Advertisement

ಗಂಡಾಂತರ ಗುರೂಜಿ ಶಿಷ್ಯರ ಸೆರೆ

06:43 AM Apr 27, 2019 | Lakshmi GovindaRaju |

ಬೆಂಗಳೂರು: “ನಿಮ್ಮ ಕುಟುಂಬಕ್ಕೆ ಗಂಡಾಂತರವಿದೆ ನೀವು ಧರಿಸಿರುವ ಆಭರಣಗಳಿಗೆ ವಿಶೇಷ ಪೂಜೆ’ ಮಾಡಬೇಕು ಎಂದು ನಂಬಿಸಿ ನಗರದ ಹಲವರ ಬಳಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ ನಕಲಿ ಗುರೂಜಿ ಗ್ಯಾಂಗ್‌ ಸದಸ್ಯರನ್ನು ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರಪ್ರದೇಶ ಮೂಲದ ಚೇತನ್‌ ಚಂದ್ರಕಾಂತ್‌ ಢಾಗೆ ಹಾಗೂ ರಾಜೇಶ್‌ ಗಣಪತ್‌ ರಾವ್‌ ಥಾಂಬೆ ಬಂಧಿತರು. ಆರೋಪಿಗಳಿಂದ 25 ಲಕ್ಷ ಕ್ಕೂ ಹೆಚ್ಚು ರೂ. ಮೌಲ್ಯದ 925 ಗ್ರಾಂ. ತೂಕ ಚಿನ್ನಾಭರಣಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಗ್ಯಾಂಗ್‌ನ ಸೂತ್ರಧಾರ, ಪುಣೆ ಮೂಲದ ಅವಿನಾಶ್‌ ಸುರೇಶ್‌ ಕಾನಿಲ್ಕರ್‌ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅವಿನಾಶ್‌ ಸುರೇಶ್‌ ಕಾನಿಲ್ಕರ್‌ ಅಲಿಯಾಸ್‌ ಗುರೂಜಿ, ತನ್ನದೇ ತಂಡ ಕಟ್ಟಿಕೊಂಡು ವಿಶೇಷ ಪೂಜೆ ನೆಪದಲ್ಲಿ ಹಲವರಿಗೆ ವಂಚಿಸಿದ್ದಾನೆ. ಇಬ್ಬರು ಆರೋಪಿಗಳ ಬಂಧನದಿಂದ ಗಿರಿನಗರ, ಚೆನ್ನಮ್ಮನ ಅಚ್ಚುಕಟ್ಟು, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಲಾಡ್ಜ್ಗಳಲ್ಲಿ ತಂಗುತ್ತಿದ್ದ ಮೂವರು ಆರೋಪಿಗಳು, ತಾವು ಸ್ವಾಮೀಜಿ ಕಡೆಯವರು ಎಂದು ಕೆಲವರನ್ನು ಪರಿಚಯ ಮಾಡಿಕೊಂಡು ಅವರ ಕುಟುಂಬದ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ನಂತರ, ನಿಮ್ಮ ಮಗನಿಗೆ ಆರೋಗ್ಯ ಸರಿಯಿಲ್ಲ. ಮುಂದೆ ಗಂಡಾಂತರವಿದೆ. ನಿಮ್ಮ ಮನೆಯ ಸದಸ್ಯರೊಬ್ಬರು ಸದ್ಯದಲ್ಲಿಯೇ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ ಎಂಬಿತ್ಯಾದಿ ಸುಳ್ಳುಗಳನ್ನು ಹೇಳಿ ಭಯ ಹುಟ್ಟಿಸುತ್ತಿದ್ದರು.

ಬಳಿಕ ಈ ಗಂಡಾಂತರಗಳಿಂದ ಪಾರಾಗಬೇಕಾದರೆ ನೀವು ಧರಿಸಿರುವ, ನಿಮ್ಮ ಮನೆಯಲ್ಲಿರುವ ಚಿನ್ನಾಭರಣಗಳಿಗೆ ವಿಶೇಷ ಪೂಜೆ ನೆರವೇರಿಸಬೇಕು. ಯಶವಂತಪುರದಲ್ಲಿ ನಮ್ಮ ಮಠವಿದ್ದು, ಅಲ್ಲಿ ವಿಶೇಷ ಪೂಜೆ ಮಾಡಿಕೊಂಡು ವಾಪಾಸ್‌ ತಂದುಕೊಡುತ್ತೇವೆ ಎಂದು ನಂಬಿಸಿ ಆರೋಪಿಗಳು ಚಿನ್ನಾಭರಣಗಳನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದರು.

Advertisement

ನಿವೃತ್ತ ಎಎಸ್‌ಐ ಕುಟುಂಬಕ್ಕೆ ವಂಚನೆ: ನಕಲಿ ಗುರೂಜಿ ತಂಡ, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ನಿವೃತ್ತ ಎಎಸ್‌ಐ ಕುಟುಂಬಕ್ಕೆ “ಗಂಡಾಂತರ’ ಕಥೆ ಹೇಳಿ 290 ಗ್ರಾಂ. ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ಪಡೆದು ವಂಚಿಸಿದ್ದರು. ಈ ವಿಚಾರ ನಿವೃತ್ತ ಎಎಸ್‌ಐಗೆ ಹಲವು ದಿನಗಳವರೆಗೆ ಗೊತ್ತಾಗಿರಲಿಲ್ಲ. ತಡವಾಗಿ ಈ ವಿಚಾರ ಗೊತ್ತಾಗಿದ್ದು, ಕೂಡಲೇ ಅವರು ತಮ್ಮ ಮಗನ ಮೂಲಕ ಫೆಬ್ರವರಿಯಲ್ಲಿ ದೂರು ದಾಖಲಿಸಿದ್ದರು ಎಂದು ಅಧಿಕಾರಿ ಹೇಳಿದರು.

ಗುರೂಜಿ ಅಲಿಯಾಸ್‌ ಮಹಾರಾಜ್‌ ಎಲ್ಲಿ?: ಬಂಧನವಾಗಿರುವ ಆರೋಪಿಗಳಾದ ಚಂದ್ರಕಾಂತ್‌ ಹಾಗೂ ರಾಜೇಶ್‌, ಗುರೂಜಿ ಎನ್ನಲಾಗಿರುವ ಅವಿನಾಶ್‌ಗೆ ಸಹಚರರಾಗಿ ಕೆಲಸ ಮಾಡುತ್ತಿದ್ದರು. ವಂಚನೆಯಿಂದ ಪಡೆದುಕೊಂಡಿದ್ದ ಆಭರಣಗಳನ್ನು ಫೈನಾನ್ಸ್‌ ಕಂಪನಿಯೊಂದರಲ್ಲಿ ಅಡವಿಟ್ಟು ಹಣ ಪಡೆದುಕೊಳ್ಳುತ್ತಿದ್ದ ಆರೋಪಿಗಳು, ಅದರಿಂದ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು. ಆರೋಪಿಗಳ ಬಂಧನದ ವೇಳೆ ಅವರ ಬಳಿ ಆಭರಣ ಅಡ ಇರಿಸಿದ್ದ ರಸೀದಿಗಳು ದೊರೆತಿದ್ದು, ಅವುಗಳ ನೆರವಿನಿಂದ ಆಭರಣ ಜಪ್ತಿ ಸಾಧ್ಯವಾಯಿತು ಎಂದು ಅಧಿಕಾರಿ ಹೇಳಿದರು.

ಅವಿನಾಶ್‌ನನ್ನು “ಮಹಾರಾಜ್‌’ ಎಂದು ಕರೆಯುತ್ತಿದ್ದ ಆರೋಪಿಗಳು, ಜನರಿಗೂ ಹಾಗೇ ಪರಿಚಯ ಮಾಡಿಕೊಡುತ್ತಿದ್ದರು. “ಹುಬ್ಬಳ್ಳಿಯಲ್ಲಿ ಪರಿಚಯವಾಗಿದ್ದ ಅವಿನಾಶ್‌, ನಮ್ಮನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು. ಅವರ ನಿಖರ ವಿಳಾಸ ಗೊತ್ತಿಲ್ಲ’ ಎಂದು ಆರೋಪಿಗಳು ಹೇಳುತ್ತಾರೆ. ಈ ಗ್ಯಾಂಗ್‌ ನಗರದಲ್ಲಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಪ್ರಮುಖ ಆರೋಪಿ ಅವಿನಾಶ್‌ ಬಂಧನದ ಬಳಿಕ ಮತ್ತಷ್ಟು ವಂಚನೆಗಳು ಬಯಲಾಗುವ ಸಾಧ್ಯತೆಯಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next