗಳು ಪಾತ್ರವಾಗಿವೆ ಎಂದು ಅವರು ಶ್ಲಾಘಿಸಿದರು.

ನರೇಗಾ ಯೋಜನೆಯನ್ನು ಪಂಚಾಯಿತಿಗಳಲ್ಲಿ ಆಸ್ತಿ ಸೃಷ್ಟಿಸಲು ಬಳಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಸಭೆಗೆ ವಿಧಾನ ಸಭೆಯಷ್ಟು ಮಾನ್ಯತೆಯಿದೆ. ಹೈಕೋರ್ಟ್‌, ವಿಧಾನ ಸೌಧದಂತೆ ಪಂಚಾಯಿತಿಗಳಲ್ಲಿಯೂ ರಾಷ್ಟ್ರ ಧ್ವಜ ಹಾರಾಡುತ್ತದೆ. ತನ್ಮೂಲಕ ಗ್ರಾಮ ಪಂಚಾಯಿತಿ ಎಂಬುದು ಸರ್ಕಾರವಾಗಿ ಕೆಲಸ ಮಾಡುತ್ತದೆ, ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರ ಮಾಸಿಕ ಗೌರವ ವೇತನವನ್ನು ನಮ್ಮ ಸರ್ಕಾರ ಎರಡು ಪಟ್ಟು ಹೆಚ್ಚಿಸಿದೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಅರುಣ್‌ ಮಾತನಾಡಿ, ಒಂದು ಬಾರಿ ಪಂಚಾಯತ್‌ ಚುನಾವಣೆ ಗೆದ್ದವರು ಎರಡನೇ ಬಾರಿ ಗೆಲ್ಲುವುದು ಕಡಿಮೆ. ಅತಿ ಹೆಚ್ಚು ಆಡಳಿತ ವಿರೋಧಿ ಅಲೆಯನ್ನು ಪಂಚಾಯಿತಿ ಸದಸ್ಯರು ಎದುರಿಸುತ್ತಿರುತ್ತಾರೆ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ್‌, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ್‌ ಹೆಗಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್‌. ಕೆ. ಅತೀಕ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ಪಂ. ರಾಜ್‌) ಉಮಾ ಮಹದೇವನ್‌, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತೆ ಶಿಲ್ಪಾ ನಾಗ್‌ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನರೇಗಾ ಪ್ರಶಸ್ತಿ ಗೆದ್ದ ಪಂಚಾಯತ್‌ಗಳು:
ಅತ್ಯುತ್ತಮ ಜಿಲ್ಲಾ ಪಂಚಾಯತ್‌ ಪುರಸ್ಕಾರದ ಮೊದಲ ಬಹುಮಾನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ (15 ಲಕ್ಷ ರೂ.), ದ್ವಿತೀಯ ಬಹುಮಾನ ಶಿವಮೊಗ್ಗ ಜಿ.ಪಂ. (12.50 ಲಕ್ಷ ರೂ), ತೃತೀಯ ಬಹುಮಾನ ಬಳ್ಳಾರಿ, ಬಾಗಲಕೋಟೆ ಜಿ.ಪಂ. (ತಲಾ 10 ಲಕ್ಷ ರೂ.) ಗೆದ್ದುಕೊಂಡಿವೆ.

ತಾಲೂಕು ಪಂಚಾಯಿತಿ ವಿಭಾಗದಲ್ಲಿ ಮೊದಲ ಬಹುಮಾನವನ್ನು ಗುಳೇದಗುಡ್ಡ (10 ಲಕ್ಷ ರೂ.), ಎರಡನೇ ಬಹುಮಾನ ದೊಡ್ಡಬಳ್ಳಾಪುರ (7.50 ಲಕ್ಷ ರೂ.), ಮೂರನೇ ಬಹುಮಾನ ಭದ್ರಾವತಿ ಗೆದ್ದುಕೊಂಡಿದೆ.

ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಮುಧೋಳದ ಹಲಗಲಿ, ಹಾಸನದ ಮಾಡಬಾಳ, ಕುಂದಾಪುರದ ಹಕ್ಲಾಡಿ, ಕೊಡಗಿನ ದೇವರಪುರ, ದೊಡ್ಡಬಳ್ಳಾಪುರದ ತೂಬಗೆರೆ ಪಂಚಾಯಿತಿಗಳು ಅತ್ಯುತ್ತಮ ವಿಭಾಗದಲ್ಲಿ ಆಯ್ಕೆಯಾಗಿದ್ದು ತಲಾ 5 ಲಕ್ಷ ರೂ. ಬಹುಮಾನಕ್ಕೆ ಪಾತ್ರವಾಗಿವೆ. ಇನ್ನು ನರೇಗಾದ ವಿವಿಧ ವಿಭಾಗದಲ್ಲಿ 79 ಪಂಚಾಯಿತಿಗಳು ಪ್ರಶಸ್ತಿ ಗೆದ್ದುಕೊಂಡಿವೆ. ಕಳೆದ ಮೂರು ವರ್ಷಗಳ ಗಾಂಧಿ ಗ್ರಾಮ ಪುರಸ್ಕಾರಕ್ಕೆ 500ಕ್ಕೂ ಹೆಚ್ಚು ಪಂಚಾಯಿತಿಗಳು ಪಾತ್ರವಾಗಿವೆ.

ಗಾಂಧಿ ಗ್ರಾಮ ಪುರಸ್ಕಾರ ಯಾರಿಗೆ?
ಪ್ರತಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಒಂದು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಜೀವನದ ಗುಣಮಟ್ಟ ಸುಧಾರಣೆಗೆ ಕೈಗೊಂಡಿರುವ ಕ್ರಮ, ಹಣಕಾಸಿನ ನಿರ್ವಹಣೆ, ಮೂಲಭೂತ ಸೌಕರ್ಯ, ಉತ್ತಮ ಆಡಳಿತ, ಪಂಚಾಯತ್‌ ನೀಡುವ ಸೇವೆ, ವಿನೂತನ ಪ್ರಯೋಗಗಳು ಮತ್ತು ಕೋವಿಡ್‌ ನಿರ್ವಹಣೆಯನ್ನು ಆಧರಿಸಿ ಪ್ರಶಸ್ತಿ ನೀಡಲಾಗಿದೆ.

ನರೇಗಾ ಪ್ರಶಸ್ತಿ ಯಾರಿಗೆ?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ 100 ದಿನ ಉದ್ಯೋಗ ನೀಡುವುದರ ಜತೆಗೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ, ಜನರ ಜೀವನೋಪಾಯ ಬಲಪಡಿಸುವ ಆಸ್ತಿಗಳನ್ನು ಸೃಷ್ಟಿಸಿದ ಪಂಚಾಯತ್‌ಗಳಿಗೆ ನೀಡಲಾಗಿದೆ.

ಆನ್‌ಲೈನ್‌ನಲ್ಲೇ ಪಂಚಾಯಿತಿ ತೆರಿಗೆ ಪಾವತಿಸಿ:
ಮುಖ್ಯಮಂತ್ರಿಗಳು ಬಾಪೂಜಿ ಸೇವಾ ಕೇಂದ್ರ ಪೋರ್ಟಲ್‌ ಮತ್ತು ಬಾಪೂಜಿ ಸೇವಾ ಕೇಂದ್ರ ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಿದ್ದು ಸಾರ್ವಜನಿಕರು ಗ್ರಾಪಂಗಳಿಗೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಆಸ್ತಿ ತೆರಿಗೆಯನ್ನು ಪೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದ ಆ್ಯಪ್‌ಗ್ಳ ಮೂಲಕ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಮತ್ತು ಮಹಾತ್ಮಾ ಗಾಂಧಿ ನರೇಗಾ ಪ್ರಶಸ್ತಿ ಪ್ರದಾನ ಮಾಡಿದರು.

ಪಂಚಾಯಿತಿಗಳಲ್ಲಿ ಈಗಾಗಲೇ ಬಳಸಲಾಗುತ್ತಿರುವ ಪಂಚತಂತ್ರ ತಂತ್ರಾಂಶವನ್ನು ಉನ್ನತೀಕರಿಸಿ ಪಂಚತಂತ್ರ 2.0 ಬಿಡುಗಡೆ ಮಾಡಲಾಗಿದ್ದು ಪಂಚಾಯಿತಿಗಳ ದಿನನಿತ್ಯದ ಕಾರ್ಯಚಟುವಟಿಕೆ, ಸೇವೆಗಳ ವಿಲೇವಾರಿ, ಯೋಜನೆಗಳ ಅನುಷ್ಠಾನ ಮತ್ತು ತೀರ್ಮಾನವನ್ನು ಕೈಗೊಳ್ಳಲು ಬಳಸಲಾಗುತ್ತದೆ. ಇದರ ಅನುಷ್ಠಾನದಿಂದ ಪಾರದರ್ಶಕತೆ ಹೆಚ್ಚಾಗುತ್ತದೆ. ಜನ ವಸತಿ ಸಭೆ, ವಾರ್ಡ್‌ ಸಭೆ, ಗ್ರಾಮ ಸಭೆ, ಸ್ಥಾಯಿ ಸಮಿತಿ ಸಭೆ, ಸಾಮಾನ್ಯ ಸಭೆ, ಸಭೆಗಳ ಆಯೋಜಿಸುವಿಕೆ, ಹಾಜರಾತಿ, ಸಭಾ ನಡಾವಳಿಗಳಿಗೆ ಇದನ್ನು ಬಳಸಬಹುದಾಗಿದ್ದು ಇಂತಹ ಸವಲತ್ತು ಒದಗಿಸುವ ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ.

ಈ ಮೊದಲು ಪಂಚಾಯಿತಿಗೆ ನೀಡುತ್ತಿದ್ದ ಅನುದಾನ ಅಲ್ಲಿನ ವಿದ್ಯುತ್‌ ಮತ್ತು ನೀರಿನ ಬಿಲ್‌ ಪಾವತಿಗೆ ಮಾತ್ರ ಸಾಕಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಪಂಚಾಯಿತಿಗಳಗೆ ನೀಡುತ್ತಿದ್ದ ಅನುದಾನವನ್ನು ಎರಡು ಪಟ್ಟು ಹೆಚ್ಚಿಸಿದೆ. ಆಡಳಿತ ವಿಕೇಂದ್ರಿಕರಣದ ಜತೆಗೆ ಆರ್ಥಿಕ ವಿಕೇಂದ್ರಿಕರಣವು ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next