Advertisement

ಗಣಪತಿ: ತನಿಖೆ ಸಿಬಿಐಗೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

06:20 AM Sep 06, 2017 | Harsha Rao |

ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಗೆ ಕಾರಣವಾಗಿದ್ದ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ಒಪ್ಪಿಸಿದೆ. 3 ತಿಂಗಳ ಒಳಗಾಗಿ ತನಿಖೆ ನಡೆಸಿ ಯಥಾಸ್ಥಿತಿ ವರದಿ ಸಲ್ಲಿಸಬೇಕು ಎಂದು ಕೋರ್ಟ್‌ ಹೇಳಿದೆ. ಪ್ರಕರಣದಲ್ಲಿ ಕೆಲವೊಂದು ಗಂಭೀರ ಅಂಶಗಳಿವೆ. ಹೀಗಾಗಿ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವುದು ಸೂಕ್ತ ಎಂದು ಪ್ರತಿಪಾದಿಸಿದೆ.

Advertisement

ಪ್ರಕರಣ ಸಂಬಂಧ ಕರ್ನಾಟಕ ಸರಕಾರ ಸಿಐಡಿ ತನಿಖೆ ನಡೆಸಿತ್ತು. ಹಾಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ (ಅಂದಿನ ಗೃಹ ಸಚಿವರು) ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದರು. ತನಿಖೆಯಲ್ಲಿ ಜಾರ್ಜ್‌ ಕ್ಲಿನ್‌ಚಿಟ್‌ ಪಡೆದುಕೊಂಡಿದ್ದರು. ಅಷ್ಟೇ ಅಲ್ಲ, ಆರೋಪ ಹೊತ್ತ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ, ಎ.ಎಂ. ಪ್ರಸಾದ್‌ ಅವರಿಗೂ ಕ್ಲೀನ್‌ಚಿಟ್‌ ನೀಡಿತ್ತು. ಅದನ್ನು ಪ್ರಶ್ನಿಸಿ ಗಣಪತಿ ತಂದೆ ಎಂ.ಕೆ. ಕುಶಾಲಪ್ಪ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎ.ಕೆ. ಗೋಯಲ್‌ ಮತ್ತು ಯು.ಯು. ಲಲಿತ್‌  ಒಳಗೊಂಡ ಪೀಠ ಮಂಗಳವಾರ ಈ ಆದೇಶ ನೀಡಿದೆ.

“ಡಿವೈಎಸ್‌ಪಿ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ತೀರ್ಮಾನವಾಗಬೇಕಾಗಿದೆ. ಹೀಗಾಗಿ 
ಅದನ್ನು ಕಂಡುಕೊಳ್ಳಲು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕಿದೆ. ಪ್ರಕರಣದಲ್ಲಿ ಕೆಲವು ಗುರುತರ ಅಂಶ ಗಳಿವೆ. ಡಿವೈಎಸ್‌ಪಿ ಮಟ್ಟದ ಅಧಿಕಾರಿ ಸಾಯುವುದಕ್ಕೆ ಮೊದಲು ಆಗಿನ ಗೃಹ ಸಚಿವರು, ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಪ್ರಬಲ ಆರೋಪ ಮಾಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಏನೋ ಇದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಅದರ ನಿಜಾಂಶ ಹೊರಬರಬೇಕು’ ಎಂದು ನ್ಯಾಯಪೀಠ  ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಯಾರನ್ನೂ ಹೊಣೆಗಾರ ರನ್ನಾಗಿ ಮಾಡಲು ಅಥವಾ ಸಾವು ಹೀಗೆಯೇ ಸಂಭವಿಸಿತು ಎಂದು ನಿರ್ಣಯಿಸಲಿಕ್ಕಾಗಲಿ ಅಥವಾ ಇಂಥವರೇ ತಪ್ಪಿತಸ್ಥರು ಎಂಬುದನ್ನು ನಿರ್ಧರಿಸಲು ಈ ಕ್ರಮವಲ್ಲ. ಜತೆಗೆ ಮೂರು ತಿಂಗಳ ಒಳಗಾಗಿ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಈ ಬಗ್ಗೆ ತನಿಖೆ ನಡೆಸಿ, ಯಥಾಸ್ಥಿತಿ ವರದಿ ಸಲ್ಲಿಸಬೇಕು ಎಂದು ಸೂಚ್ಯವಾಗಿ ತಿಳಿಸಿದೆ.

ಸಾರ್ವಜನಿಕ ಆಗ್ರಹ: ಪ್ರಕರಣದಲ್ಲಿ ಏನಾಯಿತು ಎನ್ನುವುದರ ಬಗ್ಗೆ ತಿಳಿಯಲು ಸಾರ್ವಜನಿಕರಲ್ಲಿ ಕುತೂಹಲವಿದೆ ಮತ್ತು ಅವರು ಈ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಪೊಲೀಸ್‌ ಅಧಿಕಾರಿಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಹೀಗಾಗಿಯೇ ನ್ಯಾಯಪೀಠ ಈ ನಿರ್ಧಾರಕ್ಕೆ ಬಂದಿದೆ ಎಂದು ಕೇಸನ್ನು ಸಿಬಿಐಗೆ ವಹಿಸುವ ಕಾರಣವನ್ನು ವಿವರಿಸಿದೆ.

Advertisement

ಕರ್ನಾಟಕ ಸರಕಾರ ವಿರೋಧ: ಇದಕ್ಕೂ ಮೊದಲು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಪ್ರಸ್ತಾವಕ್ಕೆ ಕರ್ನಾಟಕ ಸರಕಾರ ವಿರೋಧ ವ್ಯಕ್ತಪಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಪರವಾಗಿ ವಾದಿಸಿದ ಕೇಂದ್ರದ ಮಾಜಿ ಸಚಿವ, ಜನಪ್ರಿಯ ವಕೀಲ ಕಪಿಲ್‌ ಸಿಬಲ್‌ ಪಾರದರ್ಶಕವಾಗಿಯೇ ತನಿಖೆ ನಡೆಸಲಾಗಿದೆ. ಅದಕ್ಕೆ ಪುರಾವೆಯಾಗಿ ದಾಖಲೆಗಳನ್ನು ನೀಡಲು ಸರಕಾರ ಸಿದ್ಧವಿದೆ ಎಂದರು. ಸಿಬಿಐಗೆ ಪ್ರಕರಣ ವಹಿಸಿದರೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದವರು ವಾದಿಸಿದರು.

ಕೇಸಲ್ಲಿ ಆರೋಪಕ್ಕೆ ಗುರಿಯಾಗಿದ್ದ ಸಚಿವ ಕೆ.ಜೆ. ಜಾರ್ಜ್‌ ಪರ ಕಾಂಗ್ರೆಸ್‌ ವಕ್ತಾರ, ಜನಪ್ರಿಯ ವಕೀಲ ಡಾ| ಅಭಿಷೇಕ್‌ ಮನು ಸಿಂ Ì ವಾದ ಮಂಡಿಸಿ, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು. ಅದಕ್ಕೆ ಸಂಬಂಧಿಸಿ ಚಿಕಿತ್ಸೆ ಕೂಡ ಪಡೆದಿದ್ದರು. ವೀಡಿಯೋದಲ್ಲಿ ಉಲ್ಲೇಖೀಸಿದಂತೆ ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳು ಸುಳ್ಳು ಎಂದು ಸಿಂ Ì  ವಾದಿಸಿದ್ದಾರೆ.

ವೈಜ್ಞಾನಿಕ ವರದಿಯನ್ನೇ ಪಡೆದಿಲ್ಲ: ಗಣಪತಿ ತಂದೆ ಎಂ.ಕೆ. ಕುಶಾಲಪ್ಪ ಪರವಾಗಿ ವಾದಿಸಿದ ನ್ಯಾಯವಾದಿ ಜಯಂತ್‌ ಭೂಷಣ್‌, ಕರ್ನಾಟಕದ ಸಿಐಡಿ ವಿಧಿ ವಿಜ್ಞಾನ ವರದಿಗಳನ್ನು ಪರಿಗಣಿಸದೆ ತನಿಖೆ ಪೂರ್ತಿಗೊಳಿಸಿದೆ. ಹಾಲಿ ಸಚಿವ ಮತ್ತು ಗೃಹ ಖಾತೆ ಸಚಿವರಾಗಿರುವ ಕೆ.ಜೆ. ಜಾರ್ಜ್‌ ಮತ್ತು ಆರೋಪಕ್ಕೆ ಗುರಿಯಾಗಿರುವ ಇಬ್ಬರು ಹಿರಿಯ ಅಧಿಕಾರಿಗಳು ಇರುವಾಗ ರಾಜ್ಯ ತನಿಖಾ ಸಂಸ್ಥೆಯಿಂದ ನ್ಯಾಯಯುತ ತನಿಖೆ ಸಾಧ್ಯವಿಲ್ಲ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next