Advertisement

ಅಪೂರ್ವ ಅಭಿವ್ಯಕ್ತಿಯ ಗಣಪತಿ ಮದುವೆ

06:00 AM Sep 28, 2018 | |

ಲಕ್ಷ್ಮೀ ವೆಂಕಟರಮಣ ಯಕ್ಷಗಾನ ಕಲಾ ಸಂಘ ಶಂಕರಪ್ಪನಕೊಡ್ಲು ಕೆಂಚನೂರು ಸದಸ್ಯರು ಕೆಂಚನೂರು ಕಾಮುಕಟ್ಟೆಯಲ್ಲಿ ಪ್ರದರ್ಶಿಸಿದ ಗಣಪತಿ ಮದುವೆ (ಯೋಗಿನಿ ಕಲ್ಯಾಣ) ಯಕ್ಷಗಾನ ಪ್ರಸಂಗ ಅಪರೂಪದ ಅಭಿವ್ಯಕ್ತಿಗೆ ಸಾಕ್ಷಿಯಾಗಿತ್ತು. 

Advertisement

ಗಣಪತಿ ಮದುವೆ ಹಳೆಯ ಪೌರಾಣಿಕ ಪ್ರಸಂಗ. ವನ ಬೇಟೆಯ ಸಂದರ್ಭ ಕೃಷ್ಣನಿಗೆ ಕಾನನದಲ್ಲಿ ಸಿಗುವ ಶಿಶು, ಅದನ್ನು ಸಂತಾನವಿಲ್ಲದ ಅಣ್ಣ ಬಲರಾಮನಲ್ಲಿ ಸಾಕುವಂತೆ ಹೇಳುವುದು, ಬಲರಾಮ ನಿರಾಕರಿಸುವುದು ನಂತರ ನಾರದರಿಂದ ಶಿಶು ಹಿನ್ನೆಲೆ ಅರಿವಾದ ನಂತರ ಬಲರಾಮ ಮಗುವಿಗೆ ಯೋಗಿನಿ ಎಂದು ನಾಮಕರಣ ಮಾಡಿ ಪೋಷಿಸುವುದು ಇದು ಕಥೆಯ ಪೂರ್ವಾರ್ಧ. ಪ್ರಾಯ ಸಮರ್ಥಳಾದ ಯೋಗಿನಿಯನ್ನು ಕಾಶ್ಮೀರದ ಅಧಿಕಾರಿ ಕೌಂಡ್ಲಿಕನಿಗೆ ಮದುವೆ ಮಾಡುವ ಅಣ್ಣನ ತೀರ್ಮಾನಕ್ಕೆ ಅಸಮಾಧಾನಗೊಂಡ ಕೃಷ್ಣ ಸೋದರಿ ಪಾರ್ವತಿಯಲ್ಲಿ ಪುತ್ರ ಗಣಪತಿಗೆ ಯೋಗಿನಿಯನ್ನು ಮದುವೆ ಮಾಡಿಸಿಕೊಂಡು ಹೋಗುವಂತೆ ನಾರದರ ಮೂಲಕ ಸೂಚನೆ ನೀಡುವುದು. ಅದರಂತೆ ಪಾರ್ವತಿ ಗಣಗಳೊಂದಿಗೆ ದಿಬ್ಬಣಿಗರಾಗಿ ದ್ವಾರಕೆಗೆ ಬರುವುದು, ಪಾರ್ವತಿಯ ಮನವಿಗೆ ಸ್ಪಂದಿಸದ ಬಲರಾಮ ಕೆರಳಿ ಕುಪಿತನಾದಾಗ ನಡೆಯುವ ಸಮರ, ವೀರಗಸೆಯೊಂದಿಗೆ ಪಾರ್ವತಿಯೇ ಯುದ್ಧನ್ಮುಖೀಯಾಗುವುದು, ನಂತರ ಶಿವನೇ ರಣಕ್ಷೇತ್ರಕ್ಕೆ ಬಂದು ಕೌಂಡ್ಲಿಕಾದಿಗಳ ಸಂಹಾರ ಮಾಡಿ, ಗಣಪತಿಗೆ ಮದುವೆ ಮಾಡಿಸುವುದು ಕಥಾವಸ್ತು. 

ಇಡೀ ಪ್ರಸಂಗದುದ್ದಕ್ಕೂ ಕಾಣಿಸಿಕೊಳ್ಳುವ ಬಲರಾಮನ ಪಾತ್ರದಲ್ಲಿ ಪ್ರವೀಣ ಎಂ. ತನ್ನ ಅನುಭವವನ್ನು ಧಾರೆ ಎರೆದಿದ್ದಾರೆ. ಪಾರ್ವತಿಯಾಗಿ ಪ್ರವೀಣ ಶೆಟ್ಟಿ ಚುರುಕಾದ ಅಭಿನಯದ ಮೂಲಕ ಗಮನ ಸಳೆದಿದ್ದಾರೆ. ಪ್ರಾರಂಭದ ಪ್ರವೇಶ ಸಹಜವಾಗಿದ್ದರೂ ಕೂಡಲೆ ವೀರಗಸೆಯ ಪ್ರವೇಶ ದುರ್ಗೆಯೇ ಆಹಾವನೆ ಆದಂತೆ ಧೂಳೆಬ್ಬಿಸಿದ್ದಾರೆ. ಕೌಂಡ್ಲಿಕನಾಗಿ ಎತ್ತರ ಕಾಯದ ಕಿರಣ ಚೆನ್ನಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಕೃಷ್ಣನಾಗಿ ರಂಜಿತ್‌ ಉತ್ತಮ ಅಭಿನಯ ನೀಡಿ, ನೃತ್ಯದಲ್ಲಿಯೂ ಸೋದರಿ ಪಾರ್ವತಿ ಶೌರ್ಯ ಕೊಂಡಾಡುವ ಸನ್ನಿವೇಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಈಶ್ವರನಾಗಿ ನವೀನ ಜಾಡಿ ಸಾಂಪ್ರದಾಯಿಕ ಶಿವನ ವೇಷದಿಂದ ಗಮನ ಸೆಳೆದರೆ, ದೂತನ ಪಾತ್ರದಲ್ಲಿ ಸತೀಶ ಕಂಬಳಗದ್ದೆ ಹಾಸ್ಯದ ಹೊನಲನ್ನೇ ಹರಿಸಿದ್ದಾರೆ. ಕೃಷ್ಣ-ಬಲರಾಮರ ನಡುವಿನ ಸಂಭಾಷಣೆಯ ಸಂದರ್ಭ ನಡುವೆ ಸತೀಶರ ಮಗುವಿನ ಮುದ್ದಾಡುವ ಹಾಸ್ಯ ಚೆನ್ನಾಗಿ ಮೂಡಿ ಬಂದಿದೆ. ನಾರದನಾಗಿ ಉಮೇಶ ಆಚಾರ್‌, ಗಣಪತಿಯಾಗಿ ಮಣಿಕಂಠ, ನಂದಿಯಾಗಿ ಕುಶ, ಯೋಗಿನಿಯಾಗಿ ಉಮೇಶ, ಬಾಲಗೋಪಾಲನಾಗಿ ರಮ್ಯಾ ಅವರು ಅವಕಾಶ ಸದ್ಬಳಕೆ ಮಾಡಿಕೊಂಡಿದ್ದಾರೆ. ಹಿಮ್ಮೇಳದಲ್ಲಿ ನವೀನ್‌ ಕೋಟ ಅವರ ಸುಶ್ರಾವ್ಯ ಕಂಠದ ಭಾಗವತಿಗೆ ಇಡೀ ಪ್ರಸಂಗ ಯಶಸ್ಸಿನ ಹಿನ್ನೆಲೆ. ಮದ್ದಳೆಯಲ್ಲಿ ಪ್ರಭಾಕರ್‌ ಆಚಾರ್‌, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಕನ್ಯಾನ ಉತ್ತಮ ಸಾಥ್‌ ನೀಡಿದ್ದಾರೆ. 

ನಾಗರಾಜ್‌ ವಂಡ್ಸೆ 

Advertisement

Udayavani is now on Telegram. Click here to join our channel and stay updated with the latest news.

Next